SOCIAL MEDIA

Newsletter

PARTNER SITES
Select Language Select State

ಸಂಘಟನೆಗೆ ಚುರುಕು: ಎಸ್‌ಐಆರ್ ಅಪಪ್ರಚಾರ ಹಾಗೂ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜು

ಪಾದಯಾತ್ರೆಯ ಬಳಿಕ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಲು ಮತ್ತು ಮುಂಬರುವ ಚುನಾವಣೆಗಳ ರಣತಂತ್ರ ರೂಪಿಸಲು ನೂತನ ಉಸ್ತುವಾರಿ ಕಾಸಂ ವೆಂಕಟೇಶ್ ನೇತೃತ್ವದಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಎಸ್‌ಪಿ ಕಚೇರಿ ಮುತ್ತಿಗೆ, ಹಿರೂರು ಉಪಚುನಾವಣೆ ಮೈತ್ರಿ ಹಾಗೂ ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆಗೆ ಸಮಿತಿ ರಚನೆ ಸೇರಿದಂತೆ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಯಿತು.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 11, 2026, 07:31 PM IST | Updated: Oct 11, 2026, 07:32 PM IST
Image Credit: bjp karnataka
Join

ಬೆಂಗಳೂರು : ಪಾದಯಾತ್ರೆ ಬಳಿಕ ಬಿಜೆಪಿಯಲ್ಲಿ ಹೊಸ ಚೈತನ್ಯ ಮೂಡಿದ್ದು, ಸಂಘಟನೆಗೆ ಚುರುಕು ಮುಟ್ಟಿಸಲು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ನೂತನ ಉಸ್ತುವಾರಿ ಕಾಸಂ ವೆಂಕಟೇಶ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಚುನಾವಣೆಗಳ ರಣತಂತ್ರದ ಬಗ್ಗೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಪಾದಯಾತ್ರೆ ಬಳಿಕ ಬಿಜೆಪಿ ಸಂಘಟನೆಗೆ ವೇಗ ಸಿಕ್ಕಿದ್ದು, ಇದೇ ಜೋರನ್ನು ಚುನಾವಣೆವರೆಗೂ ಮುಂದುವರಿಸಲು ಹೈಕಮಾಂಡ್ ಸೂಚಿಸಿದೆ. ನೂತನ ಉಸ್ತುವಾರಿ ಕಾಸಂ ವೆಂಕಟೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪ್ರಮುಖರು ಭಾಗಿಯಾಗಿದ್ದರು.

ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಅಹಿಂದ ಮತಗಳನ್ನು ತೆಗೆದುಹಾಕುವ ಯತ್ನ ನಡೆಯುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ತಿರುಗೇಟು ನೀಡಲು ಜನಜಾಗೃತಿ ಮೂಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಚುನಾವಣಾ ಆಯೋಗದ ನಿಯಮಾನುಸಾರ ಫಾರ್ಮ್-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿ, ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ಎಸ್ಪಿ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ವಿಜಯೇಂದ್ರ ಎಚ್ಚರಿಸಿದ್ದಾರೆ. ಅಲ್ಲದೆ, ಪಿಡಿಒ ಹಾಗೂ ಮುನ್ಸಿಪಲ್ ಕಮಿಷನರ್‌ಗಳಿಗೆ ಪಿಆರ್‌ಸಿ ನೀಡುವ ಅಧಿಕಾರ ನೀಡಿರುವುದನ್ನು ಸಭೆ ಖಂಡಿಸಿದೆ.

ಹಾಲಿನ ದರ ಏರಿಕೆ ಪ್ರಸ್ತಾವನೆ ಬಗ್ಗೆಯೂ ಚರ್ಚೆ ನಡೆದಿದ್ದು, ದರ ಹೆಚ್ಚಾದರೆ ಆ ಪೂರ್ಣ ಹಣ ನೇರವಾಗಿ ರೈತರಿಗೆ ತಲುಪಬೇಕು, ಕೆಎಂಎಫ್‌ಗೆ ಪಾಲು ಹೋದರೆ ದೊಡ್ಡ ಹೋರಾಟ ರೂಪಿಸುವುದಾಗಿ ಎಚ್ಚರಿಸಲಾಗಿದೆ. ಇದರೊಂದಿಗೆ, ಹಿರೂರು ಉಪಚುನಾವಣೆಯನ್ನು ಜೆಡಿಎಸ್ ಜತೆಗೆ ಮೈತ್ರಿ ಸಮನ್ವಯದೊಂದಿಗೆ ಎದುರಿಸಲು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ಈಗಿನಿಂದಲೇ ಪ್ರತಿ ಜಿಲ್ಲೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES