ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಎಷ್ಟು, ರಾಜ್ಯದಿಂದ ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ!
ಕಳೆದ 12 ದಿನಗಳಿಂದ ಆಶಾ ಕಾರ್ಯಕರ್ತೆಯರು ರಾಜಧಾನಿಯಲ್ಲಿ ಬೀಡು ಬಿಟ್ಟು ಉಗ್ರ ಹೋರಾಟ ಮಾಡುತ್ತಿದ್ದಾರೆ. ಇದರ ನಡುವೆ ಅವರ ಸಂಬಳ ವಿಚಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ಇರುವ ಸಂಬಳ ಎಷ್ಟು..? ಕೇಂದ್ರ ಮತ್ತು ರಾಜ್ಯ ಸರ್ಕಾರು ನೀಡುವ ಗೌರವಧನ ಎಷ್ಟು ಬನ್ನಿ ನೋಡೋಣ..
ಬೆಂಗಳೂರು: ಆಶಾ ಕಾರ್ಯಕರ್ತೆಯರು ತಮ್ಮ ಬದುಕಿನ ಭದ್ರತೆ ಮತ್ತು ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಮತ್ತೆ ಬೀದಿಗಿಳಿದಿದ್ದಾರೆ. ಕಳೆದ ಕೆಲವು 12 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಬಂದಿರುವ ಸಾವಿರಾರು ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ಸುಮಾರು 17 ವರ್ಷಗಳಿಂದ ಹಳ್ಳಿಗಳಿಂದ ನಗರದವರೆಗೆ ಜನರ ಆರೋಗ್ಯ ಕಾಪಾಡಲು ದುಡಿಯುತ್ತಿದ್ದರೂ, ತಮಗೆ ಇನ್ನೂ ಖಾಯಂ ಉದ್ಯೋಗದ ಭದ್ರತೆ ಮತ್ತು ಸಮರ್ಪಕ ವೇತನ ಸಿಗುತ್ತಿಲ್ಲ ಎನ್ನುವುದು ಕಾರ್ಯಕರ್ತೆಯರ ಅಳಲಾಗಿದೆ. ತಿಂಗಳಿಗೆ ಕನಿಷ್ಠ 15 ಸಾವಿರ ರೂಪಾಯಿ ನಿಗದಿತ ಗೌರವಧನ ನೀಡಬೇಕು, ಹೆರಿಗೆ ರಜೆ, ಮೊಬೈಲ್ ಭತ್ಯೆ, ನಿವೃತ್ತಿ ಸೌಲಭ್ಯ ಹಾಗೂ ಬಾಕಿ ಇರುವ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.
ಯಾರು ಎಷ್ಟು ಗೌರವಧನ ಕೊಡ್ತಾರೆ?
ಆಶಾ ಕಾರ್ಯಕರ್ತೆಯರ ಸಂಘದ ಮಾಹಿತಿ ಪ್ರಕಾರ, ಸದ್ಯ ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ತಿಂಗಳಿಗೆ 5 ಸಾವಿರ ರೂಪಾಯಿ ಗೌರವಧನ ಸಿಗುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದಿಂದ ವಿವಿಧ ಆರೋಗ್ಯ ಕಾರ್ಯಕ್ರಮಗಳಿಗಾಗಿ ತಿಂಗಳಿಗೆ ಸುಮಾರು 3 ಸಾವಿರದಿಂದ 3,500 ರೂಪಾಯಿವರೆಗೆ ಪ್ರೋತ್ಸಾಹಧನ ಬರುತ್ತದೆ. ಹೆರಿಗೆ, ಲಸಿಕೆ ಅಭಿಯಾನ, ಕ್ಷಯರೋಗ ನಿಯಂತ್ರಣದಂತಹ ನಿರ್ದಿಷ್ಟ ಕೆಲಸಗಳನ್ನು ಪೂರೈಸಿದಾಗ ಹೆಚ್ಚುವರಿ ಹಣವೂ ಸೇರುತ್ತದೆ. ಒಟ್ಟಾರೆಯಾಗಿ ರಾಜ್ಯ ಮತ್ತು ಕೇಂದ್ರ ಸೇರಿ ಸರಾಸರಿ 8 ಸಾವಿರ ರೂಪಾಯಿಯಷ್ಟು ಹಣ ಕೈಸೇರುತ್ತಿದೆ ಎನ್ನಲಾಗಿದೆ.
ಆದರೆ, ನೆರೆಯ ಮತ್ತು ಇತರ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿಗುತ್ತಿರುವ ಮೊತ್ತ ಕಡಿಮೆ ಎಂಬುದು ಪ್ರತಿಭಟನಾಕಾರರ ವಾದ. ಆಂಧ್ರಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಸೇರಿ 10 ಸಾವಿರ ರೂಪಾಯಿ ಸಿಗುತ್ತಿದ್ದರೆ, ಕೇರಳದಲ್ಲಿ ರಾಜ್ಯ ಸರ್ಕಾರವೇ 12 ಸಾವಿರ ರೂಪಾಯಿ ಗೌರವಧನ ನೀಡಿ ಜೊತೆಗೆ ಕೆಲಸಕ್ಕೆ ತಕ್ಕ ಪ್ರೋತ್ಸಾಹಧನ ನೀಡುತ್ತಿದೆ. ಹರಿಯಾಣದಲ್ಲಿ ಕೇಂದ್ರ ಮತ್ತು ರಾಜ್ಯ ಸೇರಿ 15 ಸಾವಿರ ರೂಪಾಯಿ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲೂ ರಾಜ್ಯ ಸರ್ಕಾರವೇ 11,250 ರೂಪಾಯಿ ಗೌರವಧನದ ಜೊತೆಗೆ ಪ್ರೋತ್ಸಾಹಧನ ಕೊಡುತ್ತಿದೆ. ಹೀಗಾಗಿ ತಮ್ಮ ರಾಜ್ಯದಲ್ಲೂ 15 ಸಾವಿರ ರೂಪಾಯಿ ನಿಗದಿ ಮಾಡಬೇಕು ಎಂಬುದು ಅವರ ಒತ್ತಾಯ. 2023ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಭರವಸೆಯನ್ನೂ ಕಾರ್ಯಕರ್ತೆಯರು ಈಗ ನೆನಪಿಸುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರ ಪಾತ್ರವೇನು?
ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ 2005ರಲ್ಲಿ ಆರಂಭವಾದ ಈ ವ್ಯವಸ್ಥೆಯಲ್ಲಿ, ಸ್ಥಳೀಯ ಮಹಿಳೆಯರನ್ನೇ ಸಮುದಾಯದಿಂದ ಗುರುತಿಸಿ ಆಶಾ ಕಾರ್ಯಕರ್ತೆಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇವರು ಜನರು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ.
ಒಬ್ಬ ಆಶಾ ಕಾರ್ಯಕರ್ತೆ ಸಾಮಾನ್ಯವಾಗಿ 250ರಿಂದ 300 ಕುಟುಂಬಗಳ ಸಂಪರ್ಕದಲ್ಲಿರುತ್ತಾರೆ. ಮನೆಮನೆಗೆ ಹೋಗಿ ಆರೋಗ್ಯದ ಸ್ಥಿತಿಗತಿ ವಿಚಾರಿಸುವುದು, ಗರ್ಭಿಣಿಯರ ಆರೈಕೆ, ಸುರಕ್ಷಿತ ಹೆರಿಗೆಗೆ ನೆರವು, ನವಜಾತ ಶಿಶುಗಳ ಆರೋಗ್ಯ ನೋಡಿಕೊಳ್ಳುವುದು ಹಾಗೂ ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸುವ ಜವಾಬ್ದಾರಿ ಇವರ ಮೇಲಿದೆ. ಆಸ್ಪತ್ರೆಗೆ ಹೋಗಲು ಹಿಂಜರಿಯುವವರಿಗೆ ಅಥವಾ ಸರಿಯಾದ ಮಾಹಿತಿ ಇಲ್ಲದ ಕುಟುಂಬಗಳಿಗೆ ಇವರೇ ಮೊದಲ ಆಸರೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹಿಡಿದು ಸರ್ಕಾರದ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವವರೆಗೆ ಇವರ ಕೆಲಸ ವಿಸ್ತರಿಸಿದೆ. ಹೀಗೆ ದಿನದ ಬಹುಪಾಲು ಸಮಯ ಆರೋಗ್ಯ ಸೇವೆಗೆ ಮುಡಿಪಾಗಿಡುವ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಯಾವಾಗ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.