ಯುನೆಸ್ಕೋ ತಜ್ಞರಿಂದ ಐತಿಹಾಸಿಕ ತುಂಗಭದ್ರಾ ಅಣೆಕಟ್ಟಿಗೆ ಭೇಟಿ
ಅಂತರರಾಷ್ಟ್ರೀಯ ತಜ್ಞರಾದ ಜಾರ್ಜ್ ಅಬುಂಗಾ ಹಾಗೂ ಐಕೋಮಸ್ ಪ್ರತಿನಿಧಿ ಇಚಿತಾ ಶಿಮೋದಾ ನೇತೃತ್ವದ ತಂಡವು ಪ್ರಸಿದ್ಧ ಶ್ರೀ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿ, ಅಲ್ಲಿನ ಭವ್ಯ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು.
ವಿಜಯನಗರ: ವಿಶ್ವ ಪಾರಂಪರಿಕ ತಾಣವಾಗಿರುವ ಐತಿಹಾಸಿಕ ಹಂಪಿಗೆ ಯುನೆಸ್ಕೋ ಮತ್ತು ಐಕೋಮಸ್ ಅಂತರರಾಷ್ಟ್ರೀಯ ತಜ್ಞರ ತಂಡವು ಭೇಟಿ ನೀಡಿ, ಇಲ್ಲಿನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದೆ.ಹಂಪಿಯ ವಿಶಿಷ್ಟ ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಪರಂಪರೆಯ ಅರಿವು ಪಡೆದ ಈ ತಂಡವು, ಸ್ಮಾರಕಗಳ ಮೂಲ ಸ್ವರೂಪವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳನ್ನು ನಡೆಸಿದೆ.
ಅಂತರರಾಷ್ಟ್ರೀಯ ತಜ್ಞರಾದ ಜಾರ್ಜ್ ಅಬುಂಗಾ ಹಾಗೂ ಐಕೋಮಸ್ ಪ್ರತಿನಿಧಿ ಇಚಿತಾ ಶಿಮೋದಾ ನೇತೃತ್ವದ ತಂಡವು ಪ್ರಸಿದ್ಧ ಶ್ರೀ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿ, ಅಲ್ಲಿನ ಭವ್ಯ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು. ಬಳಿಕ ಐತಿಹಾಸಿಕ ರಥಬೀದಿಯಲ್ಲಿ ಸಂಚರಿಸಿ ಪ್ರಾಚೀನ ಸ್ಮಾರಕಗಳನ್ನು ಕಣ್ತುಂಬಿಕೊಂಡಿತು. ಹಂಪಿಯ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಳ್ಳಲು ಹಾಗೂ ಮುಂದಿನ ಪೀಳಿಗೆಗೆ ಈ ಐತಿಹಾಸಿಕ ಶ್ರೀಮಂತಿಕೆಯನ್ನು ವರ್ಗಾಯಿಸಲು ಕೈಗೊಳ್ಳಬೇಕಾದ ಸುಸ್ಥಿರ ಪ್ರವಾಸೋದ್ಯಮ ಮತ್ತು ಸಂರಕ್ಷಣಾ ಕ್ರಮಗಳ ಬಗ್ಗೆ ತಂಡವು ಒತ್ತು ನೀಡಿತು.
ಈ ಭೇಟಿಯ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ ಬಿ. ಸದಾನಂದ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಗರಿಮಾ ಪನ್ವಾರ್ ಹಾಗೂ ಎಎಸ್‌ಐ ಅಧೀಕ್ಷಕ ರಾಮಕೃಷ್ಣ ರೆಡ್ಡಿ ಅವರು ಉಪಸ್ಥಿತರಿದ್ದು, ತಜ್ಞರ ತಂಡಕ್ಕೆ ಹಂಪಿಯ ಇತಿಹಾಸ ಮತ್ತು ಸಂರಕ್ಷಣಾ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾಡಳಿತ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜವಾಬ್ದಾರಿಗಳ ಕುರಿತೂ ಚರ್ಚಿಸಲಾಯಿತು.
ಅಲ್ಲದೆ, ಯುನೆಸ್ಕೋ ತಂಡವು ಐತಿಹಾಸಿಕ ತುಂಗಭದ್ರಾ ಅಣೆಕಟ್ಟಿಗೂ ಭೇಟಿ ನೀಡಿ ವಿಶೇಷ ವೀಕ್ಷಣೆ ನಡೆಸಿತು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರೊಂದಿಗೆ ಜಲಾಶಯದ ಕಾರ್ಯವೈಖರಿ, ನೀರಿನ ಸಂಗ್ರಹ ಸಾಮರ್ಥ್ಯ, ಅಣೆಕಟ್ಟಿನ ತಾಂತ್ರಿಕ ವ್ಯವಸ್ಥೆ ಹಾಗೂ ಇದರ ಐತಿಹಾಸಿಕ ಹಿನ್ನೆಲೆಯನ್ನು ತಂಡವು ಕುತೂಹಲದಿಂದ ವೀಕ್ಷಿಸಿತು. ವಿಜಯನಗರ ಸಾಮ್ರಾಜ್ಯದ ಉಗಮ ಮತ್ತು ವಿಕಾಸದಲ್ಲಿ ತುಂಗಭದ್ರಾ ನದಿಯ ಮಹತ್ವದ ಕುರಿತು ಅಧಿಕಾರಿಗಳು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಯುನೆಸ್ಕೋ ಮತ್ತು ಐಕೋಮಸ್ ತಂಡದ ಈ ಮಹತ್ವದ ಭೇಟಿಯು ಹಂಪಿ ಸ್ಮಾರಕಗಳ ಜಾಗತಿಕ ಮಟ್ಟದ ಸಂರಕ್ಷಣೆಗೆ ಮತ್ತಷ್ಟು ಬಲ ತುಂಬಿದೆ.