SOCIAL MEDIA

Newsletter

PARTNER SITES
Select Language Select State

ಸಿಎಂ 2000 ರೂ. ಹೆಚ್ಚಳ ಘೋಷಣೆಗೂ ಒಪ್ಪದ ಆಶಾ ಕಾರ್ಯಕರ್ತೆಯರು.! ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಕೆ

ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ. ಲಿಖಿತ ಭರವಸೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 28, 2026, 21:49 IST | Updated: Nov 28, 2026, 21:51 IST
Image Credit: ASHA Protest
Join

ಬೆಂಗಳೂರು: ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ. ಸರ್ಕಾರದ ಕಡೆಯಿಂದ ಲಿಖಿತ ಭರವಸೆ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತೆಯರು ಸ್ಪಷ್ಟಪಡಿಸಿದ್ದಾರೆ.

ಹೌದು.. ಇಂದು ಸಂಜೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಗೌರವಧನವನ್ನು 2,000 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಲಾಯಿತು. ಸಭೆ ಮುಗಿಯುವ ಹಂತದಲ್ಲಿ ಎಲ್ಲವೂ ಸುಗಮವಾಗಿ ಮುಗಿಯಿತು ಎನ್ನುವಷ್ಟರಲ್ಲೇ, ಕೆಲವು ಕಾರ್ಯಕರ್ತೆಯರು ಮತ್ತು ಮುಖಂಡರು ಸರ್ಕಾರದ ತೀರ್ಮಾನಕ್ಕೆ ಪೂರ್ಣ ಒಪ್ಪಿಗೆ ನೀಡದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಿರುಗೇಟು ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರ ನಿಯೋಗದೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನಡೆಸಿದ ಮೂರನೇ ಸುತ್ತಿನ ಮಾತುಕತೆ ಇದಾಗಿದೆ. ಈ ಸಭೆಗೂ ಮುನ್ನ ಸಿಎಂ ಅವರು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ರಾಜ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ, ಬೇಡಿಕೆಗಳನ್ನು ಈಡೇರಿಸಿದರೆ ಏನೆಲ್ಲಾ ಸಾಧಕ-ಬಾಧಕಗಳಾಗುತ್ತವೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ನಂತರ ನಿಯೋಗದೊಂದಿಗೆ ಕುಳಿತು ಮಾತನಾಡಿದ ಮುಖ್ಯಮಂತ್ರಿಗಳು, ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿ ಮಾಸಿಕ ಗೌರವಧನದಲ್ಲಿ ಎರಡು ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ತಿಳಿಸಿದರು. ಈ ಘೋಷಣೆಯಿಂದ ಸಂತಸಗೊಂಡ ಕೆಲವು ಕಾರ್ಯಕರ್ತೆಯರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹೂಗುಚ್ಚ ನೀಡಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದರು.

ಸಭೆಯ ಬಳಿಕ ಸಿಎಂ ಹೇಳಿದ್ದೇನು?
ಸಂಧಾನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಕಳೆದ ಹನ್ನೆರಡು ದಿನಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು. ನಿನ್ನೆ ರಾತ್ರಿಯೇ ಯು.ಟಿ. ಖಾದರ್ ಅವರ ಜತೆ ಮಾತನಾಡುವಂತೆ ಸೂಚಿಸಿದ್ದೆ. ಕಳೆದ ಮೂರು ವರ್ಷಗಳಿಂದ ಆಶಾ ಕಾರ್ಯಕರ್ತೆಯರ ಗೌರವಧನದಲ್ಲಿ ಯಾವುದೇ ಏರಿಕೆ ಆಗಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು. ಹಿಂದೆ ಸಿದ್ದರಾಮಯ್ಯ ಅವರು ಏರಿಕೆ ಮಾಡಿಕೊಡುವುದಾಗಿ ಹೇಳಿದ್ದರಂತೆ, ಆದರೆ ಅದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ. ಜತೆಗೆ ಕೇಂದ್ರ ಸರ್ಕಾರವೂ ತನ್ನ ಕಡೆಯಿಂದ ನೀಡುವ ವಂತಿಗೆಯನ್ನು ಹೆಚ್ಚಿಸಿಲ್ಲ ಎಂದು ವಿವರಿಸಿದರು. ಅಷ್ಟೇ ಅಲ್ಲದೆ, ಆಶಾ ಕಾರ್ಯಕರ್ತೆಯರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಗೌರವಧನದಲ್ಲಿ ಎರಡು ಸಾವಿರ ರೂಪಾಯಿ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಇದು ಮುಂದಿನ ವರ್ಷದ ಜನವರಿ ಒಂದರಿಂದ ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.

ಪ್ರತಿಭಟನೆ ಅಂತ್ಯದ ಬಗ್ಗೆ ಗೊಂದಲ
ಸಿಎಂ ನೀಡಿದ ಈ ಭರವಸೆಯ ಬೆನ್ನಲ್ಲೇ ಪ್ರತಿಭಟನೆಗೆ ತೆರೆ ಎಳೆಯುವುದಾಗಿ ನಾಗಲಕ್ಷ್ಮೀ ಅವರು ತಿಳಿಸಿದ್ದರು. ಆದರೆ ಈಗ ಲಿಖಿತ ಆದೇಶ ಅಥವಾ ಸ್ಪಷ್ಟ ಲಿಖಿತ ಮಾಹಿತಿ ಬರುವವರೆಗೆ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.. ಇದರ ಬೆನ್ನಲ್ಲೇ ಪ್ರತಿಭಟನೆಯ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES