6ನೇ ದಿನಕ್ಕೆ ಕಾಲಿಟ್ಟ ಆಶಾ ಹೋರಾಟ.. ನಟಿ ರಮ್ಯಾ ಬೆಂಬಲ, ಬೇಡಿಕೆ ಈಡೇರುವವರೆಗೂ ಧರಣಿ ನಿಲ್ಲಲ್ಲ!
Ashas protest : ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕಾಗಿ ನಡೆಸುತ್ತಿರುವ ಹೋರಾಟ ಇಂದು ಆರನೆ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಗೌರವಧನ ಹೆಚ್ಚಳದ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಮಾಸಿಕ ಗೌರವಧನವನ್ನು ₹15,000ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆ ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಚಿವ ಸಂಪುಟದಲ್ಲಿ ಈ ವಿಚಾರವಾಗಿ ಚರ್ಚಿಸಿ ಸೂಕ್ತ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಮನವಿಗೂ ಕಾರ್ಯಕರ್ತೆಯರು ಮಣಿದಿಲ್ಲ. ಕಳೆದ ಬಾರಿ ಸರ್ಕಾರ ನೀಡಿದ್ದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಆಶ್ವಾಸನೆಗಳಿಗೆ ಒಪ್ಪುವುದಿಲ್ಲ ಎಂಬುದು ಕಾರ್ಯಕರ್ತೆಯರ ಸ್ಪಷ್ಟ ನಿಲುವಾಗಿದೆ. ಗೌರವಧನ ಹೆಚ್ಚಳದ ಕುರಿತು ಅಧಿಕೃತ ಆದೇಶ ಪತ್ರ ಕೈ ಸೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡೆಸಿದ ಸಂಧಾನ ಮಾತುಕತೆಯೂ ಫಲ ನೀಡಿಲ್ಲ. ಮತ್ತೊಂದೆಡೆ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟಿ ರಮ್ಯಾ ಕೂಡ ಬೆಂಬಲ ಸೂಚಿಸಿದ್ದಾರೆ. ಕೇವಲ ₹5,000 ಗೌರವಧನದಲ್ಲಿ ಒಂದು ಕುಟುಂಬವನ್ನು ಹೇಗೆ ನಿರ್ವಹಿಸಲು ಸಾಧ್ಯ? ಎಂದು ಪ್ರಶ್ನಿಸಿರುವ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಶೀಘ್ರವೇ ಈಡೇರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರ 10 ಪ್ರಮುಖ ಬೇಡಿಕೆಗಳು
1. ತಿಂಗಳಿಗೆ ₹15,000 ಗೌರವಧನ: ಪ್ರತಿ ತಿಂಗಳು ಕನಿಷ್ಠ ₹15 ಸಾವಿರ ನಿಗದಿತ ಗೌರವಧನ ನೀಡಬೇಕು.
2. ಮೊಬೈಲ್ ಫೋನ್ ಸೌಲಭ್ಯ: ಆ್ಯಪ್ ಆಧಾರಿತ ಕೆಲಸಕ್ಕೆ ಉತ್ತಮ ಗುಣಮಟ್ಟದ ಮೊಬೈಲ್ ಹಾಗೂ ರೀಚಾರ್ಜ್ ಭತ್ಯೆ ನೀಡಬೇಕು.
3. 6 ತಿಂಗಳ ಹೆರಿಗೆ ರಜೆ: ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು.
4. ಬಾಕಿ ಹಣ ಬಿಡುಗಡೆ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರಬೇಕಿರುವ ಬಾಕಿ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು.
5. ಆಶಾ ಫೆಸಿಲಿಟೇಟರ್‌ಗಳ ಮರುನೇಮಕ: ಫೆಬ್ರವರಿ 25, 2025ರಿಂದ ಕೆಲಸ ಕಳೆದುಕೊಂಡಿರುವ ಫೆಸಿಲಿಟೇಟರ್‌ಗಳನ್ನು ಮತ್ತೆ ನೇಮಕ ಮಾಡಬೇಕು.
6. ಬಾಕಿ ₹1,500 ಪ್ರೋತ್ಸಾಹಧನ: 2024-25ನೇ ಸಾಲಿನ ಹೆಚ್ಚುವರಿ ಮಾಸಿಕ ₹1,500 ಪ್ರೋತ್ಸಾಹಧನದ ಬಾಕಿ ಹಣ ಪಾವತಿಸಬೇಕು.
7. NIOS ತರಬೇತಿ ಭತ್ಯೆ: ಪ್ರತಿ NIOS ತರಬೇತಿ ಕಾರ್ಯಕ್ರಮ ಪೂರ್ಣಗೊಳಿಸಿದವರಿಗೆ ₹5,000 ವಿಶೇಷ ಪ್ರೋತ್ಸಾಹಧನ ನೀಡಬೇಕು.
8. ಅನಾರೋಗ್ಯದ ಸಂದರ್ಭದಲ್ಲಿ ನೆರವು: ಗಂಭೀರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಮೂರು ತಿಂಗಳ ಗೌರವಧನ ಮತ್ತು ಪ್ರೋತ್ಸಾಹಧನ ನೀಡಬೇಕು.
9. ನಿವೃತ್ತಿ ಸೌಲಭ್ಯ: ನಿವೃತ್ತಿಯ ಸಂದರ್ಭದಲ್ಲಿ ₹5 ಲಕ್ಷ ಆರ್ಥಿಕ ನೆರವು ನೀಡಬೇಕು.
10. ಅನಗತ್ಯ ಕೆಲಸಗಳಿಂದ ಮುಕ್ತಿ: ಆರೋಗ್ಯ ಇಲಾಖೆಗೆ ಸಂಬಂಧಿಸದ ಇತರೆ ಕೆಲಸಗಳನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸಬಾರದು.
ಮುಖ್ಯ ಬೇಡಿಕೆಯೇ ತಿಂಗಳಿಗೆ ₹15,000 ನಿಗದಿತ ಗೌರವಧನ ನೀಡಬೇಕು ಎಂಬುದು ಆಶಾ ಕಾರ್ಯಕರ್ತೆಯರ ಪ್ರಮುಖ ಆಗ್ರಹವಾಗಿದೆ. ಒಟ್ಟಿನಲ್ಲಿ, ಆರನೇ ದಿನವೂ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಹೋರಾಟ ಮುಂದುವರಿದಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ.