ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು-ವಕೀಲ ಪ್ರಜ್ವಲ್ ಸ್ಪಷ್ಟನೆ!
ಮಾರ್ಕೆಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳು ಸಂಪೂರ್ಣವಾಗಿ ಫ್ಯಾಬ್ರಿಕೇಟೆಡ್ ಆಗಿದ್ದು, ನ್ಯಾಯಾಲಯವು ಅಂತೆ-ಕಂತೆಗಳ ಮಾತುಗಳನ್ನು ಒಪ್ಪುವುದಿಲ್ಲ, ಬದಲಿಗೆ ಅಧಿಕೃತ ದಾಖಲೆಗಳನ್ನು ಮಾತ್ರ ಪರಿಗಣಿಸುತ್ತದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.
ಬೆಂಗಳೂರು: ಯುವ ನಟ ಧನ್ವೀರ್ ವಿರುದ್ಧ ಕೇಳಿಬಂದಿರುವ 10 ಕೋಟಿ ರೂಪಾಯಿ ಹಣಕಾಸು ವ್ಯವಹಾರದ ಆರೋಪಗಳು ಹಾಗೂ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋಗಳ ಬಗ್ಗೆ ಧನ್ವೀರ್ ಪರ ವಕೀಲ ಪ್ರಜ್ವಲ್ ಸ್ಪಷ್ಟನೆ ನೀಡಿದ್ದಾರೆ.
'ಜೀ ಕನ್ನಡ ನ್ಯೂಸ್' ಜೊತೆ ಮಾತನಾಡಿದ ಅವರು, ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಕೆಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳು ಸಂಪೂರ್ಣವಾಗಿ ಫ್ಯಾಬ್ರಿಕೇಟೆಡ್ ಆಗಿದ್ದು, ನ್ಯಾಯಾಲಯವು ಅಂತೆ-ಕಂತೆಗಳ ಮಾತುಗಳನ್ನು ಒಪ್ಪುವುದಿಲ್ಲ, ಬದಲಿಗೆ ಅಧಿಕೃತ ದಾಖಲೆಗಳನ್ನು ಮಾತ್ರ ಪರಿಗಣಿಸುತ್ತದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.ಜೈಲಿನಿಂದ ದರ್ಶನ್ ಅವರು ಸಂದೇಶ ಕಳುಹಿಸಿದ್ದಾರೆ ಎನ್ನುವ ವಾದಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವ ಅವರು, ಧನ್ವೀರ್ ಮೊದಲ ದಿನದಿಂದಲೂ ದರ್ಶನ್ ಅವರ ಜೊತೆಯಲ್ಲಿದ್ದು, ಅವರನ್ನು ಕಾನೂನುಬದ್ಧವಾಗಿ ಹೊರತರುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಹಣಕಾಸಿನ ವಿಚಾರ ಹಾಗೂ 10 ಕೋಟಿ ವ್ಯವಹಾರದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಕೀಲರು, ಈ ಸಂಬಂಧ ಜಾರಿ ನಿರ್ದೇಶನಾಲಯ (ED), ಸಿಬಿಐ ಅಥವಾ ಸಿಸಿಬಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ತನಿಖೆಗೂ ಧನ್ವೀರ್ ಸಂಪೂರ್ಣವಾಗಿ ಸಿದ್ಧರಿದ್ದಾರೆ ಎಂದು ಘೋಷಿಸಿದ್ದಾರೆ.
ಪೊಲೀಸರಿಂದ ನೋಟಿಸ್ ಬಂದ ಬಳಿಕ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದಿದ್ದಾರೆ.ವಿಜಯಲಕ್ಷ್ಮಿ ಅವರ ಜೊತೆಗಿನ ಒಡನಾಟ ಈಗಲೂ ಮುಂದುವರಿದಿದೆ ಎಂದಿರುವ ಅವರು, ಈ ಪ್ರಕರಣವು ಒಂದು ಥ್ರಿಲ್ಲರ್ ಸಿನಿಮಾದಂತೆ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸತ್ಯಗಳು ಹೊರಬರಲಿವೆ. ನಮ್ಮ ಏಕೈಕ ಹೋರಾಟ ಹಾಗೂ ಗುರಿ ದರ್ಶನ್ ಅವರನ್ನು ಬೇಗ ಹೊರತರುವುದು ಮಾತ್ರ ಎಂದು ವಕೀಲ ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.