ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಇದೀಗ ಬಿಗ್ ಶಾಕ್ ಕಾದಿದೆ. ಮನೆ -ಮನೆ ಸಮೀಕ್ಷೆಯಲ್ಲಿ ಭಾಗವಹಿಸದ ಸುಮಾರು 1.70 ಲಕ್ಷ ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳಲಿದೆ. ಗೃಹಜ್ಯೋತಿ ಯೋಜನೆಯ ದುರ್ಬಳಕೆ ತಡೆಯಲು ಇಂಧನ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸದ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ಇಷ್ಟು ದಿನ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಸಾವಿರಾರು ಕುಟುಂಬಗಳಿಗೆ ಆತಂಕ ಎದುರಾಗಿದೆ.
ಸಮೀಕ್ಷೆಯಲ್ಲಿ ಭಾಗಿಯಾಗದವರಿಗೆ ಗೇಟ್ ಪಾಸ್?
ಗೃಹಜ್ಯೋತಿ ಯೋಜನೆಯಡಿ ಅರ್ಹ ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಆದರೆ, ಈ ಯೋಜನೆಯ ಸೌಲಭ್ಯವನ್ನು ಕೆಲವರು ದುರುಪಯೋಗ ಪಡೆಸಿಕೊಳ್ಳುತ್ತಿರುವ ಆರೋಪಗಳು ಕೇಳಿಬಂದಿದ್ದವು. ಮನೆಗಳ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು, ಅಂಗಡಿ ಹಾಗೂ ಬಾಡಿಗೆ ಮಳಿಗೆಗಳಿಗೆ ಗೃಹಜ್ಯೋತಿ ಸೌಲಭ್ಯ ಪಡೆಯುವುದು ಸೇರಿದಂತೆ ಹಲವು ರೀತಿಯ ಅಕ್ರಮಗಳ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಇಂಧನ ಇಲಾಖೆ ಮುಂದಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಮನೆ-ಮನೆ ಸಮೀಕ್ಷೆ ನಡೆಸಲಾಗಿದ್ದು, ಗ್ರಾಹಕರು ನಿಜವಾಗಿಯೂ ವಸತಿ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಬಳಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗಿದೆ.
ಈ ಸಮೀಕ್ಷೆಯಲ್ಲಿ ಭಾಗವಹಿಸದ ಸುಮಾರು 1.70 ಲಕ್ಷ ಗ್ರಾಹಕರನ್ನು ಯೋಜನೆ ಇಂದ ಕೈ ಬಿಡುವ ನಿರ್ಧಾರಕ್ಕೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಸಮೀಕ್ಷೆಯಿಂದ ಹೊರಗೆ ಉಳಿದ ಗ್ರಾಹಕರಿಗೆ ಇನ್ನು ಮುಂದೆ ಉಚಿತ ವಿದ್ಯುತ್ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲೇ 1.42 ಲಕ್ಷ ಜನ ಹೊರಕ್ಕೆ:-
ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲೇ ಸುಮಾರು 1.42 ಲಕ್ಷ ಗ್ರಾಹಕರು ಸಮೀಕ್ಷೆಯನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ. ಸಮೀಕ್ಷೆಯಲ್ಲಿ ಗ್ರಾಹಕರ ವಿದ್ಯುತ್ ಬಳಕೆಯ ಉದ್ದೇಶ, ಮನೆಗಳ ಸ್ವರೂಪ ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸಲಾಗಿದೆ. ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚುವುದು ಇಲಾಖೆಯ ಪ್ರಮುಖ ಉದ್ದೇಶವಾಗಿದೆ.
ಗೃಹಜ್ಯೋತಿ ಯೋಜನೆಯಡಿ ವಸತಿ ಬಳಕೆಗೆ ನೀಡಲಾಗುವ ಉಚಿತ ವಿದ್ಯುತ್ ಸೌಲಭ್ಯವನ್ನು ಕೆಲವು ಕಡೆ ಪೆಟ್ಟಿಗೆ ಅಂಗಡಿಗಳು, ಬಾಡಿಗೆ ಮಳಿಗೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಸಾಧ್ಯತೆಗಳ ಬಗ್ಗೆ ಇಲಾಖೆ ಗಮನ ಹರಿಸಿದೆ. ಇದರ ಜೊತೆಗೆ ಗ್ರಾಹಕರ ಆದಾಯ ತೆರಿಗೆ, ಐಟಿ ರಿಟರ್ನ್ಸ್ ಸಲ್ಲಿಕೆ ಹಾಗೂ ಜಿಎಸ್‌ಟಿ ನೋಂದಣಿ ಮಾಹಿತಿಯನ್ನೂ ಪರಿಶೀಲಿಸುವ ಮೂಲಕ ಯೋಜನೆಯ ಅರ್ಹತೆಯನ್ನು ದೃಢಪಡಿಸುವ ಪ್ರಯತ್ನ ನಡೆದಿದೆ.
ರಾಜ್ಯದಲ್ಲಿ ಒಟ್ಟು 1.65 ಕೋಟಿ ಫಲಾನುಭವಿಗಳು!
ರಾಜ್ಯದಲ್ಲಿ ಪ್ರಸ್ತುತ ಸುಮಾರು 1.65 ಕೋಟಿ ಗ್ರಾಹಕರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಆದರೆ, ಯೋಜನೆಯ ಪ್ರಯೋಜನ ನಿಜವಾದ ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಸಮೀಕ್ಷೆ ನಡೆಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸದ ಗ್ರಾಹಕರಿಗೆ ಉಚಿತ ವಿದ್ಯುತ್ ಸ್ಥಗಿತಗೊಳಿಸುವ ಕ್ರಮ ಜಾರಿಗೆ ಬಂದರೆ, ಮುಂದಿನ ದಿನಗಳಲ್ಲಿ ಅವರು ಸಾಮಾನ್ಯ ವಿದ್ಯುತ್ ಬಿಲ್ ಪಾವತಿಸಬೇಕಾಗಬಹುದು. ಇದರಿಂದ ಕುಟುಂಬಗಳ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಗೃಹಜ್ಯೋತಿ ಯೋಜನೆಯ ಅಕ್ರಮ ಬಳಕೆಗೆ ಕಡಿವಾಣ ಹಾಕಲು ಇಂಧನ ಇಲಾಖೆ ನಡೆಸಿದ ಸಮೀಕ್ಷೆ ಇದೀಗ ಸಾವಿರಾರು ಗ್ರಾಹಕರಿಗೆ ಆತಂಕ ತಂದಿದೆ. ಸಮೀಕ್ಷೆಯಲ್ಲಿ ಭಾಗವಹಿಸದ 1.70 ಲಕ್ಷ ಗ್ರಾಹಕರಿಗೆ ನಿಜವಾಗಿಯೂ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳುತ್ತದೆಯೇ? ಸರ್ಕಾರ ಈ ಬಗ್ಗೆ ಯಾವ ಅಂತಿಮ ನಿರ್ಧಾರ ಕೈಗೊಳ್ಳಲಿದೆ? ಎಂಬುದನ್ನು ಕಾದು ನೋಡಬೇಕಿದೆ.