SOCIAL MEDIA

Newsletter

PARTNER SITES
Select Language Select State

ರಾಜ್ಯದಲ್ಲಿ ಚಳಿಯ ಅಬ್ಬರಕ್ಕೆ ಜನರಿಗೆ ನಡುಕ: ದಾವಣಗೆರೆಯಲ್ಲಿ 10.3°C ಕನಿಷ್ಠ ತಾಪಮಾನ!

ಕರ್ನಾಟಕದಾದ್ಯಂತ ಒಣಹವೆ ಮತ್ತು ಚಳಿಯ ತೀವ್ರತೆ ಹೆಚ್ಚಾಗಿದ್ದು, ದಾವಣಗೆರೆಯಲ್ಲಿ 10.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ದಟ್ಟ ಮಂಜಿನಿಂದ ಜನಜೀವನ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮುಂದಿನ ಎರಡು ದಿನ ಚಳಿ ಮುಂದುವರಿಯಲಿದ್ದು, ನವೆಂಬರ್ 23ರಿಂದ 26ರವರೆಗೆ ರಾಜ್ಯದ ವಿವಿಧೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

Written By Puttaraj K Alur
Published: Nov 21, 2026, 11:06 IST | Updated: Nov 21, 2026, 11:15 IST
Image Credit: Cold Wave
Join

Karnataka Weather: ರಾಜ್ಯದಾದ್ಯಂತ ಒಣಹವೆ ಮುಂದುವರಿದಿದ್ದು, ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಾವಣಗೆರೆಯಲ್ಲಿ ಬಯಲು ಪ್ರದೇಶಗಳಲ್ಲೇ ಅತ್ಯಂತ ಕಡಿಮೆ ಅಂದರೆ 10.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ದಟ್ಟ ಮಂಜು ಆವರಿಸಿದ್ದು, ವಿಶೇಷವಾಗಿ ಚಿಂತಾಮಣಿ ನಗರದಲ್ಲಿ ಮಂಜಿನ ಮುಸುಕು ಜನಜೀವನದ ಮೇಲೆ ಪರಿಣಾಮ ಬೀರಿದೆ. ಬೆಳಗ್ಗೆ 8 ಗಂಟೆಯಾದರೂ ಮಂಜು ಕರಗದೆ ಸೂರ್ಯನ ದರ್ಶನಕ್ಕಾಗಿ ಜನರು ಕಾಯುವಂತಾಗಿದೆ. ಇದೇ ವೇಳೆ ನವೆಂಬರ್ 23ರಿಂದ 26ರವರೆಗೆ ರಾಜ್ಯದ ವಿವಿಧೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಾವಣಗೆರೆಯಲ್ಲಿ 10.3 ಡಿಗ್ರಿ ಕನಿಷ್ಠ ತಾಪಮಾನ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದು, ದಾವಣಗೆರೆಯಲ್ಲಿ ಬಯಲು ಪ್ರದೇಶಗಳಲ್ಲೇ ಅತ್ಯಂತ ಕಡಿಮೆ 10.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಳಗಿನ ಜಾವ ಮತ್ತು ರಾತ್ರಿ ವೇಳೆ ಚಳಿಯ ಅನುಭವ ಹೆಚ್ಚಾಗುತ್ತಿದೆ. ಒಣಹವೆಯ ವಾತಾವರಣ ಮುಂದುವರಿದಿರುವುದರಿಂದ ಜನರು ಚಳಿಯಿಂದ ತೊಂದರೆ ಅನುಭವಿಸುವಂತಾಗಿದೆ.

ಚಿಂತಾಮಣಿಯಲ್ಲಿ ದಟ್ಟ ಮಂಜು, ವಾಹನ ಸವಾರರ ಪರದಾಟ

ಬಯಲುಸೀಮೆ ಪ್ರದೇಶವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಜಿನ ವಾತಾವರಣ ಕಂಡುಬಂದಿದ್ದು, ಚಿಂತಾಮಣಿ ನಗರದಲ್ಲಿ ದಟ್ಟ ಮಂಜು ಆವರಿಸಿದೆ. ಕಣ್ಣಾಯಿಸಿದಷ್ಟು ದೂರ ಮಂಜು ಕಾಣಿಸುತ್ತಿದ್ದು, ನಗರವೇ ಮಂಜಿನ ದಿಗ್ಬಂಧನಕ್ಕೆ ಒಳಗಾದಂತಾಗಿದೆ. ಬೆಳಗ್ಗೆ 8 ಗಂಟೆ ಕಳೆದರೂ ಮಂಜು ಕರಗದೆ ಸೂರ್ಯನ ದರ್ಶನಕ್ಕಾಗಿ ಜನರು ಕಾಯುವಂತಾಗಿದೆ. ಮೈಕೊರೆಯುವ ಚಳಿಯಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ದೈನಂದಿನ ಜನಜೀವನದ ಮೇಲೂ ಪರಿಣಾಮ ಉಂಟಾಗಿದೆ. ಮತ್ತೊಂದೆಡೆ ದಟ್ಟ ಮಂಜಿನಿಂದ ರಸ್ತೆಗಳು ಸ್ಪಷ್ಟವಾಗಿ ಕಾಣದಿರುವುದು ವಾಹನ ಸವಾರರಿಗೆ ತೊಂದರೆ ಉಂಟುಮಾಡಿದೆ. ಹಗಲಿನಲ್ಲಿಯೇ ವಾಹನಗಳ ಹೆಡ್‌ಲೈಟ್‌ಗಳನ್ನ ಆನ್ ಮಾಡಿಕೊಂಡು ನಿಧಾನಗತಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ಎರಡು ದಿನವೂ ಚಳಿ ಮುಂದುವರಿಕೆ

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆಯಿಲ್ಲ. ಆ ಬಳಿಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕೊಂಚ ಏರಿಕೆಯಾಗುವ ನಿರೀಕ್ಷೆಯಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಒಣಹವೆಯ ವಾತಾವರಣ ಇರಲಿದೆ. ಈ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.

ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ಚಳಿಯ ಅನುಭವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ನವೆಂಬರ್ 23ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ

ಸದ್ಯ ರಾಜ್ಯದಲ್ಲಿ ಒಣಹವೆ ಮತ್ತು ಚಳಿಯ ವಾತಾವರಣ ಮುಂದುವರಿದಿದ್ದರೂ, ನವೆಂಬರ್ 23ರಿಂದ ಹವಾಮಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ನವೆಂಬರ್ 23ರಂದು ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಸಂಭವಿಸುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ನವೆಂಬರ್ 24ರಿಂದ 26ರವರೆಗೆ ರಾಜ್ಯದ ವಿವಿಧೆಡೆ ಒಂದೆರಡು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಳಿಯ ಜೊತೆಗೆ ಮಳೆಯ ವಾತಾವರಣವೂ ಎದುರಾಗುವ ನಿರೀಕ್ಷೆಯಿದೆ.

ಒಟ್ನಲ್ಲಿ ಸದ್ಯ ರಾಜ್ಯದಾದ್ಯಂತ ಒಣಹವೆ, ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿದಿದೆ. ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ ಕುಸಿತವಾಗಿದ್ದರೆ, ಚಿಂತಾಮಣಿಯಲ್ಲಿ ದಟ್ಟ ಮಂಜು ಜನಜೀವನ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮುಂದಿನ ಎರಡು ದಿನ ಚಳಿ ಮುಂದುವರಿಯಲಿದ್ದು, ನವೆಂಬರ್ 23ರಿಂದ 26ರವರೆಗೆ ಮಳೆಯ ಸಾಧ್ಯತೆಯೂ ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES