SOCIAL MEDIA

Newsletter

PARTNER SITES
Select Language Select State

ನಂಬಿಸಿ ಕೊಂ*ದ ಪಾಪಿ ಪ್ರಿಯಕರ : ಶ*ವ ಪೊದೆಗೆ ಎಸೆದು ನಾಪತ್ತೆ ನಾಟಕವಾಡಿದ್ದ ಯೋಧ ಜೈಲಿಗೆ

ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ಸಮೀಪ ಪ್ರೇಯಸಿಯನ್ನು ಜಲಪಾತದ ಬಳಿ ಕರೆದೊಯ್ದು ಬರ್ಬರವಾಗಿ ಹತ್ಯೆಗೈದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಯೋಧನೊಬ್ಬನ ಕರಾಳ ಕೃತ್ಯ ಬೆಳಕಿಗೆ ಬಂದಿದೆ. ಮದುವೆಗೆ ನಿರಂತರವಾಗಿ ಪೀಡಿಸುತ್ತಿದ್ದಳೆಂಬ ಕಾರಣಕ್ಕೆ ನಂಬಿ ಬಂದವಳನ್ನು ಉಸಿರುಗಟ್ಟಿಸಿ ಕೊಂದು, ನಂತರ ಶವವನ್ನು ಪೊದೆಗೆ ಎಸೆದು ಆಕೆಯ ಸಹೋದರನೊಂದಿಗೇ ನಾಪತ್ತೆಯಾಗಿರುವ ನಾಟಕವಾಡಿದ್ದ ಪಾಪಿ ಪ್ರಿಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Written By Krishna NK
Published: Nov 07, 2026, 16:45 IST | Updated: Nov 07, 2026, 16:49 IST
Image Credit: Crime news
Join

ಬೆಳಗಾವಿ: ಮದುವೆಗೆ ನಿರಂತರವಾಗಿ ಪೀಡಿಸುತ್ತಿದ್ದಳೆಂಬ ಕಾರಣಕ್ಕೆ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಯೋಧನೊಬ್ಬ ತನ್ನ ಪ್ರೇಯಸಿಯನ್ನು ಜಲಪಾತದ ಬಳಿ ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿರುವ ಬೆಚ್ಚಿಬೀಳಿಸುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ಸಮೀಪ ನಡೆದಿದೆ. ನಂಬಿ ಬಂದವಳನ್ನು ಕೊಂದ ಬಳಿಕ ಆಕೆಯ ಸಹೋದರನೊಂದಿಗೇ ಸೇರಿಕೊಂಡು ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದ ಹಂತಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿಯಾಗಿದ್ದ 25 ವರ್ಷದ ರಕ್ಷಿತಾ ಕೊಲೆಯಾದ ದುರ್ದೈವಿ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ 29 ವರ್ಷದ ಬಸಪ್ಪ ಸಾತಣ್ಣವರ್ ಕೊಲೆಗೈದ ಪಾಪಿ ಪ್ರಿಯಕರ. ಈ ಆರೋಪಿ ಬಿಹಾರದಲ್ಲಿ ನಿಯೋಜನೆಗೊಂಡಿರುವ 21ನೇ ಬಟಾಲಿಯನ್ ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ಬಲ) ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದನು.

ವಿವರಗಳ ಪ್ರಕಾರ, ಆರೋಪಿ ಬಸಪ್ಪ ಹಾಗೂ ರಕ್ಷಿತಾ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ದಿನೇ ದಿನೇ ರಕ್ಷಿತಾ ತನನ್ನು ಮದುವೆಯಾಗುವಂತೆ ಬಸಪ್ಪನ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಳು. ಈ ಮದುವೆ ವಿಚಾರವೇ ಇಬ್ಬರ ನಡುವೆ ಆಗಾಗ ಕಲಹಕ್ಕೆ ಕಾರಣವಾಗಿತ್ತು. ರಕ್ಷಿತಾಳ ಈ ನಿರಂತರ ಒತ್ತಡದಿಂದ ರೋಸಿಹೋಗಿದ್ದ ಬಸಪ್ಪ, ಆಕೆಯನ್ನು ಹೇಗಾದರೂ ಮಾಡಿ ಮುಗಿಸಲು ಸಂಚು ರೂಪಿಸಿದ್ದನು.

ಪ್ರವಾಸದ ನೆಪದಲ್ಲಿ ಕರೆದೊಯ್ದು ಕೃತ್ಯ
ಯೋಜನೆಯಂತೆ ಅಕ್ಟೋಬರ್ 28 ರಂದು ಬಸಪ್ಪ ಹಾರೂಗೇರಿಗೆ ಬಂದು ರಕ್ಷಿತಾಳನ್ನು ಬೈಕ್ ಮೇಲೆ ಹತ್ತಿಸಿಕೊಂಡು ಗೋಕಾಕ್ ಫಾಲ್ಸ್‌ಗೆ ಕರೆತಂದಿದ್ದನು. ಪ್ರೇಮಿಗಳಿಬ್ಬರೂ ಜಲಪಾತದ ರಸ್ತೆಯ ಬದಿಯ ಕಟ್ಟೆಯೊಂದರ ಮೇಲೆ ಕುಳಿತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಮತ್ತೊಮ್ಮೆ ಮದುವೆ ವಿಷಯ ಮುನ್ನೆಲೆಗೆ ಬಂದಿದ್ದು, ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆದಿದೆ. ಇದರಿಂದ ವಿಪರೀತ ಕೋಪಗೊಂಡ ಬಸಪ್ಪ, ಯುವತಿಯ ಕುತ್ತಿಗೆ ಹಿಸುಕಿ, ಬಳಿಕ ಅವಳದ್ದೇ ವೇಲ್‌ನಿಂದ ಗಂಟಲು ಬಿಗಿದು ಅತ್ಯಂತ ಕ್ರೂರವಾಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸಾಕ್ಷ್ಯ ನಾಶಕ್ಕೆ ವಿಫಲ ಯತ್ನ ಮತ್ತು ಕಣ್ಣೊರೆಸುವ ನಾಟಕ
ಕೊಲೆ ಮಾಡಿದ ಬಳಿಕ ಯಾರ ಕಣ್ಣಿಗೂ ಬೀಳದಂತೆ ಮೃತದೇಹವನ್ನು ಸಮೀಪದ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳುಪೊದೆ ಹಾಗೂ ಕಂಟೆಗಳ ಮಧ್ಯೆ ಎಸೆದು ಆರೋಪಿ ಅಲ್ಲಿಂದ ಪರಾರಿಯಾಗಿದ್ದನು. ಅಷ್ಟೇ ಅಲ್ಲದೆ, ತಾನು ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ಬಿಂಬಿಸಲು ಸ್ಥಳೀಯವಾಗಿ ಸಿಕ್ಕಾಪಟ್ಟೆ ನಾಟಕವಾಡಿದ್ದ. ರಕ್ಷಿತಾಳ ಸಹೋದರನೊಂದಿಗೇ ನೇರವಾಗಿ ಕೈಜೋಡಿಸಿ, "ಯುವತಿ ನಾಪತ್ತೆಯಾಗಿದ್ದಾಳೆ, ಹುಡುಕಿಕೊಡಿ" ಎಂದು ಆಕೆಯ ಕುಟುಂಬದವರ ಜತೆ ಸೇರಿಕೊಂಡು ಹುಡುಕಾಟದ ಡ್ರಾಮಾ ಮಾಡಿದ್ದನು. ಈ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿರುವ ಬಗ್ಗೆ ಅಧಿಕೃತ ದೂರು ಕೂಡ ದಾಖಲಾಗಿತ್ತು.

ಪೊಲೀಸ್ ತನಿಖೆಯಲ್ಲಿ ಬಯಲಾದ ಅಸಲಿ ರಹಸ್ಯ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ ಗೋಕಾಕ್ ಶಹರ ಠಾಣೆಯ ಪೊಲೀಸರಿಗೆ, ನಾಪತ್ತೆ ಪ್ರಕರಣದ ಹಿಂದೆ ಪ್ರಿಯಕರ ಬಸಪ್ಪನ ವರ್ತನೆಯ ಮೇಲೆ ತೀವ್ರ ಅನುಮಾನ ಮೂಡಿತ್ತು. ಕೂಡಲೇ ಆತನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ, ಬಸಪ್ಪ ತಾನೇ ನಡೆಸಿದ ಕೃತ್ಯದ ಕರಾಳ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಘಟನೆ ಕುರಿತು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಹಾಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ದೇಶ ಕಾಯುವ ಜವಾಬ್ದಾರಿಯುತ ಯೋಧನಾಗಿದ್ದುಕೊಂಡು, ತನ್ನನ್ನೇ ನಂಬಿ ಪ್ರೀತಿಸಿದ ಪ್ರೇಯಸಿಯನ್ನು ಹಸಿಬಿಸಿ ಮಣ್ಣು ಮಾಡಲು ಹೊರಟಿದ್ದ ಈ ಕರಾಳ ಕೃತ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಂತಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES