SOCIAL MEDIA

Newsletter

PARTNER SITES
Select Language Select State

ತಾನೇ ಸಾಕಿದ ಗಿಣಿಗೆ ಬಲಿಯಾಯ್ತು ಪಾಕ್‌..! ಮಸೀದಿ ಉಡಾಯಿಸಿ ಗುಂಡಿನ ದಾಳಿ ನಡೆಸಿದ ಉಗ್ರರು

ಪಾಕಿಸ್ತಾನದ ಖೈಬರ್ ಪಂಖ್ತುಂಖ್ವಾ ಪ್ರಾಂತ್ಯದ ಕೋಹಾಟ್‌ನ 'ಪೋಲಿಸ್ ಲೈನ್ಸ್' ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದು (15 ಮಂದಿ ಪೊಲೀಸರು) 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.. ನೋಡಿ

Reported By Krishna NK Written By Krishna NK
Published: Sep 19, 2026, 07:25 PM IST | Updated: Sep 19, 2026, 07:27 PM IST
Image Credit: Pakistan Kohat attack
Join

Kohat attack : ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲೇ ರಕ್ತದೋಕುಳಿಯನ್ನಾಡಿದ್ದಾರೆ. ಕೋಹಾಟ್‌ನ ಪೊಲೀಸ್‌ ಲೈನ್ಸ್‌ನಲ್ಲೇ ಕಾರ್ ಬಾಂಬ್ ಸ್ಫೋಟವಾಗಿದ್ದು, 21 ಮಂದಿ ಸಾವು.. 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, ಸತ್ತವರಲ್ಲಿ 15 ಮಂದಿ ಪೊಲೀಸರೇ.. ಅಂದರೆ ಉಗ್ರರನ್ನು ಮಟ್ಟಹಾಕಬೇಕಿದ್ದ ಪೊಲೀಸರನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ.. ಇದು ಕೇವಲ ಒಂದು ಉಗ್ರ ದಾಳಿಯಲ್ಲ.. ಪಾಕಿಸ್ತಾನ ವರ್ಷಗಳ ಕಾಲ ಬೆಳೆಸಿದ ಉಗ್ರ ಜಾಲ ಈಗ ಹೇಗೆ ಪಾಕಿಸ್ತಾನದ ಮೇಲೆಯೇ ತಿರುಗಿಬಿದ್ದಿದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ.. ಅಫ್ಘಾನ್ ಗಡಿಯಿಂದ ಖೈಬರ್ ಪಂಖ್ತುಂಖ್ವಾದವರೆಗೆ ಉಗ್ರರ ದಾಳಿ ಹೆಚ್ಚುತ್ತಲೇ ಇದೆ. ಹಾಗಾದ್ರೆ ಪಾಕಿಸ್ತಾನ ಸಾಕಿದ ಉಗ್ರರು ಈಗ ಪಾಕಿಸ್ತಾನಕ್ಕೇ ಹೇಗೆ ಮುಳುವಾಗಿದ್ದಾರೆ..? ನೋಡೋಣ ಡಿಎನ್‌ಎ 5ನೇ ಸುದ್ದಿಯಲ್ಲಿ.

ಪಾಕಿಸ್ತಾನದ ಖೈಬರ್ ಪಂಖ್ತುಂಖ್ವಾ ಪ್ರಾಂತ್ಯದ ಕೋಹಾಟ್‌ನಲ್ಲಿ ಶುಕ್ರವಾರ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಭೀಕರ ದಾಳಿ ನಡೆದಿದೆ. ಪೊಲೀಸ್ ಲೈನ್ಸ್‌ನಲ್ಲಿದ್ದ ಮಸೀದಿಯ ಸಮೀಪ ಸ್ಫೋಟಕ ತುಂಬಿದ ವಾಹನ ಸ್ಫೋಟಿಸಲಾಗಿದೆ. ಬಳಿಕ ಶಸ್ತ್ರಸಜ್ಜಿತ ಉಗ್ರರು ಪೊಲೀಸ್ ಸಂಕೀರ್ಣದೊಳಗೆ ನುಗ್ಗಲು ಯತ್ನಿಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದು, ಅವರಲ್ಲಿ 15 ಮಂದಿ ಪೊಲೀಸ್ ಸಿಬ್ಬಂದಿ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯ ಮತ್ತೊಂದು ಪ್ರಮುಖ ಅಂಶವೆಂದರೆ ಉಗ್ರರು ಸಾಮಾನ್ಯ ಜನರನ್ನಷ್ಟೇ ಟಾರ್ಗೆಟ್ ಮಾಡಿಲ್ಲ. ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರು ಪ್ರಾರ್ಥನೆಗೆ ಸೇರುವ ಸ್ಥಳವನ್ನೇ ಗುರಿಯಾಗಿಸಿದ್ದಾರೆ. ಸ್ಫೋಟದ ಬಳಿಕ ಶಸ್ತ್ರಸಜ್ಜಿತ ಉಗ್ರರು ಪೊಲೀಸ್ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದು, ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಪ್ರಕಾರ ಹಲವು ದಾಳಿಕೋರರು ಹತ್ಯೆಯಾಗಿದ್ದಾರೆ.

ಇಲ್ಲೇ ಪಾಕಿಸ್ತಾನದ ದೊಡ್ಡ ಭದ್ರತಾ ವೈರುಧ್ಯ ಬಯಲಾಗುತ್ತದೆ. ವರ್ಷಗಳ ಕಾಲ ಪಾಕಿಸ್ತಾನ ಮತ್ತು ಅದರ ಭದ್ರತಾ ವ್ಯವಸ್ಥೆಯೊಂದಿಗೆ ವಿವಿಧ ಉಗ್ರ ಸಂಘಟನೆಗಳ ಸಂಬಂಧದ ಬಗ್ಗೆ ಆರೋಪಗಳು ಕೇಳಿಬಂದಿವೆ. ಆದರೆ ಈಗ ಅದೇ ಉಗ್ರ ಜಾಲದ ಒಂದು ಭಾಗ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯನ್ನೇ ಗುರಿಯಾಗಿಸುತ್ತಿದೆ. ವಿಶೇಷವಾಗಿ ಖೈಬರ್ ಪಂಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಉಗ್ರ ದಾಳಿಗಳು ನಿರಂತರವಾಗಿವೆ. ಪಾಕಿಸ್ತಾನದ ಭದ್ರತಾ ಅಧ್ಯಯನ ಸಂಸ್ಥೆ PICSS ಪ್ರಕಾರ, 2026ರ ಜೂನ್‌ನಲ್ಲಿ ದೇಶಾದ್ಯಂತ 118 ಉಗ್ರ ದಾಳಿಗಳು ದಾಖಲಾಗಿದ್ದು, ಭದ್ರತಾ ಪಡೆಗಳು, ನಾಗರಿಕರು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸುವ ಸಾಮರ್ಥ್ಯ ಉಗ್ರ ಸಂಘಟನೆಗಳು ಮುಂದುವರಿಸಿಕೊಂಡಿವೆ.

ಕೋಹಾಟ್ ದಾಳಿ ನಡೆದಿರುವ ಪ್ರದೇಶವೇ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಸಮೀಪದ ಅತ್ಯಂತ ಸೂಕ್ಷ್ಮ ಪ್ರದೇಶ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಿ ತಾಲಿಬಾನ್‌ ಎಂದು ಕರೆಯಲ್ಪಡುವ ಟಿಟಿಪಿ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ಚಟುವಟಿಕೆ ಇಲ್ಲಿ ಹೆಚ್ಚಾಗಿದೆ ಎಂದು ಭದ್ರತಾ ವಿಶ್ಲೇಷಣೆಗಳು ಹೇಳುತ್ತವೆ. ಇದರ ಪರಿಣಾಮ ಪಾಕಿಸ್ತಾನ ಈಗ ಎರಡು ಕಡೆ ಒತ್ತಡ ಎದುರಿಸುತ್ತಿದೆ. ಒಂದೆಡೆ ಅಫ್ಘಾನಿಸ್ತಾನದಲ್ಲಿರುವ ಉಗ್ರರ ಆಶ್ರಯ ತಾಣಗಳ ವಿರುದ್ಧ ಪಾಕಿಸ್ತಾನ ಆರೋಪ ಮಾಡುತ್ತಿದೆ. ಮತ್ತೊಂದೆಡೆ, ಇದೇ ಉಗ್ರ ಸಂಘಟನೆಗಳು ಪಾಕಿಸ್ತಾನದೊಳಗೆ ಪೊಲೀಸ್, ಸೇನೆ ಮತ್ತು ಸರ್ಕಾರಿ ಸಂಸ್ಥೆಗಳನ್ನೇ ಟಾರ್ಗೆಟ್ ಮಾಡುತ್ತಿವೆ. ಕೋಹಾಟ್ ದಾಳಿ ಈ ವೈರುಧ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಕೋಹಾಟ್‌ನ ಮಸೀದಿ ಮೇಲಿನ ದಾಳಿ ಒಂದು ಸಂಗತಿಯನ್ನು ಸ್ಪಷ್ಟಪಡಿಸಿದೆ. ಉಗ್ರವಾದವನ್ನು ರಾಜಕೀಯ ಅಥವಾ ಕಾರ್ಯತಂತ್ರದ ಸಾಧನವಾಗಿ ಬಳಸಿದಾಗ, ಅದರ ಪರಿಣಾಮ ಯಾವಾಗ ಯಾರ ಮೇಲಿರುತ್ತದೆ ಎನ್ನುವುದು ನಿಯಂತ್ರಣದಲ್ಲಿರುವುದಿಲ್ಲ. ಇಂದು ಪಾಕಿಸ್ತಾನದ ಪೊಲೀಸ್ ಲೈನ್ಸ್‌ಗಳೇ ಉಗ್ರರ ಟಾರ್ಗೆಟ್ ಆಗಿವೆ. ಅದರಲ್ಲೂ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ಕೌಂಟರ್ ಟೆರರಿಸಂ ಘಟಕಗಳಿರುವ ಪೊಲೀಸ್ ಸಂಕೀರ್ಣದ ಮೇಲೆಯೇ ದಾಳಿ ನಡೆದಿರುವುದು, ಪಾಕಿಸ್ತಾನದ ಆಂತರಿಕ ಭದ್ರತೆಗೆ ಎದುರಾಗಿರುವ ಸವಾಲಿನ ಗಂಭೀರತೆಯನ್ನು ತೋರಿಸುತ್ತದೆ.

ಕೋಹಾಟ್‌ನಲ್ಲಿ ನಡೆದ ಈ ದಾಳಿ ಪಾಕಿಸ್ತಾನದ ಪಾಲಿಗೆ ಮತ್ತೊಂದು ಎಚ್ಚರಿಕೆಯ ಗಂಟೆ. ಹೊರಗಿನ ಶತ್ರುಗಳ ವಿರುದ್ಧ ಹೋರಾಡುತ್ತೇವೆ ಎನ್ನುವ ಪಾಕಿಸ್ತಾನಕ್ಕೆ ಈಗ ಮನೆಯೊಳಗೇ ಬೆಳೆದುಬಂದ ಉಗ್ರ ಜಾಲವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೊಲೀಸ್ ಲೈನ್ಸ್‌ನ ಮಸೀದಿಯನ್ನೇ ಗುರಿಯಾಗಿಸುವಷ್ಟು ಉಗ್ರರ ಜಾಲ ಬೆಳೆದಿದ್ದರೆ, ಪ್ರಶ್ನೆ ಒಂದೇ.. ಪಾಕಿಸ್ತಾನ ಉಗ್ರರನ್ನು ನಿಯಂತ್ರಿಸುತ್ತಿದೆಯಾ..? ಅಥವಾ ಉಗ್ರರೇ ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ಸವಾಲು ಹಾಕುತ್ತಿದ್ದಾರಾ..?

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES