ಚಳಿ, ಗಾಳಿಗೂ ಜಗ್ಗದ ಆಶಾ ಕಾರ್ಯಕರ್ತೆಯರು..ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅಹೋರಾತ್ರಿ ಧರಣಿ!
ASHA workers protest enters fifth day: ಬೆಂಗಳೂರು: ಮಾಸಿಕ 15 ಸಾವಿರ ರೂಪಾಯಿ ಗೌರವಧನ ನಿಗದಿಪಡಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಹಗಲು-ರಾತ್ರಿ ಎನ್ನದೆ, ಚಳಿ-ಗಾಳಿಯನ್ನೂ ಲೆಕ್ಕಿಸದೆ ನಡುರಸ್ತೆಯಲ್ಲೇ ಕುಳಿತು ಮಹಿಳೆಯರು ಹೋರಾಟ ಮುಂದುವರಿಸಿದ್ದಾರೆ..
ಬೆಂಗಳೂರು: ಮಾಸಿಕ 15 ಸಾವಿರ ರೂಪಾಯಿ ಗೌರವಧನ ನಿಗದಿಪಡಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಹಗಲು-ರಾತ್ರಿ ಎನ್ನದೆ, ಚಳಿ-ಗಾಳಿಯನ್ನೂ ಲೆಕ್ಕಿಸದೆ ನಡುರಸ್ತೆಯಲ್ಲೇ ಕುಳಿತು ಮಹಿಳೆಯರು ಹೋರಾಟ ಮುಂದುವರಿಸಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತೆಯರು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ಹೋರಾಟಕ್ಕೆ ಧುಮುಕಿರುವುದು ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಿಸಿದೆ. ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯೂ ಪ್ರತಿಭಟನಾ ಸ್ಥಳದಲ್ಲೇ ಉಳಿದು ಹೋರಾಟ ನಡೆಸುತ್ತಿರುವ ಮಹಿಳೆಯರು ಸರ್ಕಾರದ ಗಮನ ಸೆಳೆಯಲು ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.
15 ಸಾವಿರ ಗೌರವಧನಕ್ಕೆ ಪ್ರಮುಖ ಬೇಡಿಕೆ!
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂಪಾಯಿ ನಿಶ್ಚಿತ ಗೌರವಧನ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳ ಅನುಷ್ಠಾನದಲ್ಲಿ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಗರ್ಭಿಣಿಯರ ಆರೈಕೆ, ಮಕ್ಕಳ ಆರೋಗ್ಯ, ಲಸಿಕಾ ಕಾರ್ಯಕ್ರಮ ಸೇರಿದಂತೆ ಹಲವು ಆರೋಗ್ಯ ಸೇವೆಗಳಲ್ಲಿ ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದರೂ ತಮ್ಮ ಶ್ರಮಕ್ಕೆ ತಕ್ಕ ಗೌರವಧನ ಸಿಗುತ್ತಿಲ್ಲ ಎಂಬುದು ಕಾರ್ಯಕರ್ತೆಯರ ಅಳಲಾಗಿದೆ.
ಚಳಿ-ಗಾಳಿಗೂ ಜಗ್ಗದ ಹೋರಾಟಗಾರ್ತಿಯರು!
ಪ್ರತಿಭಟನೆ ಆರಂಭವಾಗಿ ಈಗಾಗಲೇ ಐದು ದಿನಗಳು ಕಳೆದಿವೆ. ಹಗಲು ಬಿಸಿಲು, ರಾತ್ರಿ ಚಳಿ ಹಾಗೂ ಗಾಳಿಯ ನಡುವೆಯೂ ಮಹಿಳೆಯರು ಧರಣಿ ಮುಂದುವರಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರದಿಂದ ಕೇವಲ ಭರವಸೆ ನೀಡುವುದಲ್ಲ, ತಮ್ಮ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟರೂ ಕಾರ್ಯಕರ್ತೆಯರ ಹೋರಾಟದ ಉತ್ಸಾಹ ಮಾತ್ರ ಕುಗ್ಗಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದೆಡೆ ಆಶಾ ಕಾರ್ಯಕರ್ತೆಯರ ಪಟ್ಟು, ಮತ್ತೊಂದೆಡೆ ಸರ್ಕಾರದ ಮುಂದಿರುವ ಸವಾಲು. 15 ಸಾವಿರ ರೂಪಾಯಿ ಮಾಸಿಕ ಗೌರವಧನದ ಬೇಡಿಕೆಗೆ ಸರ್ಕಾರ ಅಸ್ತು ಎನ್ನುತ್ತಾ? ಅಥವಾ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.