SOCIAL MEDIA

Newsletter

PARTNER SITES
Select Language Select State

ಜಪಾನ್‌, ರಷ್ಯಾ ಹಿಂದಿಕ್ಕಿದ ಭಾರತ.. ಏಷ್ಯಾದಲ್ಲಿ ಈಗ 3ನೇ ಪವರ್‌ಫುಲ್ ದೇಶ!

India third rank Asia power index2026: ಜಾಗತಿಕ ರಾಜಕೀಯ ಮತ್ತು ಆರ್ಥಿಕ ಶಕ್ತಿಯ ಪೈಪೋಟಿಯಲ್ಲಿ ಭಾರತ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. 2026ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.

Written By Ramya. R. Gowda
Published: Nov 23, 2026, 19:17 IST | Updated: Nov 23, 2026, 19:21 IST
Join

ಜಾಗತಿಕ ರಾಜಕೀಯ ಮತ್ತು ಆರ್ಥಿಕ ಶಕ್ತಿಯ ಪೈಪೋಟಿಯಲ್ಲಿ ಭಾರತ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. 2026ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಪವರ್ ಸ್ಕೋರ್ ಕೂಡ ಏರಿಕೆಯಾಗಿದೆ. ಹಾಗಾದ್ರೆ ಏಷ್ಯಾದಲ್ಲಿ ಭಾರತದ ಪ್ರಭಾವ ಹೆಚ್ಚಾಗಲು ಕಾರಣವೇನು? ಆರ್ಥಿಕ ಸಾಮರ್ಥ್ಯದಲ್ಲಿ ಭಾರತಕ್ಕೆ ಹಿನ್ನಡೆಯಾಗಿದ್ಯಾಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

2026ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತದ ಪ್ರಭಾವ ಮತ್ತಷ್ಟು ಹೆಚ್ಚಳವಾಗಿದೆ. ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ವರದಿಯಲ್ಲಿ ಭಾರತ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಜಪಾನ್ ನಾಲ್ಕನೇ ಹಾಗೂ ರಷ್ಯಾ ಐದನೇ ಸ್ಥಾನದಲ್ಲಿವೆ.

ಟಾಪ್-5 ಪವರ್‌ಫುಲ್ ರಾಷ್ಟ್ರಗಳು
1. ಅಮೆರಿಕ
2. ಚೀನಾ
3. ಭಾರತ
4. ಜಪಾನ್
5. ರಷ್ಯಾ
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಒಟ್ಟಾರೆ ಪವರ್ ಸ್ಕೋರ್ 0.5 ಅಂಕ ಹೆಚ್ಚಾಗಿದೆ. ಇದೀಗ ಭಾರತದ ಒಟ್ಟಾರೆ ಪವರ್ ಸ್ಕೋರ್ 40.5 ಅಂಕಗಳಿಗೆ ತಲುಪಿದೆ. ರಾಜತಾಂತ್ರಿಕ ಪ್ರಭಾವ, ರಕ್ಷಣಾ ಸಹಕಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳು ಭಾರತದ ಶಕ್ತಿ ಹೆಚ್ಚಲು ಪ್ರಮುಖ ಕಾರಣಗಳಾಗಿವೆ

ಭಾರತದ ರಾಜತಾಂತ್ರಿಕ ಪ್ರಭಾವದ ಸ್ಕೋರ್ ಬರೋಬ್ಬರಿ 70.3 ಅಂಕಗಳಾಗಿದೆ. ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ಭಾರತದ ರಕ್ಷಣಾ ಸಂಬಂಧಗಳು ಮತ್ತಷ್ಟು ಬಲಗೊಂಡಿವೆ. ಅದರಲ್ಲೂ ಬ್ರಹ್ಮೋಸ್ ಕ್ಷಿಪಣಿ ಮಾರಾಟ ಮತ್ತು ಪ್ರಾದೇಶಿಕ ರಕ್ಷಣಾ ಸಹಕಾರ ಭಾರತದ ಪ್ರಭಾವ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾದೇಶಿಕ ನಾಯಕತ್ವದ ಮೌಲ್ಯಮಾಪನವೂ ಸುಧಾರಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಬಳಿಕ ಮೋದಿ ಅವರು ಏಷ್ಯಾದ ಎರಡನೇ ಅತ್ಯಂತ ಪರಿಣಾಮಕಾರಿ ನಾಯಕ ಎಂದು ವರದಿಯಲ್ಲಿ ಗುರುತಿಸಲಾಗಿದೆ.


ಒಂದೆಡೆ ಭಾರತದ ಜಾಗತಿಕ ಪ್ರಭಾವ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಆರ್ಥಿಕ ಸಾಮರ್ಥ್ಯದಲ್ಲಿ ಸಣ್ಣ ಹಿನ್ನಡೆ ಎದುರಾಗಿದೆ. ಭಾರತದ ಆರ್ಥಿಕ ಸಾಮರ್ಥ್ಯದ ಸ್ಕೋರ್ 26.4ಕ್ಕೆ ಇಳಿಕೆಯಾಗಿದೆ. ರೂಪಾಯಿ ಮೌಲ್ಯದಲ್ಲಿನ ದುರ್ಬಲತೆ ಹಾಗೂ IMFನ ಆರ್ಥಿಕ ಮೌಲ್ಯಮಾಪನ ವಿಧಾನದಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ. ಆದ್ರೆ ಭವಿಷ್ಯದ ಸಂಪನ್ಮೂಲಗಳ ವಿಭಾಗದಲ್ಲಿ ಭಾರತ 56.2 ಅಂಕ ಗಳಿಸಿದೆ. ಇದು ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.

ಇನ್ನು ಈ ಬಾರಿಯ ವರದಿಯಲ್ಲಿ ಮತ್ತೊಂದು ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಅಮೆರಿಕ ಮತ್ತು ಚೀನಾ ನಡುವಿನ ಶಕ್ತಿಯ ಅಂತರ ಗಣನೀಯವಾಗಿ ಕಡಿಮೆಯಾಗಿದೆ. 2018ರಲ್ಲಿ ಏಷ್ಯಾ ಪವರ್ ಇಂಡೆಕ್ಸ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಎರಡೂ ರಾಷ್ಟ್ರಗಳ ನಡುವಿನ ಅಂತರ ಅತ್ಯಂತ ಕಡಿಮೆಯಾಗಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದರೂ ಆರ್ಥಿಕ ಸಂಬಂಧಗಳು ಮತ್ತು ರಾಜತಾಂತ್ರಿಕ ಪ್ರಭಾವದಲ್ಲಿ ಚೀನಾ ತನ್ನ ಹಿಡಿತವನ್ನು ಹೆಚ್ಚಿಸಿಕೊಂಡಿದೆ. ಏಷ್ಯಾದಲ್ಲಿ ಅಮೆರಿಕದ ಪ್ರಭಾವ ಕುಸಿಯಲು ವಾಷಿಂಗ್ಟನ್‌ನ ಕೆಲವು ನೀತಿ ನಿರ್ಧಾರಗಳೂ ಕಾರಣವಾಗಿವೆ ಎಂದು ವರದಿ ಹೇಳಿದೆ.


ಒಟ್ಟಿನಲ್ಲಿ, ಆರ್ಥಿಕ ಸಾಮರ್ಥ್ಯದಲ್ಲಿ ಕೆಲವು ಸವಾಲುಗಳಿದ್ದರೂ ರಾಜತಾಂತ್ರಿಕ ಪ್ರಭಾವ, ರಕ್ಷಣಾ ಸಹಕಾರ ಮತ್ತು ಪ್ರಾದೇಶಿಕ ನಾಯಕತ್ವದ ಮೂಲಕ ಭಾರತ ಏಷ್ಯಾದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಅಮೆರಿಕ ಮತ್ತು ಚೀನಾ ನಡುವಿನ ಜಾಗತಿಕ ಪೈಪೋಟಿಯ ನಡುವೆ ಭಾರತ ಮೂರನೇ ಪ್ರಮುಖ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES