SOCIAL MEDIA

Newsletter

PARTNER SITES
Select Language Select State

ಕರಾವಳಿ ಅಖಾಡದಲ್ಲಿ ಕೈ ಪಡೆ ಬಿಗ್ ಗೇಮ್‌ಪ್ಲಾನ್ : ​ಕಮಲ ಕೋಟೆ ಭೇದಿಸಲು ಡಿಕೆಶಿ ಚಾಣಾಕ್ಷ ತಂತ್ರ

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಮೂಲಕ ಕಾಂಗ್ರೆಸ್ ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಭೇದಿಸಲು ಮಾಸ್ತ್ರೀ ಪ್ಲಾನ್ ಮಾಡಿದೆ. ತುಳು ಭಾಷೆಗೆ ಆಡಳಿತ ಮಾನ್ಯತೆ ಹಾಗೂ ತಿರುಪತಿ ದೇವಸ್ಥಾನಕ್ಕೆ ಜಾಗ ನೀಡುವ ಮೂಲಕ ಸಾಂಸ್ಕೃತಿಕ ಹಿಂದುತ್ವ ಅಸ್ತ್ರ ಬಳಸಿದ್ದರೆ, ಸಾವಿರಾರು ಕೋಟಿ ರೂ. ಮೂಲಸೌಕರ್ಯ ಮತ್ತು ಬಂದರು ಯೋಜನೆಗಳ ಮೂಲಕ ಅಭಿವೃದ್ಧಿಯ ಅಸ್ತ್ರದೊಂದಿಗೆ ಮುಂಬರುವ ಪಂಚಾಯತ್ ಚುನಾವಣೆ ಎದುರಿಸಲು ಸಜ್ಜಾಗಿದೆ.. ಈ ಕುರಿತ ವರದಿ ಇಲ್ಲಿದೆ..

Reported By Krishna NK Written By Krishna NK
Published: Sep 18, 2026, 07:15 PM IST | Updated: Sep 18, 2026, 07:25 PM IST
Image Credit: Mangaluru News
Join

ಮಂಗಳೂರು : ​ಉತ್ತರ ಕನ್ನಡದ ಕಾರವಾರದಿಂದ ಹಿಡಿದು ದಕ್ಷಿಣ ಕನ್ನಡದ ಮಂಗಳೂರಿನವರೆಗೆ,  ಕರಾವಳಿ ಎಂದರೆ ಕಮಲ ಪಡೆಯ ಅಜೇಯ ಕೋಟೆ. ಹಿಂದುತ್ವದ ಪ್ರಯೋಗಶಾಲೆ ಎಂದೇ ಕರೆಯಲ್ಪಡುವ ಈ ಕಡಲ ತೀರದಲ್ಲಿ ಬಿಜೆಪಿಯ ಮತಬ್ಯಾಂಕ್ ಭೇದಿಸುವುದು ಕಾಂಗ್ರೆಸ್‌ಗೆ ಸದಾ ಸವಾಲಿನ ಕೆಲಸ. ಆದರೆ, ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆ ಕೇವಲ ಸರ್ಕಾರದ ನಿರ್ಧಾರವಲ್ಲ, ಬದಲಿಗೆ ಕರಾವಳಿಯ ರಾಜಕೀಯ ಚಿತ್ರಣವನ್ನೇ ಬದಲಾಯಿಸಲು ಹೆಣೆದ ಬೃಹತ್ ದಾಳ. ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಭಾವನೆಗಳನ್ನು ದಾಳವಾಗಿ ಬಳಸಿಕೊಂಡು, ಬಿಜೆಪಿಯ ಭದ್ರಕೋಟೆ ಭೇದಿಸಲು ಸಿಎಂ ಡಿ.ಕೆ. ಶಿವಕುಮಾರ್ ಪಕ್ಕಾ ಪ್ಲಾನ್ ಮಾಡಿದಂತಿದೆ.

​ಕರಾವಳಿ ರಾಜಕಾರಣದಲ್ಲಿ ಧರ್ಮ ಮತ್ತು ಭಾವನಾತ್ಮಕ ವಿಚಾರಗಳೇ ಪ್ರಮುಖ ಅಸ್ತ್ರ. ಇದನ್ನೇ ಗ್ರಹಿಸಿರುವ ಕಾಂಗ್ರೆಸ್, ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಹಿಂದುತ್ವ ಅಜೆಂಡಾಗೆ ಪ್ರತಿಯಾಗಿ ಸಾಂಸ್ಕೃತಿಕ ಹಿಂದುತ್ವ ಹಾಗೂ ಕರಾವಳಿ ಅಸ್ಮಿತೆಯನ್ನು ಟಚ್ ಮಾಡಿದೆ. ತುಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ ಹಾಗೂ ಸುರತ್ಕಲ್‌ನಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ  ಜಾಗ ಮಂಜೂರು ಮಾಡಿರುವುದು ಕೇವಲ ಪಾಲಿಸಿ ನಿರ್ಧಾರಗಳಲ್ಲ. ಹಿಂದುತ್ವದ ತಳಹದಿಯಲ್ಲಿದ್ದ ಮತದಾರರ ಭಾವನಾತ್ಮಕ ಬೆಂಬಲವನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಎಸೆದ ಅತ್ಯಂತ ನಿಖರ ರಾಜಕೀಯ ತಂತ್ರ.

​ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಈ ಮೂರೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಮರುಸ್ಥಾಪಿಸಲು ಹೆಣಗಾಡುತ್ತಿದೆ. ಇದೀಗ ಡಿಸೆಂಬರ್‌ನಲ್ಲಿ ಬರಲಿರುವ ಪಂಚಾಯತ್ ರಾಜ್ ಚುನಾವಣೆಗಳನ್ನು ಗುರಿಯಾಗಿಸಿಕೊಂಡು, ಗ್ರಾಮೀಣ ಭಾಗದ ಶ್ರಮಿಕ ವರ್ಗವನ್ನು ತಲುಪಲು 'ಕೈ' ಪಡೆ ಯೋಜಿಸಿದೆ. ವಿಶೇಷ ಸಮುದ್ರ ವಲಯ, ಕಡಲ ಜೈವಿಕ ತಂತ್ರಜ್ಞಾನ ನೀತಿ ಹಾಗೂ ಅರಣ್ಯ ಬುಡಕಟ್ಟು ಸಮುದಾಯಗಳಿಗೆ ಹುದ್ದೆಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡುವ ಮೂಲಕ ಮೀನುಗಾರರು ಮತ್ತು ಸ್ಥಳೀಯ ಸಮುದಾಯಗಳ ಓಲೈಕೆಗೆ ಮುಂದಾಗಿದೆ. ಮಂಗಳೂರು ಜಲ ಸಾರಿಗೆ, ಮಂಕಿ ಬಂದರು ಅಭಿವೃದ್ಧಿಗೆ ಸಾವಿರಾರು ಕೋಟಿ ಹೂಡಿಕೆ ಹಾಗೂ 2026ರ ಪ್ರವಾಸೋದ್ಯಮ ನೀತಿಯ ಮೂಲಕ ಸ್ಥಳೀಯ ಯುವಜನತೆಗೆ ಉದ್ಯೋಗದ ಭರವಸೆ ನೀಡಿ, ಕೋಮು ಧ್ರುವೀಕರಣದ ರಾಜಕಾರಣಕ್ಕೆ ಅಭಿವೃದ್ಧಿಯ ಅಸ್ತ್ರದಿಂದ ಟಾಂಗ್ ನೀಡಿದೆ.

​ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಗಡಿಯವರೆಗೆ ಬಿಜೆಪಿಗೆ ಇರುವ ಕಡಲತೀರದ ಸಂಘಟನಾ ಶಕ್ತಿಯನ್ನು ಮಟ್ಟಹಾಕಬೇಕಾದರೆ, ಮೂಲಸೌಕರ್ಯ ಮತ್ತು ಪ್ರಾದೇಶಿಕ ಅಭಿವೃದ್ಧಿಯೇ ಏಕೈಕ ಹಾದಿ ಎಂಬುದು ಸಿಎಂ ಲೆಕ್ಕಾಚಾರ. ವೆನ್ಲಾಕ್ ಆಸ್ಪತ್ರೆ ಉನ್ನತೀಕರಣ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಮಂಗಳಾ ಮತ್ತು ಉಡುಪಿ ಕ್ರೀಡಾಂಗಣಗಳ ನವೀಕರಣದಂತಹ ನಿರ್ಧಾರಗಳು ಕರಾವಳಿಯ ಮಧ್ಯಮ ವರ್ಗದ ಮನಗೆಲ್ಲುವ ಪ್ರಯತ್ನ. ಕೇವಲ ಭಾಷಣಕ್ಕೆ ಸೀಮಿತವಾಗಿದ್ದ ಕರಾವಳಿ ರಾಜಕಾರಣದಲ್ಲಿ, ಸಾವಿರಾರು ಕೋಟಿ ರೂ. ಯೋಜನೆಗಳ ಮೂಲಕ ತಾವೊಬ್ಬ ಅಭಿವೃದ್ಧಿಯ ಹರಿಕಾರ ಎಂಬ ಇಮೇಜ್ ಸೃಷ್ಟಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಅತ್ಯಂತ ಚಾಣಾಕ್ಷತನದ ಹೆಜ್ಜೆ ಇರಿಸಿದ್ದಾರೆ.

​ಒಟ್ಟಿನಲ್ಲಿ, ಮಂಗಳೂರು ಸಚಿವ ಸಂಪುಟ ಸಭೆಯು ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಕಮಲದ ಮೇಲುಗೈಗೆ ಸವಾಲೆಸೆಯುವ ಕಾಂಗ್ರೆಸ್‌ನ ಬೃಹತ್ ರಾಜಕೀಯ ರಣತಂತ್ರ. ಹಿಂದುತ್ವದ ಅಲೆಯನ್ನೇ ನೆಚ್ಚಿಕೊಂಡಿದ್ದ ಬಿಜೆಪಿ ಕೋಟೆಯಲ್ಲಿ, ಸಾಂಸ್ಕೃತಿಕ ಗುರುತು ಮತ್ತು ಮೂಲಸೌಕರ್ಯದ ಸೂತ್ರವನ್ನು ಬಳಸಿ ಕಾಂಗ್ರೆಸ್ ಸೃಷ್ಟಿಸಿರುವ ಈ ಸಂಚಲನ ಮುಂಬರುವ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ವರ್ಕ್ ಔಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES