SOCIAL MEDIA

Newsletter

PARTNER SITES
Select Language Select State

ಮುನಿಯಪ್ಪ ಮನೆಗೆ ಹೋದರೆ ಒಂದು ಲೋಟ ನೀರು ಕೊಡಲ್ಲ: ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ!

ಕೆ.ಎಚ್. ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಹಿರಿಯ ರಾಜಕಾರಣಿಗಳಾಗಿದ್ದಾರೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ದಲಿತ ಸಮುದಾಯದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರನ್ನು ಭೇಟಿ ಮಾಡಬೇಕು ಎಂಬುದನ್ನೇ ಮರೆತುಹೋಗಿದ್ದಾರೆ.

Reported By Manjunath Naragund Written By Manjunath Naragund
Published: Oct 27, 2026, 04:56 PM IST | Updated: Oct 27, 2026, 05:00 PM IST
Image Credit: Nisarga Narayanaswamy
Join

ದೇವನಹಳ್ಳಿ: ರಾಜ್ಯ ಸರ್ಕಾರದ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ದೇವನಹಳ್ಳಿಯ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾರ್ಯವೈಖರಿ ಹಾಗೂ ದಲಿತ ಸಮುದಾಯದ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮುನಿಯಪ್ಪ ಅವರ ವಿರುದ್ಧ ದಾಖಲೆ ಸಮೇತ ಮಾತನಾಡುವುದಾಗಿ ಸವಾಲು ಹಾಕಿದ್ದಾರೆ.

ದೇವನಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ, "ಕೆ.ಎಚ್. ಮುನಿಯಪ್ಪ ಅವರ ಮನೆಗೆ ಹೋದರೆ ಕನಿಷ್ಠ ಒಂದು ಲೋಟ ನೀರು ಕೂಡ ಕೊಡುವುದಿಲ್ಲ, ಅಷ್ಟೇ ಅಲ್ಲದೆ ಬಂದವರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ. ಭಿಕ್ಷುಕರು ಕೂಡ ದಾನಿ ಮನೆಗೆ ಹೋಗುತ್ತಾರೆ, ಆದರೆ ಈ ಹಿರಿಯ ನಾಯಕರ ಬಳಿ ಹೋದರೆ ನಿರಾಶೆಯಷ್ಟೇ ಸಿಗುತ್ತದೆ" ಎಂದು ತೀವ್ರವಾಗಿ ಹರಿಹಾಯ್ದಿದ್ದಾರೆ.

ಕೆ.ಎಚ್. ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಹಿರಿಯ ರಾಜಕಾರಣಿಗಳಾಗಿದ್ದಾರೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ದಲಿತ ಸಮುದಾಯದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರನ್ನು ಭೇಟಿ ಮಾಡಬೇಕು ಎಂಬುದನ್ನೇ ಮರೆತುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಮುನಿಯಪ್ಪನವರು ಜನರಿಂದ ದೂರ ಉಳಿದು, ಜನರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ದೂರಿದರು.

ದೇವನಹಳ್ಳಿ ಕ್ಷೇತ್ರದಲ್ಲಿ ಮುನಿಯಪ್ಪನವರ ಅಭಿವೃದ್ಧಿ ಎಂದರೆ ಅದು ಕೇವಲ ಇದ್ದ ರೇಷನ್ ಕಾರ್ಡ್‌ಗಳನ್ನು ಕ್ಯಾನ್ಸಲ್ ಮಾಡುವುದಷ್ಟೇ ಆಗಿದೆ ಎಂದು ವ್ಯಂಗ್ಯವಾಡಿದ ಅವರು, ಈ ಎಲ್ಲ ವಿಚಾರಗಳನ್ನೂ ತಾನು ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಮತ್ತೊಮ್ಮೆ ಉನ್ನತ ಸ್ಥಾನಮಾನ ನೀಡಲಾಗಿದೆ, ಆದರೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ರಿಂದ 40 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ದುರ್ಬಳಕೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಇಷ್ಟೊಂದು ಅಕ್ರಮಗಳು ನಡೆಯುತ್ತಿದ್ದರೂ ಅದರ ಬಗ್ಗೆ ಧ್ವನಿ ಎತ್ತುವ ಯೋಗ್ಯತೆ ಇಲ್ಲದ ಅಂತಹ ಸಚಿವ ಸ್ಥಾನ ನಿಜಕ್ಕೂ ಬೇಕಿತ್ತೇ? ಮುನಿಯಪ್ಪನವರು ನಿಜಕ್ಕೂ ನಿಷ್ಠಾವಂತರು ಮತ್ತು ಪ್ರಾಮಾಣಿಕರಾಗಿದ್ದರೆ, ಈ ಸಚಿವ ಸ್ಥಾನ ಬೇಡ ಎಂದು ರಾಜೀನಾಮೆ ನೀಡಿ ಹೊರಬರಬೇಕಿತ್ತು ಎಂದು ನಿಸರ್ಗ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ. ಹಿರಿಯ ನಾಯಕರೊಬ್ಬರ ವಿರುದ್ಧ ಪಕ್ಷದ ಮುಖಂಡರಲ್ಲೇ ಬಹಿರಂಗವಾಗಿ ಕೇಳಿಬಂದಿರುವ ಈ ತೀವ್ರ ಟೀಕೆಯು ದೇವನಹಳ್ಳಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES