SOCIAL MEDIA

Newsletter

PARTNER SITES
Select Language Select State

ಹಾಸನ ರಾಜಕಾರಣದಲ್ಲಿ ಭ್ರಷ್ಟಾಚಾರದ ಬಿರುಗಾಳಿ : ಹೆಚ್‌ಡಿಕೆ ಸ್ಫೋಟಕ ಆರೋಪ, ಶಿವಲಿಂಗೇಗೌಡ ತಿರುಗೇಟು!

ಕಡತ ವಿಲೇವಾರಿ ಹಾಗೂ ವರ್ಗಾವಣೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವಾಟ್ಸಾಪ್ ಚಾಟ್ ದಾಖಲೆಗಳ ಸಹಿತ ಗಂಭೀರ ಆರೋಪಗಳನ್ನು ಮಾಡಿದ್ದರೆ, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರು ತಿರುಗೇಟು ನೀಡಿ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ...

Written By Krishna NK
Published: Nov 08, 2026, 18:38 IST | Updated: Nov 08, 2026, 18:40 IST
Image Credit: HD Kumaraswamy
Join

ಹಾಸನ : ಹಾಸನಾಂಬೆ ದರ್ಶನೋತ್ಸವದ ಸಂಭ್ರಮದ ನಡುವೆಯೇ ಹಾಸನ ರಾಜಕಾರಣದಲ್ಲಿ ಭ್ರಷ್ಟಾಚಾರದ ಬಿರುಗಾಳಿಯೇ ಎದ್ದಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲ್ಲು ಗಣಿಗಾರಿಕೆ ಹಾಗೂ ವಸತಿ ಬಡಾವಣೆಗಳ ಕಡತ ವಿಲೇವಾರಿಗೆ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ.. ಅಷ್ಟೇ ಅಲ್ಲ, ಜಿಲ್ಲಾಧಿಕಾರಿ ವರ್ಗಾವಣೆ ತಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಲಾಗಿದೆ ಎಂಬ ಸ್ಫೋಟಕ ಆರೋಪವನ್ನೂ ಮಾಡಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿದ ವಾಟ್ಸಾಪ್ ಚಾಟ್ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಇತ್ತ ಈ ಆರೋಪಗಳಿಂದ ತೀವ್ರವಾಗಿ ನೊಂದಿರುವ ಸಚಿವ ಶಿವಲಿಂಗೇಗೌಡ, ಧಾರ್ಮಿಕ ಕಾರ್ಯಕ್ರಮದಲ್ಲಿ ಕೀಳುಮಟ್ಟದ ರಾಜಕಾರಣ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ. ದೇವಿಯ ಪಾದದ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಭಾವುಕರಾಗಿದ್ದಾರೆ.. ಹಾಗಾದರೆ ಹೆಚ್‌ಡಿಕೆ ಬಿಡುಗಡೆ ಮಾಡಿದ ದಾಖಲೆಗಳಲ್ಲೇನಿದೆ? ಸಚಿವರು ಕೊಟ್ಟ ತಿರುಗೇಟು ಏನು? ಈ ಕುರಿತ ವರದಿ ಇಲ್ಲಿದೆ..

ಹಾಸನಾಂಬೆ ದರ್ಶನ ಪಡೆದು ಹೊರಬಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾಡಳಿತದ ವಿರುದ್ಧ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮೂರು ಕಡೆ ಕಲ್ಲು ಗಣಿಗಾರಿಕೆ ಹಾಗೂ ಸಕಲೇಶಪುರದಲ್ಲಿ ವಸತಿ ಬಡಾವಣೆಗೆ ಭೂ ಪರಿವರ್ತನೆ ಮಾಡಿಕೊಡಲು ಜಿಲ್ಲಾಧಿಕಾರಿ ಕಚೇರಿಯಿಂದ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಮತ್ತು ಮಧ್ಯವರ್ತಿಯ ನಡುವೆ ನಡೆದಿರುವ ವಾಟ್ಸಾಪ್ ಸಂದೇಶಗಳ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಒಂದೊಂದು ಕಡತ ವಿಲೇವಾರಿಗೆ ಇಂತಿಷ್ಟು ಹಣ ನೀಡಬೇಕು, 60 ಲಕ್ಷ ರೂಪಾಯಿ ಲಂಚದ ಪೈಕಿ 50 ಲಕ್ಷ ಜಿಲ್ಲಾಧಿಕಾರಿಗೆ ನೀಡಬೇಕು, ಉಳಿದ ಹಣವನ್ನು ಇತರ ಸಿಬ್ಬಂದಿಗೆ ಹಂಚಬೇಕು ಎಂಬ ಮಾತುಕತೆ ಚಾಟ್‌ಗಳಲ್ಲಿದೆ ಎಂದು ಹೇಳಿದ್ದಾರೆ. ಹಾಸನ ಎಸಿ ಜಗದೀಶ್ ಅವರಿಗೆ 22 ಲಕ್ಷ, ತಹಶೀಲ್ದಾರ್ ಗೀತಾ ಅವರಿಗೆ 13 ಲಕ್ಷ ರೂಪಾಯಿ ಲಂಚ ನೀಡಿರುವ ಉಲ್ಲೇಖವೂ ಇದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ವರ್ಗಾವಣೆ ತಡೆಯಲು ಸಚಿವ ಕೆ.ಎಂ. ಶಿವಲಿಂಗೇಗೌಡರಿಗೆ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ಮೂಲಕ 75 ಲಕ್ಷ ರೂಪಾಯಿ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಈ ಎಲ್ಲಾ ಆರೋಪಗಳ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಬೇಕು, ಪೊಲೀಸ್ ಮಹಾನಿರ್ದೇಶಕರು ಸಂಬಂಧಪಟ್ಟ ಮೊಬೈಲ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕೇಂದ್ರ ಸಚಿವರ ಈ ಗಂಭೀರ ಆರೋಪ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರನ್ನು ಕೆರಳಿಸಿದೆ. ಹಾಸನದಲ್ಲಿ ನಡೆದ ಧಾರ್ಮಿಕ ಸಮಾರಂಭದ ವೇದಿಕೆಯಲ್ಲೇ ಹೆಚ್‌ಡಿಕೆ ಆರೋಪಗಳಿಗೆ ತಿರುಗೇಟು ನೀಡಿದ ಸಚಿವರು, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಮನೆಗೂ ಹೋಗದೆ ಹಗಲು ರಾತ್ರಿ ಎನ್ನದೆ ಹಾಸನಾಂಬೆ ದರ್ಶನೋತ್ಸವದ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ನನಗೆ ಜವಾಬ್ದಾರಿ ನೀಡಿದ್ದಾರೆ. ಅವರಿಗೆ ಒಳ್ಳೆಯ ಹೆಸರು ಬರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಸದರನ್ನೂ ಜೊತೆಯಲ್ಲಿ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿರುವುದು ನನ್ನ ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಭಾವುಕರಾಗಿ ಹೇಳಿದ್ದಾರೆ..

ಒಂದೆಡೆ ವಾಟ್ಸಾಪ್ ಚಾಟ್ ದಾಖಲೆಗಳನ್ನು ಮುಂದಿಟ್ಟುಕೊಂಡು ಹೆಚ್.ಡಿ. ಕುಮಾರಸ್ವಾಮಿ ತನಿಖೆಗೆ ಒತ್ತಾಯಿಸಿದ್ದರೆ, ಮತ್ತೊಂದೆಡೆ ಸಚಿವರು ಆರೋಪಗಳನ್ನು ಖಂಡಿಸಿ ತೀವ್ರ ತಿರುಗೇಟು ನೀಡಿದ್ದಾರೆ. ಹೀಗಾಗಿ ಹಾಸನಾಂಬೆ ದರ್ಶನೋತ್ಸವದ ನಡುವೆಯೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪಗಳು ಹೊಸ ಸಂಚಲನ ಮೂಡಿಸಿವೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದ್ದು, ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES