ಇಂದು ನಮ್ಮ ಮನೆಗಳಲ್ಲಿ ಸೀಲಿಂಗ್ ಫ್ಯಾನ್ ಇರುವುದು ತೀರಾ ಸಾಮಾನ್ಯ ವಿಷಯ. ಬೇಸಿಗೆಯ ಬಿಸಿಲು ಶುರುವಾಯಿತೆಂದರೆ ಸಾಕು, ಫ್ಯಾನ್ ಸ್ವಿಚ್ ಹಾಕದೇ ನಮಗೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಆದರೆ, ಒಂದು ಕಾಲದಲ್ಲಿ ಈ ಸಾಧಾರಣ ಫ್ಯಾನ್ ಪ್ರತಿಯೊಬ್ಬರ ಮನೆಯಲ್ಲೂ ಇರಲಿಲ್ಲ! ಶ್ರೀಮಂತರು ಮತ್ತು ರಾಜಮನೆತನದವರ ಐಷಾರಾಮಿ ಸಂಕೇತವಾಗಿದ್ದ ಈ ವಿದ್ಯುತ್ ಉಪಕರಣ, ಇಂದು ಭಾರತದ ಪ್ರತಿಯೊಂದು ಕುಟುಂಬದ ಅತ್ಯಗತ್ಯ ಅಂಗವಾಗಿ ಹೇಗೆ ರೂಪಾಂತರಗೊಂಡಿತು ಎಂಬುದು ನಿಜಕ್ಕೂ ಸ್ವಾರಸ್ಯಕರ ಇತಿಹಾಸ.
ವಸಾಹತುಶಾಹಿ ಕಾಲದ 'ಪಂಖಾ' ಮತ್ತು ಬ್ರಿಟಿಷರ ಪರದಾಟ
17ನೇ ಶತಮಾನದಲ್ಲಿ ಬ್ರಿಟಿಷರು ಭಾರತಕ್ಕೆ ಬಂದಾಗ, ಇಲ್ಲಿನ ವಿಪರೀತ ಬಿಸಿಲು ಮತ್ತು ಆರ್ದ್ರತೆಯಿಂದ (Humidity) ಕಂಗಾಲಾಗಿದ್ದರು. ಈ ಹವಾಮಾನವನ್ನು ತಡೆಯಲು ಅವರು ಒಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡರು. ಮರದ ಚೌಕಟ್ಟಿಗೆ ದೊಡ್ಡ ಆಯತಾಕಾರದ ಬಟ್ಟೆಯನ್ನು ಕಟ್ಟಿ, ಅದನ್ನು ಹಗ್ಗದ ಸಹಾಯದಿಂದ ತೂಗಾಡಿಸುವ 'ಪಂಖಾ' ವ್ಯವಸ್ಥೆಯನ್ನು ಜಾರಿಗೆ ತಂದರು.
ಈ ಪಂಖಾಗಳನ್ನು ನಿರಂತರವಾಗಿ ಬೀಸಲೆಂದೇ 'ಪಂಖಾವಾಲಾ' ಎಂಬ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಇದು ಎಷ್ಟು ವೆಚ್ಚದಾಯಕವಾಗಿತ್ತೆಂದರೆ, ರಾಜರು, ಉನ್ನತ ಬ್ರಿಟಿಷ್ ಅಧಿಕಾರಿಗಳು ಮತ್ತು ಅತ್ಯಂತ ಶ್ರೀಮಂತ ಜಮೀನ್ದಾರರು ಮಾತ್ರ ಇದನ್ನು ನಿಭಾಯಿಸಲು ಸಾಧ್ಯವಿತ್ತು. ನಂತರದ ದಿನಗಳಲ್ಲಿ ಈ ಪಂಖಾವಾಲಾ ಪದ್ಧತಿ ಅಮೆರಿಕ ಮತ್ತು ಮೆಕ್ಸಿಕೋದ ಗಣ್ಯರ ಮನೆಗಳಿಗೂ ಹರಡಿತು. ಅಲ್ಲಿ ಬಡ ಕಾರ್ಮಿಕರು ಅಥವಾ ಗುಲಾಮರು ಊಟದ ಹಾಲ್‌ಗಳಲ್ಲಿ ಪ್ರಭುಗಳಿಗೆ ಗಾಳಿ ಬೀಸುವ ಕೆಲಸ ಮಾಡುತ್ತಿದ್ದರು.
An Ancient Ceiling Fan from an Old Wada, Traditional Marathi House,in Pune. pic.twitter.com/4y1hFYhgpy
— Avinash Shishoo (@laidback1954) May 16, 2024
1882 ಮತ್ತು ವಿದ್ಯುತ್ ಫ್ಯಾನ್‌ಗಳ ಆಗಮನ
1880ರ ದಶಕದವರೆಗೂ ಫ್ಯಾನ್‌ಗಳು ವಿದ್ಯುತ್ ಶಕ್ತಿಯಿಂದ ಓಡುತ್ತಿರಲಿಲ್ಲ. ಆದರೆ ಸಂಶೋಧಕ 'ಫಿಲಿಪ್ ಡೈಲ್' ಮಾಡಿದ ಒಂದು ಆವಿಷ್ಕಾರ ಇಡೀ ಚಿತ್ರಣವನ್ನೇ ಬದಲಿಸಿತು. 1882ರಲ್ಲಿ ಫಿಲಿಪ್, ಹೊಲಿಗೆ ಯಂತ್ರಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದ ವಿದ್ಯುತ್ ಮೋಟರ್ ಅನ್ನು ಫ್ಯಾನ್‌ಗೆ ಅಳವಡಿಸಿದರು. 1896ರಲ್ಲಿ ಪರ್ಯಾಯ ಪ್ರವಾಹ (AC Current) ವ್ಯವಸ್ಥೆ ಜಾರಿಗೆ ಬಂದಾಗ, ಆಧುನಿಕ ವಿದ್ಯುತ್ ಸೀಲಿಂಗ್ ಫ್ಯಾನ್‌ಗಳ ಹೊಸ ಯುಗ ಅಧಿಕೃತವಾಗಿ ಪ್ರಾರಂಭವಾಯಿತು.
19ನೇ ಶತಮಾನದ ಕೊನೆಯಲ್ಲಿ, ಭಾರತವನ್ನು ಆಳುತ್ತಿದ್ದ ಬ್ರಿಟಿಷರು ಈ ವಿದ್ಯುತ್ ಸೀಲಿಂಗ್ ಫ್ಯಾನ್‌ಗಳನ್ನು ಭಾರತಕ್ಕೆ ಪರಿಚಯಿಸಿದರು. ಅಲ್ಲಿಂದ ಮುಂದೆ ಭಾರತೀಯರ ಮನೆಗಳಲ್ಲಿ ಫ್ಯಾನ್‌ಗಳ ಆಳ್ವಿಕೆ ಶುರುವಾಯಿತು.
ಭಾರತದಲ್ಲಿ ಫ್ಯಾನ್ ಉದ್ಯಮದ ಉದಯ: ಕ್ರಾಂಪ್ಟನ್, ಉಷಾ ಮತ್ತು IFMA
1906: ಭಾರತದ 'ಗ್ರೀವ್ಸ್ ಕಾಟನ್' ಮತ್ತು ಇಂಗ್ಲೆಂಡ್‌ನ 'ಕ್ರಾಂಪ್ಟನ್ ಪಾರ್ಕಿನ್ಸನ್' ಜಂಟಿಯಾಗಿ 'ಕ್ರಾಂಪ್ಟನ್ ಗ್ರೀವ್ಸ್' ಸಂಸ್ಥೆಯನ್ನು ಸ್ಥಾಪಿಸಿ, ಭಾರತದಲ್ಲಿ ಮೊದಲ ವಿದ್ಯುತ್ ಫ್ಯಾನ್ ಅನ್ನು ಮಾರುಕಟ್ಟೆಗೆ ತಂದವು.
1930: ಭಾರತೀಯ ಮೂಲದ ಪ್ರಸಿದ್ಧ ಬ್ರ್ಯಾಂಡ್ 'ಉಷಾ' (USHA) ದೇಶದ ಮೊದಲ ಸ್ವದೇಶಿ ಸೀಲಿಂಗ್ ಫ್ಯಾನ್ ಅನ್ನು ಬಿಡುಗಡೆ ಮಾಡಿತು. ಈಗಾಗಲೇ ಹೊಲಿಗೆ ಯಂತ್ರಗಳ ಮೂಲಕ ಮನೆಮಾತಾಗಿದ್ದ ಉಷಾ, ಫ್ಯಾನ್ ಉದ್ಯಮದಲ್ಲೂ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಆಯಿತು.
1934:ದೇಶದಲ್ಲಿ ಫ್ಯಾನ್ ತಯಾರಕರು ಹೆಚ್ಚಾದಂತೆ, ಈ ಅಸಂಘಟಿತ ವಲಯವನ್ನು ಒಂದು ಚೌಕಟ್ಟಿಗೆ ತರಲು 'ಭಾರತೀಯ ಫ್ಯಾನ್ ತಯಾರಕರ ಸಂಘ' (IFMA) ಸ್ಥಾಪನೆಯಾಯಿತು. ಈ ಸರ್ಕಾರೇತರ ಸಂಸ್ಥೆಯು ಉದ್ಯಮದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿತು.
1937: ಕ್ರಾಂಪ್ಟನ್ ಸಂಸ್ಥೆಯು ನಿಯಂತ್ರಕ (Regulator) ಹೊಂದಿರುವ ಫ್ಯಾನ್ ಪರಿಚಯಿಸಿತು. ಒಂದು ಸ್ವಿಚ್ ತಿರುಗಿಸುವ ಮೂಲಕ ಫ್ಯಾನ್ ವೇಗವನ್ನು ಕಂಟ್ರೋಲ್ ಮಾಡುವ ಈ ತಂತ್ರಜ್ಞಾನ ಕಂಡು ಜನ ಬೆರಗಾಗಿದ್ದರು.
ಸ್ವಾತಂತ್ರ್ಯೋತ್ತರ ಭಾರತ ಮತ್ತು ಬದಲಾದ ಮಾರುಕಟ್ಟೆ
1940ರ ದಶಕದ ವೇಳೆಗೆ ಫ್ಯಾನ್‌ಗಳು ಬರಿ ಶ್ರೀಮಂತರ ಆಸ್ತಿಯಾಗಿ ಉಳಿಯದೆ ಮಧ್ಯಮ ವರ್ಗಕ್ಕೂ ತಲುಪಲು ಪ್ರಾರಂಭಿಸಿದವು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ಸಿಕ್ಕಿತು. 'ಕ್ರಾಂಪ್ಟನ್ & ಕಂ (ಇಂಡಿಯಾ) ಲಿಮಿಟೆಡ್' ಸಂಪೂರ್ಣವಾಗಿ ಭಾರತೀಯ ಕಂಪನಿಯಾಗಿ ಮಾರ್ಪಟ್ಟಿತು.
1950ರ ದಶಕದಲ್ಲಿ ಸರ್ಕಾರವೇ ಇಂಧನ ಉಳಿತಾಯ ಮತ್ತು ದೇಶದ ಆಧುನೀಕರಣದ ಭಾಗವಾಗಿ ಫ್ಯಾನ್‌ಗಳ ಬಳಕೆಗೆ ಉತ್ತೇಜನ ನೀಡಿತು. 1950ರ ದಶಕದ ಮಧ್ಯಭಾಗದಲ್ಲಿ ಕೆಪಾಸಿಟರ್ ಮೋಟಾರ್ ಹೊಂದಿದ್ದ ಫ್ಯಾನ್‌ಗಳು ಮಾರುಕಟ್ಟೆಗೆ ಬಂದವು. 1960ರಲ್ಲಿ ಕ್ರಾಂಪ್ಟನ್ ಸಂಸ್ಥೆಯು 'ಕೆಪಾಸಿಟರ್ ಸ್ಟಾರ್ಟ್ ಮೋಟಾರ್' ತಂತ್ರಜ್ಞಾನ ತಂದಿದ್ದರಿಂದ, ಫ್ಯಾನ್‌ಗಳ ಶಬ್ದ ಕಡಿಮೆಯಾಗಿ ಹೆಚ್ಚು ತಂಪಾದ ಗಾಳಿ ಸಿಗಲಾರಂಭಿಸಿತು.
ಅಲ್ಯೂಮಿನಿಯಂನಿಂದ ಪ್ಲಾಸ್ಟಿಕ್‌ಗೆ: ಡಿಸೈನ್‌ನಲ್ಲಿ ಕ್ರಾಂತಿ
1970ರ ದಶಕದವರೆಗೂ ಸೀಲಿಂಗ್ ಫ್ಯಾನ್‌ಗಳು ಅಲ್ಯೂಮಿನಿಯಂ ಬಾಡಿ ಹೊಂದಿದ್ದು, ಬೃಹತ್ ಆಗಿ ಮತ್ತು ನೋಡಲು ಕೊಂಚ ಅಸಹ್ಯವಾಗಿರುತ್ತಿದ್ದವು.
1977ರಲ್ಲಿ ಕ್ರಾಂಪ್ಟನ್ ಪ್ರಥಮ ಬಾರಿಗೆ ಹಗುರವಾದ 'ಪ್ಲಾಸ್ಟಿಕ್ ಬಾಡಿ' ಫ್ಯಾನ್ ತಂದಿತು.
1979ರಲ್ಲಿ ಬೃಹತ್ ಹಾಲ್‌ಗಳು ಮತ್ತು ದೊಡ್ಡ ಕೊಠಡಿಗಳಿಗಾಗಿ '5-ಬ್ಲೇಡ್ ಫ್ಯಾನ್' ಪರಿಚಯಿಸಲಾಯಿತು.
1980ರ ದಶಕದಲ್ಲಿ ಸೀಲಿಂಗ್ ಫ್ಯಾನ್‌ಗಳು ಭಾರತದ ಪ್ರತಿಯೊಂದು ಮಧ್ಯಮ ವರ್ಗದ ಮನೆಯ ಅತ್ಯಗತ್ಯ ವಸ್ತುವಾಗಿ ಬದಲಾದವು.
ಇಂಧನ ಬಿಕ್ಕಟ್ಟು ಮತ್ತು 2000ದ ದಶಕದ ಹೊಸ ತಂತ್ರಜ್ಞಾನ
1990ರ ದಶಕದಲ್ಲಿ ಭಾರತ ಎದುರಿಸಿದ ತೀವ್ರ ಇಂಧನ ಬಿಕ್ಕಟ್ಟು ಆಟೋಮೋಟಿವ್ ಮತ್ತು ಗೃಹೋಪಯೋಗಿ ವಲಯಕ್ಕೆ ಹೊಸ ಪಾಠ ಕ ಕಲಿಸಿತು. 1994ರಲ್ಲಿ ಯುವಜನರ ಆದ್ಯತೆಗೆ ತಕ್ಕಂತೆ 'ಅಲಂಕಾರಿಕ ಫ್ಯಾನ್'ಗಳು (Decorative Fans) ಮಾರುಕಟ್ಟೆಗೆ ಬಂದವು.
2000ದ ದಶಕದಲ್ಲಿ ವಿದ್ಯುತ್ ಅಭಾವ ಹೆಚ್ಚಾದಾಗ, ಕಮ್ಮಿ ವಿದ್ಯುತ್ ಬಳಸುವ ಫ್ಯಾನ್‌ಗಳಿಗೆ ಬೇಡಿಕೆ ಹೆಚ್ಚಾಯಿತು.
2006: ಭಾರತ ಸರ್ಕಾರವು 'ಇಂಧನ ದಕ್ಷತೆಯ ಬ್ಯೂರೋ' (BEE) ಮೂಲಕ ವಿದ್ಯುತ್ ಉಪಕರಣಗಳಿಗೆ 'ಸ್ಟಾರ್ ರೇಟಿಂಗ್' ಕಡ್ಡಾಯಗೊಳಿಸಿತು.
2008: ಕ್ರಾಂಪ್ಟನ್ ಕಂಪನಿಯು BEE ಮಾನದಂಡಕ್ಕೆ ಅನುಗುಣವಾಗಿ ಮೊದಲ 'ಎನರ್ಜಿ ಎಫಿಶಿಯೆಂಟ್' ಸೀಲಿಂಗ್ ಫ್ಯಾನ್ ತಂದಿತು.
BLDC ಮೋಟಾರ್, ಸ್ಮಾರ್ಟ್ ಫ್ಯಾನ್ ಮತ್ತು ಪ್ರಸ್ತುತ ಟ್ರೆಂಡ್
2009ರ ನಂತರ ಫ್ಯಾನ್ ಉದ್ಯಮದಲ್ಲಿ ಮಹತ್ತರ ಬದಲಾವಣೆ ತಂದಿದ್ದು BLDC (Brushless Direct Current) ತಂತ್ರಜ್ಞಾನ. ಈ ಫ್ಯಾನ್‌ಗಳು ಅತ್ಯಂತ ಕಡಿಮೆ ವಿದ್ಯುತ್ ಬಳಕೆ, ಸುದೀರ್ಘ ಬಾಳಿಕೆ, ಶಬ್ದರಹಿತ ಕಾರ್ಯಾಚರಣೆ ಮತ್ತು ರೇಟಿಂಗ್ಸ್‌ನಲ್ಲಿ ಮುಂಚೂಣಿಯಲ್ಲಿದ್ದವು.
2016-17: ಎಲ್‌ಇಡಿ ಲೈಟ್, ಡಿಸಿ ಮೋಟಾರ್ ಮತ್ತು ರಿಮೋಟ್ ಕಂಟ್ರೋಲ್ ಹೊಂದಿರುವ ಫ್ಯಾನ್‌ಗಳು ಮಾರುಕಟ್ಟೆಗೆ ಬಂದವು.
2018-19: ಕೊಠಡಿಯ ಒಳಗಿನ ಗಾಳಿಯನ್ನು ಶುದ್ಧೀಕರಿಸುವ (Air Purifying) ಏರ್ ಪ್ಯೂರಿಫೈಯರ್ ಫ್ಯಾನ್‌ಗಳನ್ನು ಪರಿಚಯಿಸಲಾಯಿತು.
2020-22: ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಉತ್ಪಾದನೆಗೆ ಹೊಡೆತ ಬಿದ್ದರೂ, ಇ-ಕಾಮರ್ಸ್ ಮೂಲಕ ಮಾರಾಟ ಹೆಚ್ಚಾಯಿತು. 2022ರಲ್ಲಿ ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಡೆಸ್ಕ್ ಫ್ಯಾನ್‌ಗಳು ಲಭ್ಯವಾದವು.
2023: ಕೇಂದ್ರ ಸರ್ಕಾರವು ಪ್ರತಿಯೊಂದು ಸೀಲಿಂಗ್ ಫ್ಯಾನ್ ತಯಾರಕರೂ 'BEE ಸ್ಟಾರ್ ರೇಟಿಂಗ್' ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿತು. ಇದರಿಂದಾಗಿ ಇಂದಿನ ಗ್ರಾಹಕರು 5-ಸ್ಟಾರ್ ರೇಟಿಂಗ್ ಇರುವ BLDC ಫ್ಯಾನ್‌ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ.
2025ರ ವೇಳೆಗೆ ಜಾಗತಿಕ ಸೀಲಿಂಗ್ ಫ್ಯಾನ್ ಮಾರುಕಟ್ಟೆಯು 12.5 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ಅಂದಾಜಿದೆ. ಗೂಗಲ್ ಟ್ರೆಂಡ್ಸ್ ವರದಿಯ ಪ್ರಕಾರ, ಸೀಲಿಂಗ್ ಫ್ಯಾನ್‌ಗಳಿಗಾಗಿ ಗೂಗಲ್‌ನಲ್ಲಿ ಮಾಡುವ ಹುಡುಕಾಟವು ಶೇ. 98.41 ರಷ್ಟು ಹೆಚ್ಚಾಗಿದೆ.ಒಟ್ಟಿನಲ್ಲಿ, ರಾಜರ ಅರಮನೆಯಲ್ಲಿ ಕೈಯಿಂದ ತೂಗಾಡುತ್ತಿದ್ದ ಬಟ್ಟೆಯ 'ಪಂಖಾ'ದಿಂದ ಹಿಡಿದು, ಇಂದು ಮೊಬೈಲ್ ಮತ್ತು ರಿಮೋಟ್ ಮೂಲಕ ನಿಯಂತ್ರಿಸುವ ಸ್ಮಾರ್ಟ್ BLDC ಫ್ಯಾನ್‌ವರೆಗಿನ ಈ ಪಯಣ ಭಾರತೀಯ ತಂತ್ರಜ್ಞಾನ ಮತ್ತು ಜೀವನಾಧಾರಿತ ಕ್ರಾಂತಿಗೆ ಹಿಡಿದ ಕೈಗನ್ನಡಿಯಾಗಿದೆ.