ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಸಿಎಂ ಸಿದ್ದು ಚಾರಿತ್ರ್ಯ ಹರಣಕ್ಕೆ ಯತ್ನ.. ಇಬ್ಬರು ಅರೆಸ್ಟ್..
ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳೆಯಲು ಯತ್ನಿಸಿರುವ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಬಿರುಗಾಳಿ ಎದ್ದಿದೆ. ರಾಜಕೀಯ ನಾಯಕರ ನಡುವೆ ವಾಗ್ವಾದ ಜೋರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಕಳಂಕ ತರಲು ಯತ್ನಿಸಿದ್ದ ವಿಡಿಯೋ ಹಲ್-ಚಲ್ ಸೃಷ್ಟಿ ಮಾಡಿತ್ತು. ವಿಡಿಯೋಗೆ ಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದಂತೆ ಪೊಲೀಸರ ತನಿಖೆಗೂ ವೇಗ ಸಿಕ್ಕಿದೆ. ವಿಡಿಯೋ ಅಪ್ಲೋಡ್ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಅಪರೇಷನ್ ಸುನಾಮಿ:
ಸ್ಟಿಂಗ್ ಅಪರೇಷನ್ ಸುನಾಮಿ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಕೈಪಾಳಯದಲ್ಲಿ ಸ್ಟಿಂಗ್ ವಿಡಿಯೋ ಸಂಚಲನ ಸೃಷ್ಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯರ 4 ದಶಕದ ಕಳಂಕ ರಹಿತ ರಾಜಕರಣಕ್ಕೆ ಕಪ್ಪು ಮಸಿ ಬಳಿಯಲು ಕಿಡಿಗೇಡಿಗಳಿಂದ ಷಡ್ಯಂತ್ರ ನಡೆದಿದೆ. ಕೋರ್ಟ್ ಮೊರೆ ಹೋಗಿದ್ದ ಸಿದ್ದರಾಮಯ್ಯ ಅಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ. ವಿಪಕ್ಷಗಳಿಂದ ಸಿಬಿಐ ತನಿಖೆಗೆ ಆಗ್ರಹವಾಗ್ತಿದ್ದಂತೆ, ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನ ಲಾಕ್ ಮಾಡಿದ್ದಾರೆ.
ರಾಜಕೀಯ ಷಡ್ಯಂತ್ರ ರೂಪಿಸಿ, ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ತಮ್ಮಿ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ವಿಡಿಯೋ ವಿರುದ್ಧವಾಗಿ ಖುದ್ದು ಸಿದ್ದರಾಮಯ್ಯ ಅವರೇ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದ ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನೂ ಒದಗಿಸಿದ್ದರು. ಈ ಬೆನ್ನಲ್ಲೆ ಪ್ರಕರಣದ ದಾಖಲಿಸಿಕೊಂಡ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಸುಳ್ಳು ಸುದ್ದಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿರುವ ಇಬ್ಬರೂ ಆರೋಪಿಗಳನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ವಿಡಿಯೋ ಹೇಗೆ ಸಿಗ್ತು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಸಿದ್ದರಾಮಯ್ಯ ಅವರ ಹೆಸರಿಗೆ ಚ್ಯುತಿ ತರುವಂತಿರುವ ವಿಡಿಯೋ ಬಗ್ಗೆ ಪ್ರಕರಣದ ದಾಖಲಾಗಿರುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಪ್ರಕರಣ ಕುರಿತು ಎಫ್ಐಆರ್ ಆಗಿತ್ತು, ಸಮಗ್ರವಾಗಿ ನಾವು ತನಿಖೆ ನಡೆಸುತ್ತೇವೆ. ಅಲ್ಲದೆ ವಿಡಿಯೋದಲ್ಲಿರುವ ವಿಷಯಗಳೆಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಡಿಯೊವನ್ನು ಯಾರು ಚಿತ್ರೀಕರಿಸಿದ್ದಾರೆ, ಎಲ್ಲಿಗೆ ಅಪ್ಲೋಡ್ ಮಾಡಲಾಗಿದೆ ಮತ್ತು ಇದರ ಹಿಂದೆ ಯಾರಿದ್ದಾರೆ ಅಂತ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಸದ್ಯ ವಿಡಿಯೋ ಮೂಲ ಹುಡುಕಿ ಹೊರಟ ಪೊಲೀಸರು ಸೂತ್ರಧಾರಿಗಳ ಪತ್ತೆಗೆ ಮುಂದಾಗಿದೆ. ಇಬ್ಬರನ್ನ ವಿಚಾರಣೆ ಮಾಡ್ತಿದ್ದು, ಇದರ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಒಟ್ನಲ್ಲಿ ಸಿದ್ದರಾಮಯ್ಯ ಅವರ ಶುದ್ಧ ರಾಜಕೀಯ ಜೀವನಕ್ಕ ಮಸಿ ಬಳೆಯುವ ಉದ್ದೇಶದಿಂದ ಈ ವಿಡಿಯೋ ಹರಿಬಿಡಲಾಗಿದ್ಯಾ? ಇದರ ಹಿಂದೆ ಇರುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖೆ ನಂತರವೇ ಉತ್ತರ ಸಿಗಬೇಕಿದೆ.