ಸಂಧಾನ ಸಭೆ ಯಶಸ್ವಿ: ಮುಷ್ಕರ ಕೈಬಿಟ್ಟ 108 ಆಂಬ್ಯುಲೆನ್ಸ್ ನೌಕರರು
ರಾಜ್ಯ ಸರ್ಕಾರ ಹಾಗೂ '108' ಆಂಬುಲೆನ್ಸ್ ಸಿಬ್ಬಂದಿಯ ನಡುವೆ ಭುಗಿಲೆದ್ದಿದ್ದ ಜಟಾಪಟಿ ಇದೀಗ ಸುಖಾಂತ್ಯ ಕಂಡಿದ್ದು, '108' ಆಂಬುಲೆನ್ಸ್ ಸಿಬ್ಬಂದಿಗಳ ಸಂಘ ಕರೆ ನೀಡಿದ್ದ ಮುಷ್ಕರವನ್ನು ಕೈಬಿಡಲಾಗಿದೆ.
ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು
ರಾಜ್ಯಾದ್ಯಂತ ತುರ್ತು ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಸೃಷ್ಟಿಸಿದ್ದ '108' ಆಂಬುಲೆನ್ಸ್ ಸಿಬ್ಬಂದಿಯ ಮುಷ್ಕರ ಅಂತ್ಯಗೊಂಡಿದೆ.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನೌಕರರ ಮುಖಂಡರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ '108' ಆಂಬುಲೆನ್ಸ್ ಸಿಬ್ಬಂದಿಯ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ಚರ್ಚಿಸಿ, ನೌಕರರ ಪ್ರಮುಖ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ, ಪ್ರತಿಭಟನೆಯನ್ನು ಹಿಂಪಡೆಯಲು ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘ ಅಧಿಕೃತವಾಗಿ ನಿರ್ಧರಿಸಿದೆ.
ಸರ್ಕಾರದ ಈ ಸಕಾರಾತ್ಮಕ ಸ್ಪಂದನೆಗೆ ಮಣಿದ '108' ಆಂಬುಲೆನ್ಸ್ ನೌಕರರ ಸಂಘ, ಮುಷ್ಕರದ ಕರೆಯನ್ನು ಹಿಂಪಡೆದು ಸೇವೆ ಮುಂದುವರಿಸಲು ಸಮ್ಮತಿಸಿದೆ ಎಂದು ತಿಳಿದುಬಂದಿದೆ.
ವೇತನ ವಾರ್ಷಿಕ ಇನ್ಕ್ರಿಮೆಂಟ್ ಹೆಚ್ಚಳ:
ಎಲ್ಲ ಸಿಬ್ಬಂದಿಗೂ ಏಕರೂಪ ವೇತನ ಜಾರಿ, ಜ್ಯೇಷ್ಠತೆ ಆಧಾರಿತ ವೇತನ ನಿಗದಿ ಹಾಗೂ ಪ್ರತಿ ತಿಂಗಳು ವಿಳಂಬವಿಲ್ಲದೆ ಸಕಾಲಕ್ಕೆ ವೇತನ ಪಾವತಿ ಮಾಡುವುದು ಸೇರಿದಂತೆ ಹಲವು ಮೂಲಭೂತ ಬೇಡಿಕೆಗಳ ಈಡೇರಿಕೆಗೆ ನೌಕರರು ಪಟ್ಟು ಹಿಡಿದಿದ್ದರು. ಸಮಸ್ಯೆ ಬಗೆಹರಿಯದಿದ್ದರೆ ಇಂದು ರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಂಘಟನೆಯು ಎಚ್ಚರಿಕೆ ನೀಡಿತ್ತು.
ರಾಜ್ಯದಲ್ಲಿ ಈಗಾಗಲೇ ಆಂಬ್ಯುಲೆನ್ಸ್ ವಾಹನಗಳ ಕೊರತೆಯಿದ್ದು, ಅಗತ್ಯವಿರುವ ಸುಮಾರು 750 ಆಂಬುಲೆನ್ಸ್ಗಳಲ್ಲಿ ಕೇವಲ 350ರಿಂದ 400 ವಾಹನಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಮಾಹಿತಿ ಇತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೌಕರರು ಮುಷ್ಕರಕ್ಕಿಳಿದರೆ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು, ಗರ್ಭಿಣಿಯರು ಹಾಗೂ ಅಪಘಾತಕ್ಕೀಡಾದವರು ತೀವ್ರ ಸಂಕಷ್ಟಕ್ಕೆ ಸಿಲುಕುವ ಆತಂಕವಿತ್ತು. ಇದೀಗ '108' ಆಂಬುಲೆನ್ಸ್ ನೌಕರರು ಮುಷ್ಕರ ವಾಪಸ್ ಪಡೆದಿರುವುದರಿಂದ ರಾಜ್ಯದ ಜನತೆ ಹಾಗೂ ರೋಗಿಗಳ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಆಂಬುಲೆನ್ಸ್ ನೌಕರರು ಸರ್ಕಾರ ಮುಂದೆ ಇಟ್ಟಿದ್ದ ಪ್ರಮುಖ ಬೇಡಿಕೆಗಳೇನು?
* ವೇತನ ಹೆಚ್ಚಳ
* ಎಲ್ಲಾ ಸಿಬ್ಬಂದಿಗೂ ಏಕರೂಪ ವೇತನ ಜಾರಿ
* ಜ್ಯೇಷ್ಠತೆ ಆಧಾರಿತ ವೇತನ ನಿಗದಿ
* ಪ್ರತಿ ತಿಂಗಳು ವಿಳಂಬವಿಲ್ಲದೆ ವೇತನ ನೀಡುವಂತೆ ಆಗ್ರಹ
* ಆಂಬ್ಯುಲೆನ್ಸ್ ಸಿಬ್ಬಂದಿಗೆ ಮೂರು ಪಾಳಿ ಬದಲು ಎರಡು ಪಾಳಿ ವ್ಯವಸ್ಥೆ ಜಾರಿಗೆ ಆಗ್ರಹ
* ಮೊದಲಿನಂತೆ ಎರಡು ಪಾಳಿಯಲ್ಲಿ ಸಮಯ ನಿಗದಿಗೆ ಅವಕಾಶಕ್ಕೆ ಆಗ್ರಹವೂ ಸೇರಿ ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಆಂಬುಲೆನ್ಸ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರು.