ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!
ಕುಮಾರಸ್ವಾಮಿ ಅವರೇ ತಮ್ಮ ಪಾಪದ ಕೊಡ ತುಂಬಿರುವ ಕಾರಣಕ್ಕೇ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾರೆ. ಯಾರು ಕಳ್ಳರು, ಯಾರು ಸುಳ್ಳರು ಎಂಬುದು ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ," ಎಂದು ಕಿಡಿಕಾರಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬವನ್ನು ನಾಶಪಡಿಸಲು 600 ಕೋಟಿ ರೂಪಾಯಿಗಳ ಭಾರಿ ಡೀಲ್ ನಡೆದಿದೆ ಹಾಗೂ ಇದರ ಹಿಂದೆ ಮುಖ್ಯಮಂತ್ರಿಯವರ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಬಾಗಲಕೋಟೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ವಿಜಯಾನಂದ ಕಾಶಪ್ಪನವರ, ಹೆಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ, "ಕುಮಾರಸ್ವಾಮಿ ಅವರೇ ತಮ್ಮ ಪಾಪದ ಕೊಡ ತುಂಬಿರುವ ಕಾರಣಕ್ಕೇ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾರೆ. ಯಾರು ಕಳ್ಳರು, ಯಾರು ಸುಳ್ಳರು ಎಂಬುದು ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ," ಎಂದು ಕಿಡಿಕಾರಿದ್ದಾರೆ. ಕೊಟ್ಟ ಕುದುರೆ ಏರದವನು ಎಂದಿಗೂ ಶೂರನೂ ಅಲ್ಲ, ಧೀರನೂ ಅಲ್ಲ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಮಂತ್ರಿಯಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುವುದನ್ನು ಬಿಟ್ಟು ದಿನಬೆಳಗಾದರೆ ಸುಮ್ಮನೆ ಆರೋಪ ಮಾಡುವುದೇ ಅವರ ಕಸುಬಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಇರುವುದನ್ನು ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ತೀವ್ರ ಹತಾಶೆಯಿಂದ ಅವರು ಯಾವುದೇ ಆಧಾರವಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಎರಡು ಬಾರಿ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವರಾಗಿರುವ ಹಿರಿಯ ನಾಯಕರೊಬ್ಬರು ಈ ರೀತಿ ಆಧಾರರಹಿತವಾಗಿ ಮಾತನಾಡಬಾರದು ಎಂದು ಹರಿಹಾಯ್ದರು. ಬೆಂಗಳೂರಿನಲ್ಲಿ ಕುಳಿತುಕೊಂಡು ಸ್ಟಿಂಗ್ ಆಪರೇಷನ್ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಬಿಟ್ಟಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದು, ಇವರ ಮಾತುಗಳನ್ನು ಕೇಳಿ ಜನತೆ ರೋಸಿಹೋಗಿದ್ದಾರೆ ಎಂದು ಟೀಕಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮೂಲತಃ ನೋಟಿಫಿಕೇಶನ್ ಮಾಡಿದ್ದೇ ಖುದ್ದು ಕುಮಾರಸ್ವಾಮಿ ಕುಟುಂಬದವರು. ಈಗ ತಮ್ಮ ಸ್ವಂತ ಭೂಮಿ ಹೋಗುತ್ತದೆ ಎಂಬ ಹೊಟ್ಟೆಕಿಚ್ಚಿಗೆ ಅಪ್ಪ, ಮಗ ಹಾಗೂ ಹೆಂಡತಿ ಎಲ್ಲರೂ ಸೇರಿಕೊಂಡು ರಸ್ತೆಗೆಳಿದು ನಾಟಕವಾಡುತ್ತಿದ್ದಾರೆ ಎಂದು ಕಾಶಪ್ಪನವರ ಲೇವಡಿ ಮಾಡಿದರು. ಒಟ್ಟಿನಲ್ಲಿ, ಹೆಚ್‌ಡಿಕೆ ಹಾಗೂ ಆಡಳಿತ ಪಕ್ಷದ ನಾಯಕರ ನಡುವಿನ ಈ ಮಾತಿನುಂಗುರ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಿ ಮುಟ್ಟಲಿದೆ ಎಂಬ ಕುತೂಹಲ ಮೂಡಿಸಿದೆ.