Dr. Mukhyamantri Chandru on at DKshi: ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಯಾವುದೇ ವಿಶೇಷ ಸೌಲಭ್ಯಗಳಲ್ಲ, ತಮ್ಮ ಹಕ್ಕು ಮತ್ತು ಶ್ರಮಕ್ಕೆ ತಕ್ಕ ಕೂಲಿ ಮಾತ್ರ. ಹಗಲಿರುಳು ಜನರ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರದ ಧೋರಣೆ ನಾಚಿಕೆಗೇಡಿನ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಪಕ್ಷದ ಸಂಪೂರ್ಣ ಬೆಂಬಲ ಘೋಷಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಯೊಂದಕ್ಕೂ 'ದುಡ್ಡಿಲ್ಲ, ಆಗುವುದಿಲ್ಲ' ಎಂಬ ಒಂದೇ ಉತ್ತರ. ನಿಜಕ್ಕೂ ನಿಮ್ಮದು ಬಂಡೆಯ ಹೃದಯವಲ್ಲ, ಮಾನವೀಯತೆಯೇ ಇಲ್ಲದ ಕಲ್ಲುಬಂಡೆ! ಬೆಂಗಳೂರು ಹಬ್ಬಕ್ಕೆ ₹20 ಕೋಟಿ ಖರ್ಚು ಮಾಡಲು ಹಣವಿದೆ. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ, ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಹುದ್ದೆ ನೀಡಿ ನೂರಾರು, ಸಾವಿರಾರು ಕೋಟಿ ಖರ್ಚು ಮಾಡಲು ಹಣವಿದೆ. ಭಾರತ್ ಜೋಡೋ ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಲು, ನಾಲ್ಕೂವರೆ ಸಾವಿರ ಬಸ್‌ಗಳ ಖರೀದಿಗೆ ₹8,000 ಕೋಟಿ ಒದಗಿಸಲು ಹಣವಿದೆ. ಆದರೆ ದುಡಿಯುವ ಮಹಿಳೆಯರಿಗೆ ನ್ಯಾಯ ಕೊಡಲು ಮಾತ್ರ ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಆರೋಗ್ಯ ಇಲಾಖೆಗೆ ₹17,500 ಕೋಟಿ ಅನುದಾನವಿರುವಾಗ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಅಗತ್ಯವಿರುವ ₹4,000 ಕೋಟಿ ಒದಗಿಸಲಾಗುವುದಿಲ್ಲವೇ? ನೆರೆಯ ಕೇರಳದಲ್ಲಿ ತಮ್ಮದೇ ಪಕ್ಷದ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ₹12,000 ನೀಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ರೀತಿಯ ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ₹10,000 ನೀಡುವುದಾಗಿ ವೇದಿಕೆಯಲ್ಲೇ ಭರವಸೆ ನೀಡಿದ್ದರು. ಇಂದು ಅವರೇ ಮೌನವಾಗಿರುವುದೇಕೆ? ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಸೋಲಿಸಿಯೇ ತೀರುತ್ತೇನೆ ಎಂದು ಹೇಳುವ ಧೈರ್ಯ ಸಿದ್ದರಾಮಯ್ಯನವರಿಗೆ ಇದೆಯೇ ಎಂದು ಸವಾಲು ಹಾಕಿದರು.
ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಮಾವಶೇಷ ಮಾಡುವ ನಿರ್ಧಾರಕ್ಕೆ ಈ ಮಹಿಳೆಯರು ಬಂದರೆ ನಿಮ್ಮ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದನ್ನು ಸರ್ಕಾರ ಅರಿಯಲಿ.
ಮಹಿಳೆಯರ ಕನಿಷ್ಠ ಹಕ್ಕು, ಗೌರವ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲೂ ವಿಫಲವಾಗಿರುವ ಈ ಅಮಾನವೀಯ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಬೇಕಿದೆ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರುವವರೆಗೂ ಆಮ್ ಆದ್ಮಿ ಪಕ್ಷ ಅವರೊಂದಿಗೆ ನಿರಂತರವಾಗಿ ನಿಲ್ಲಲಿದೆ ಎಂದು ಡಾ. ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಡಾಕ್ಟರ್ ಸತೀಶ್ ಕುಮಾರ್, ಶಶಿಧರ್ ಆರಾಧ್ಯ ,ಉಷಾ ಮೋಹನ್, ಜಗದೀಶ್ ಚಂದ್ರ, ಪುಟ್ಟಣ್ಣಗೌಡ ,ಪುಷ್ಪ ಕೇಶವ್, ಆಯುಬ್ ಖಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.