SOCIAL MEDIA

Newsletter

PARTNER SITES
Select Language Select State

ಇಸ್ರೇಲ್‌ ರಾಜಕೀಯದಲ್ಲಿ ಸಂಚಲನ : ಹೊಸ ಸರ್ಕಾರ ರಚನೆಗೆ ಮಾಜಿ ಸೇನಾ ಮುಖ್ಯಸ್ಥನಿಗೆ ಆಹ್ವಾನ

ಇಸ್ರೇಲ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಭಾವಿಯಾಗಿದ್ದ ಬೆಂಜಮಿನ್ ನೆತನ್ಯಾಹು ಅವರ ಯುಗಾಂತ್ಯದ ಮುನ್ಸೂಚನೆ ಸಿಕ್ಕಿದ್ದು, ಅವರ ಪ್ರಮುಖ ಎದುರಾಳಿ ಹಾಗೂ ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ಅವರಿಗೆ ಹೊಸ ಸರ್ಕಾರ ರಚಿಸುವಂತೆ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅಧಿಕೃತ ಆಹ್ವಾನ ನೀಡಿದ್ದಾರೆ. ಸಾಂಪ್ರದಾಯಿಕ ಮಿತ್ರಪಕ್ಷಗಳ ಬೆಂಬಲ ಕಳೆದುಕೊಂಡು ನೆತನ್ಯಾಹು ಹಿನ್ನಡೆ ಅನುಭವಿಸಿದ್ದರೆ, ಯಹೂದಿ ಮತ್ತು ಅರಬ್ ಪಕ್ಷಗಳ ಅನಿರೀಕ್ಷಿತ ಮೈತ್ರಿಯೊಂದಿಗೆ ಐಸೆನ್‌ಕೋಟ್ 67 ಸಂಸದರ ಬಲದೊಂದಿಗೆ ಬಹುಮತ ಸಾಬೀತುಪಡಿಸಿದ್ದಾರೆ.. ಈ ಕುರಿತ ವಿಶೇಷ ವರದಿ ಇಲ್ಲಿದೆ..

Written By Krishna NK
Published: Nov 08, 2026, 21:28 IST | Updated: Nov 08, 2026, 21:30 IST
Image Credit: Gadi Eisenkot
Join

ಇಸ್ರೇಲ್ : ದೇಶದ ರಾಜಕೀಯದಲ್ಲಿ ಈಗ ಊಹಿಸಲೂ ಸಾಧ್ಯವಾಗದಂತಹ ಐತಿಹಾಸಿಕ ಮಹಾ ತಿರುವು ಸಿಕ್ಕಿದೆ.. ದಶಕಗಳ ಕಾಲ ಇಸ್ರೇಲ್ ಅನ್ನು ಕಪಿಮುಷ್ಠಿಯಲ್ಲಿಟ್ಟು ಆಳಿದ್ದ, ವಿಶ್ವದ ಅತ್ಯಂತ ಪ್ರಭಾವಿ ಬಲಪಂಥೀಯ ನಾಯಕ ಬೆಂಜಮಿನ್ ನೆತನ್ಯಾಹು ಅವರ ಸಾಮ್ರಾಜ್ಯ ಅಕ್ಷರಶಃ ಪತನದ ಅಂಚಿಗೆ ಬಂದು ನಿಂತಿದೆ.. ನೆತನ್ಯಾಹು ಅವರ ಕಟ್ಟಾ ರಾಜಕೀಯ ಎದುರಾಳಿ, ಇಸ್ರೇಲ್ ಸೇನೆಯ ಮಾಜಿ ಮುಖ್ಯಸ್ಥ ಹಾಗೂ 'ಯಶಾರ್' ಪಕ್ಷದ ನಾಯಕ ಗಡಿ ಐಸೆನ್‌ಕೋಟ್ ಅವರಿಗೆ ದೇಶದ ಹೊಸ ಸರ್ಕಾರ ರಚನೆ ಮಾಡುವಂತೆ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅಧಿಕೃತ ಆಹ್ವಾನ ನೀಡಿದ್ದಾರೆ..

120 ಸದಸ್ಯ ಬಲದ ಇಸ್ರೇಲ್ ಸಂಸತ್ತಿನಲ್ಲಿ ಸರ್ಕಾರ ರಚಿಸಲು ಬೇಕಿರುವುದು ಕೇವಲ 61 ಸ್ಥಾನಗಳು.. ಆದರೆ ಅರಬ್ ಪಕ್ಷಗಳು ಮತ್ತು ವಿಪಕ್ಷಗಳ ಜಂಟಿ ಬಲದೊಂದಿಗೆ ಐಸೆನ್‌ಕೋಟ್ ಬರೋಬ್ಬರಿ 67 ಸಂಸದರ ಬೆಂಬಲ ಸಾಬೀತುಪಡಿಸಿದ್ದಾರೆ.. ಇತ್ತ ಸಾಂಪ್ರದಾಯಿಕ ಮಿತ್ರಪಕ್ಷಗಳೇ ಕೈಕೊಟ್ಟಿದ್ದರಿಂದ ನೆತನ್ಯಾಹು ಪರ ಕೇವಲ 46 ಸಂಸದರು ಮಾತ್ರ ನಿಂತಿದ್ದಾರೆ.. ನೆತನ್ಯಾಹು ಯುಗ ಕೊನೆಗೊಳ್ಳಲಿದೆಯಾ?.. ಮಾಜಿ ಸೇನಾ ಮುಖ್ಯಸ್ಥನ ಕೈಗೆ ಇಸ್ರೇಲ್ ಆಡಳಿತ ಹೋದರೆ ಯುದ್ಧದ ಗತಿಯೇನು?.. ಈ ಮಹಾ ರಾಜಕೀಯ ಕ್ರಾಂತಿಯ ಕಂಪ್ಲೀಟ್ ಡಿಟೇಲ್ಸ್‌ ಡಿಎನ್‌ಎ ಎರಡನೇ ಸುದ್ದಿಯಲ್ಲಿ ನೋಡೋಣ..

ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಬೆಂಜಮಿನ್ ನೆತನ್ಯಾಹು ಅವರಿಗೆ ಅಧ್ಯಕ್ಷರ ಈ ತೀರ್ಮಾನ ಮರ್ಮಾಘಾತ ನೀಡಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಅಧ್ಯಕ್ಷ ಐಸಾಕ್ ಹೆರ್ಜಾಗ್, ನೆತನ್ಯಾಹು ಅವರ ಪ್ರಮುಖ ಪ್ರತಿಸ್ಪರ್ಧಿ ಗಡಿ ಐಸೆನ್‌ಕೋಟ್ ಅವರಿಗೆ ಹೊಸ ಸರ್ಕಾರ ರಚಿಸುವ ಮೊದಲ ಅವಕಾಶ ನೀಡಿದ್ದಾರೆ. ಸಂಸತ್ತಿನಲ್ಲಿ ಬಹುಮತಕ್ಕೆ 61 ಸ್ಥಾನಗಳು ಬೇಕಾಗಿದ್ದು, ಐಸೆನ್‌ಕೋಟ್ 67 ಸಂಸದರ ಸಹಿ ಸಮೇತ ಹಕ್ಕು ಮಂಡಿಸಿ ಮೇಲುಗೈ ಸಾಧಿಸಿದ್ದಾರೆ.

ನೆತನ್ಯಾಹು ಸೋಲಿಗೆ ಪ್ರಮುಖ ಕಾರಣ ಅವರದೇ ಸಾಂಪ್ರದಾಯಿಕ ಮಿತ್ರಪಕ್ಷಗಳು. ಅಲ್ಟ್ರಾ-ಆರ್ಥೊಡಾಕ್ಸ್ ಯಹೂದಿಗಳಿಗೆ ಸೇನಾ ಸೇವೆಯಿಂದ ವಿನಾಯಿತಿ ನೀಡುವ ಮಸೂದೆಯನ್ನು ನೆತನ್ಯಾಹು ಸರ್ಕಾರ ಜಾರಿಗೆ ತರಲು ವಿಫಲವಾಗಿತ್ತು. ಇದರಿಂದ ಸಿಟ್ಟಿಗೆದ್ದ ನೆತನ್ಯಾಹು ಅವರ ಕಟ್ಟಾ ಮಿತ್ರಪಕ್ಷ 'ಯುನೈಟೆಡ್ ತೋರಾ ಜುದಾಯಿಸಂ' 7 ಸಂಸದರನ್ನು ಹಿಂಪಡೆದು ತಟಸ್ಥ ನಿಲುವು ತಳೆಯಿತು. ಪರಿಣಾಮವಾಗಿ ನೆತನ್ಯಾಹು ಬಲ 53 ರಿಂದ ನೇರವಾಗಿ 46ಕ್ಕೆ ಕುಸಿದು, ಅಧಿಕಾರ ಉಳಿಸಿಕೊಳ್ಳುವ ಅವರ ಕನಸು ನುಚ್ಚುನೂರಾಯಿತು.

ಐಸೆನ್‌ಕೋಟ್ ಗೆಲುವಿನ ಹಿಂದೆ ಯಹೂದಿ ಮತ್ತು ಅರಬ್ ಪಕ್ಷಗಳ ಅನಿರೀಕ್ಷಿತ ಮೈತ್ರಿ ಕೆಲಸ ಮಾಡಿದೆ. ಯಶಾರ್ ನೇತೃತ್ವದ ಯಹೂದಿ ವಿರೋಧ ಪಕ್ಷಗಳ ಬಳಿ ಇದ್ದದ್ದು ಕೇವಲ 48 ಸೀಟುಗಳು. ಆದರೆ ನೆತನ್ಯಾಹು ಅವರ ಉಗ್ರ ಧೋರಣೆಯನ್ನು ವಿರೋಧಿಸಿ ಅರಬ್ ಪಕ್ಷಗಳಾದ ಜಾಯಿಂಟ್ ಲಿಸ್ಟ್ ಮತ್ತು ರಾಮ್ ಒಟ್ಟಾಗಿ ತಮ್ಮ 19 ಸ್ಥಾನಗಳ ಬೆಂಬಲವನ್ನು ಐಸೆನ್‌ಕೋಟ್‌ಗೆ ನೀಡಿವೆ. ಇದರೊಂದಿಗೆ ಐಸೆನ್‌ಕೋಟ್ ಸಂಖ್ಯಾಬಲ 67ಕ್ಕೆ ಏರಿಕೆಯಾಗಿದ್ದು, ಇಸ್ರೇಲ್ ರಾಜಕೀಯದಲ್ಲಿ ಅರಬ್ ಸಮುದಾಯ ಅತಿದೊಡ್ಡ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದೆ.

ಅಧಿಕಾರ ವಹಿಸಿಕೊಳ್ಳುತ್ತಿರುವ ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್, ತಮ್ಮ ಆಡಳಿತದ 4 ಮುಖ್ಯ ಆದ್ಯತೆಗಳನ್ನು ಈಗಾಗಲೇ ಜಗತ್ತಿನ ಮುಂದಿಟ್ಟಿದ್ದಾರೆ. ದೇಶದ ಮೂಲ ಸ್ವಾತಂತ್ರ್ಯ ಘೋಷಣೆಯ ತತ್ವಗಳನ್ನು ಮರುಸ್ಥಾಪಿಸುವುದು, ಅಲ್ಟ್ರಾ-ಆರ್ಥೊಡಾಕ್ಸ್ ಯಹೂದಿಗಳು ಸೇರಿದಂತೆ ದೇಶದಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಸೇನಾ ಸೇವೆಯನ್ನು ಜಾರಿಗೊಳಿಸುವುದು ಅವರ ಮುಖ್ಯ ಗುರಿ. ಇನ್ನು ಗಾಜಾ ಯುದ್ಧದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ, ಹಮಾಸ್‌ನ ಮಿಲಿಟರಿ ಮತ್ತು ರಾಜಕೀಯ ಶಕ್ತಿಯನ್ನು ಸಂಪೂರ್ಣ ಧ್ವಂಸ ಮಾಡುವುದಾಗಿ ಐಸೆನ್‌ಕೋಟ್ ಸ್ಪಷ್ಟಪಡಿಸಿದ್ದಾರೆ.

ಐಸೆನ್‌ಕೋಟ್‌ಗೆ ಆಹ್ವಾನ ಸಿಕ್ಕಿದ್ದರೂ ಹಾದಿ ಸುಲಭವಿಲ್ಲ. ಸರ್ಕಾರ ರಚಿಸಲು ಅವರಿಗೆ 28 ದಿನಗಳ ಕಾಲಾವಕಾಶವಿದೆ. ಆದರೆ ಅರಬ್ ಪಕ್ಷಗಳಿಗೆ ಸಚಿವ ಸ್ಥಾನ ನೀಡುವುದಕ್ಕೆ ಸ್ವತಃ ಐಸೆನ್‌ಕೋಟ್ ಬಣದಲ್ಲಿರುವ ಕೆಲವು ಯಹೂದಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಂಪುಟ ರಚನೆಯಲ್ಲಿ ಭಿನ್ನಮತ ಸ್ಫೋಟಗೊಂಡರೆ ಸರ್ಕಾರ ರಚನೆ ಕಷ್ಟವಾಗಬಹುದು. ಒಂದು ವೇಳೆ ಐಸೆನ್‌ಕೋಟ್ ವಿಫಲವಾದರೆ, ಮತ್ತೆ ಹೊಸ ಚುನಾವಣೆ ಎದುರಾಗಲಿದ್ದು, ಅಲ್ಲಿಯವರೆಗೆ ನೆತನ್ಯಾಹು ಅವರೇ ಉಸ್ತುವಾರಿ ಪ್ರಧಾನಿಯಾಗಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ರಕ್ತಸಿಕ್ತ ಯುದ್ಧದ ನಡುವೆಯೇ ಇಸ್ರೇಲ್‌ನ ಆಂತರಿಕ ರಾಜಕೀಯದಲ್ಲಿ ನೆತನ್ಯಾಹು ಯುಗಾಂತ್ಯದ ಮೊದಲ ಘಂಟೆ ಬಾರಿಸಿದೆ.. ದೇಶದ ಅತ್ಯಂತ ಪ್ರಭಾವಿ ಸೇನಾ ಪಡೆಯನ್ನು ಮುನ್ನಡೆಸಿದ್ದ ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ಈಗ ಇಸ್ರೇಲ್ ರಾಜಕೀಯದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.. ಆದರೆ, ಪರಸ್ಪರ ವಿರುದ್ಧ ಸಿದ್ಧಾಂತಗಳಿರುವ ಯಹೂದಿ ಮತ್ತು ಅರಬ್ ಪಕ್ಷಗಳನ್ನು ಒಟ್ಟಿಗೆ ಕರೆದೊಯ್ದು ಅವರು ಸ್ಥಿರ ಸರ್ಕಾರ ರಚಿಸುತ್ತಾರಾ?.. ಅಥವಾ ಐಸೆನ್‌ಕೋಟ್ ಎಡವಿದರೆ, ಹಂಗಾಮಿ ಪ್ರಧಾನಿಯಾಗಿ ಕುಳಿತಿರುವ ಬೆಂಜಮಿನ್ ನೆತನ್ಯಾಹು ಮತ್ತೆ ಕಂಬ್ಯಾಕ್ ಮಾಡುತ್ತಾರಾ?.. ಇಸ್ರೇಲ್ ಭವಿಷ್ಯವನ್ನು ನಿರ್ಧರಿಸಲಿರುವ ಮುಂದಿನ 28 ದಿನಗಳು ಇಡೀ ವಿಶ್ವಕ್ಕೆ ಅತ್ಯಂತ ರೋಚಕವಾಗಿರಲಿವೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES