SOCIAL MEDIA

Newsletter

PARTNER SITES
Select Language Select State

ಸಿಎಂ ಡಿ.ಕೆ.ಶಿವಕುಮಾರ್‌ ಜಪಾನ್ ಪ್ರವಾಸ: ರಾಜ್ಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಬಹುದು?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜಪಾನ್ ಪ್ರವಾಸದ ವೇಳೆ ಟೊಯೋಟಾ ಕಂಪನಿಯೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ವಿಸ್ತರಣೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಹಾಗೂ JPN TAXI ಮಾದರಿಯ ಹೈಬ್ರಿಡ್ ಟ್ಯಾಕ್ಸಿ ಉತ್ಪಾದನೆ ಕುರಿತು ಚರ್ಚೆ ನಡೆದಿದೆ. ಬಿಡದಿ ಘಟಕದ ಉತ್ಪಾದನಾ ಸಾಮರ್ಥ್ಯವನ್ನ 10 ಲಕ್ಷ ವಾಹನಗಳಿಗೆ ಹೆಚ್ಚಿಸುವ ಗುರಿಯೂ ಪ್ರಸ್ತಾಪವಾಗಿದೆ.

Written By Puttaraj K Alur
Published: Nov 24, 2026, 12:09 IST | Updated: Nov 24, 2026, 12:21 IST
Image Credit: DK Shivakumar Japan Visit
Join

DK Shivakumar Japan Visit: ಕರ್ನಾಟಕಕ್ಕೆ ವಿದೇಶಿ ಹೂಡಿಕೆಗಳನ್ನ ಆಕರ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೈಗೊಂಡಿರುವ ಜಪಾನ್ ಪ್ರವಾಸ ರಾಜ್ಯದ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ವಿಚಾರವಾಗಿ ಗಮನ ಸೆಳೆದಿದೆ. ಜಪಾನ್‌ನ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಟೊಯೋಟಾ ಸಂಸ್ಥೆಯೊಂದಿಗೆ ನಡೆದ ಮಾತುಕತೆಗಳು, ರಾಜ್ಯದಲ್ಲಿ ಹೂಡಿಕೆ ವಿಸ್ತರಣೆ ಹಾಗೂ ಹೊಸ ಉತ್ಪಾದನಾ ಚಟುವಟಿಕೆಗಳ ಸಾಧ್ಯತೆಗಳ ಕುರಿತು ನಿರೀಕ್ಷೆ ಮೂಡಿಸಿವೆ.

ಜಪಾನ್‌ನ ಟೊಯೋಟಾ ಮೋಟೋಮಾಚಿ ಘಟಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕಂಪನಿಯ ಪ್ರತಿನಿಧಿಗಳೊಂದಿಗೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಟೊಯೋಟಾ ಕಂಪನಿಯ ಹೂಡಿಕೆಯನ್ನ ವಿಸ್ತರಿಸುವುದು, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಹೊಸ ತಂತ್ರಜ್ಞಾನ ಆಧಾರಿತ ವಾಹನಗಳ ಉತ್ಪಾದನೆಯ ಸಾಧ್ಯತೆಗಳು ಈ ಮಾತುಕತೆಯ ಪ್ರಮುಖ ವಿಚಾರಗಳಾಗಿವೆ.

ಹೈಬ್ರಿಡ್ ಟ್ಯಾಕ್ಸಿ ಯೋಜನೆಗೆ ಚರ್ಚೆ

 

 ಜಪಾನ್‌ನಲ್ಲಿ ಜನಪ್ರಿಯವಾಗಿರುವ JPN TAXI ಮಾದರಿಯ LPG-ಹೈಬ್ರಿಡ್ ಟ್ಯಾಕ್ಸಿಯನ್ನ ಕರ್ನಾಟಕದಲ್ಲಿ ಪರಿಚಯಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ. ಈ ವಾಹನವನ್ನ ರಾಜ್ಯದಲ್ಲೇ ಉತ್ಪಾದಿಸುವ ಸಾಧ್ಯತೆಗಳ ಕುರಿತು ಟೊಯೋಟಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಯೋಜನೆ ಸಾಕಾರಗೊಂಡರೆ ವಾಹನ ಉತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳು ರಾಜ್ಯದಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಆದರೆ ಟ್ಯಾಕ್ಸಿ ಪರಿಚಯಿಸುವುದು ಅಥವಾ ಸ್ಥಳೀಯವಾಗಿ ಉತ್ಪಾದಿಸುವ ಕುರಿತು ಯಾವುದೇ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.

 

ಟೊಯೋಟಾ ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ಗುರಿ

ಕರ್ನಾಟಕದಲ್ಲಿ ಟೊಯೋಟಾ ಕಂಪನಿಯ ಉತ್ಪಾದನಾ ಚಟುವಟಿಕೆಗಳನ್ನ ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನ 10 ಲಕ್ಷ ವಾಹನಗಳ ಮಟ್ಟಕ್ಕೆ ಹೆಚ್ಚಿಸುವ ಗುರಿಯ ಕುರಿತು ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಗುರಿ ಮತ್ತು ಹೂಡಿಕೆ ವಿಸ್ತರಣೆಯ ಯೋಜನೆಗಳು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತವೆ ಎಂಬುದು ಗಮನಾರ್ಹವಾಗಿದೆ. ಇದರೊಂದಿಗೆ ಫ್ಲೆಕ್ಸ್‌-ಫ್ಯೂಯೆಲ್ ವಾಹನಗಳ ಉತ್ಪಾದನೆ ಮತ್ತು ಸಂಬಂಧಿತ ತಂತ್ರಜ್ಞಾನಗಳ ಬಗ್ಗೆಯೂ ಚರ್ಚಿಸಲಾಗಿದೆ. ವಾಹನೋದ್ಯಮದಲ್ಲಿ ಹೊಸ ತಂತ್ರಜ್ಞಾನಗಳಿಗೆ ಉತ್ತೇಜನ ನೀಡುವ ಮೂಲಕ ಕರ್ನಾಟಕವನ್ನ ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿ ಬೆಳೆಸುವ ಉದ್ದೇಶವೂ ಈ ಮಾತುಕತೆಯಲ್ಲಿದೆ.

 

 ಯುವಕರಿಗೆ ತರಬೇತಿ ಮತ್ತು ಉದ್ಯೋಗಾವಕಾಶ

 

ಟೊಯೋಟಾ ಕಂಪನಿಯ ಬಿಡದಿ ಘಟಕದಲ್ಲಿ ತರಬೇತಿ ಪಡೆದಿರುವ 20ಕ್ಕೂ ಹೆಚ್ಚು ಐಟಿಐ ಯುವಕರು ಜಪಾನ್‌ನಲ್ಲಿ ತರಬೇತಿ ಅಥವಾ ಇಂಟರ್ನ್‌ಶಿಪ್ ಪಡೆಯುತ್ತಿರುವ ವಿಚಾರವೂ ಪ್ರವಾಸದ ಸಂದರ್ಭದಲ್ಲಿ ಗಮನ ಸೆಳೆದಿದೆ. ರಾಜ್ಯದ ಯುವಕರಿಗೆ ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕಾ ತರಬೇತಿ ಒದಗಿಸುವ ಪ್ರಯತ್ನಗಳು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಾಗಿವೆ. ಟೊಯೋಟಾ ಕಂಪನಿಯ ಹೂಡಿಕೆ ವಿಸ್ತರಣೆ, ವಾಹನ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮತ್ತು ಹೊಸ ಮಾದರಿಯ ವಾಹನಗಳ ಉತ್ಪಾದನೆಗೆ ಸಂಬಂಧಿಸಿದ ಯೋಜನೆಗಳು ಮುಂದುವರಿದರೆ, ವಾಹನೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಅವಕಾಶ ದೊರೆಯಬಹುದು. ಆದರೆ ಈ ಪ್ರವಾಸದಿಂದ ನಿಖರವಾಗಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಅಂಕಿಅಂಶವನ್ನ ಇನ್ನೂ ಪ್ರಕಟಿಸಲಾಗಿಲ್ಲ.

'ಬಿಯಾಂಡ್ ಬೆಂಗಳೂರು' ಯೋಜನೆಗೂ ಒತ್ತು

 

 ಬೆಂಗಳೂರು ಹೊರಭಾಗದಲ್ಲಿಯೂ ಕೈಗಾರಿಕಾ ಹೂಡಿಕೆಗಳನ್ನ ಆಕರ್ಷಿಸುವ 'ಬಿಯಾಂಡ್ ಬೆಂಗಳೂರು' ಯೋಜನೆಯ ಬಗ್ಗೆಯೂ ಜಪಾನ್‌ನ ಉದ್ಯಮ ವಲಯದೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಮತ್ತು ಹೂಡಿಕೆಗಳನ್ನ ವಿಸ್ತರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜಾಗತಿಕ ಹೂಡಿಕೆದಾರರನ್ನ ಕರ್ನಾಟಕದತ್ತ ಸೆಳೆಯಲು ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಆಹ್ವಾನ ನೀಡಲಾಗಿದೆ.

 

ಒಟ್ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜಪಾನ್ ಪ್ರವಾಸದಲ್ಲಿ ಟೊಯೋಟಾ ಕಂಪನಿಯೊಂದಿಗೆ ನಡೆದ ಮಾತುಕತೆಗಳು ಕರ್ನಾಟಕದ ವಾಹನೋದ್ಯಮ, ಹೂಡಿಕೆ ಮತ್ತು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಹಲವು ಸಾಧ್ಯತೆಗಳನ್ನ ಮುಂದಿಟ್ಟಿವೆ. ಆದರೆ ಹೂಡಿಕೆ ಪ್ರಮಾಣ, ಯೋಜನೆಗಳ ಅನುಷ್ಠಾನ ಮತ್ತು ಉದ್ಯೋಗ ಸೃಷ್ಟಿಯ ನಿಖರ ಸಂಖ್ಯೆ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಈ ಮಾತುಕತೆಗಳು ಮುಂದಿನ ಹಂತದಲ್ಲಿ ಯಾವ ರೀತಿಯ ಯೋಜನೆಗಳಾಗಿ ರೂಪುಗೊಳ್ಳಲಿವೆ ಎಂಬುದನ್ನ ಕಾದುನೋಡಬೇಕಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES