ಬೆಂಗಳೂರು : 1998ರ CIA ಗುಪ್ತಚರ ದಾಖಲೆಯೊಂದರಲ್ಲಿ ಭಾರತವನ್ನೂ ಕೂಡ ಬಿನ್ ಲಾಡೆನ್ ದಾಳಿ ನಡೆಸಲು ಉದ್ದೇಶಿಸಿದ್ದ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಂದರೆ 9/11ಗೂ ಮುನ್ನವೇ ಅಲ್‌ಖೈದಾದ ಭಯೋತ್ಪಾದನೆ ಅಮೆರಿಕದ ಗಡಿ ದಾಟಿ ಜಾಗತಿಕ ಗುರಿಗಳನ್ನು ಹೊಂದಿತ್ತು. ಇದೇ ವೇಳೆ ಅಮೆರಿಕದ ಮೇಲೆ ದಾಳಿ ನಡೆಸುವ ಬಗ್ಗೆ CIAಗೆ ಹಲವು ವರ್ಷಗಳ ಮುನ್ನವೇ ಎಚ್ಚರಿಕೆಗಳೂ ಸಿಕ್ಕಿದ್ದವು. ಆದರೆ 9/11 ನಿಲ್ಲಿಸಲು ಸಾಧ್ಯವಾಗಲಿಲ್ಲ. ಈಗ 25 ವರ್ಷಗಳ ಬಳಿಕ ಮತ್ತೊಂದು ಆಘಾತಕಾರಿ ಬೆಳವಣಿಗೆ ನಡೆದಿದೆ.
ಬಿನ್ ಲಾಡೆನ್‌ನ ಮಗ ಹಮ್ಜಾ ಬಿನ್ ಲಾಡೆನ್ ಹೊಸ ಅಲ್‌ಖೈದಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಹಾಗಾದ್ರೆ ಲಾಡೆನ್‌ನ ಟಾರ್ಗೆಟ್ ಪಟ್ಟಿಯಲ್ಲಿ ಭಾರತ ಯಾಕಿತ್ತು..? CIAಗೆ ಮೊದಲೇ ಏನೇನು ಮಾಹಿತಿ ಸಿಕ್ಕಿತ್ತು..? 9/11ಗೂ ಮುನ್ನ ಅಲ್‌ಖೈದಾ ಎಷ್ಟು ದೊಡ್ಡ ಜಾಲ ಕಟ್ಟಿಕೊಂಡಿತ್ತು..? ಹಮ್ಜಾ ಬಿನ್ ಲಾಡೆನ್ ಮತ್ತೆ ವಿಡಿಯೋದಲ್ಲಿ ಕಾಣಿಸಿಕೊಂಡಿರೋದರ ಹಿಂದಿನ ಲೆಕ್ಕಾಚಾರವೇನು..? 25 ವರ್ಷಗಳ ಬಳಿಕ ಹೊರಬಿದ್ದ ಈ ದಾಖಲೆಗಳು ಜಾಗತಿಕ ಭಯೋತ್ಪಾದನೆಯ ಯಾವ ಕರಾಳ ಅಧ್ಯಾಯವನ್ನು ಬಯಲು ಮಾಡಿವೆ..? ಡಿಎನ್‌ಎ 2ನೇ ಸುದ್ದಿಯಲ್ಲಿ ನೋಡೋಣ...
25 ವರ್ಷಗಳ ಬಳಿಕ ಬಿಡುಗಡೆಯಾದ CIA ದಾಖಲೆಗಳು ಬಿನ್ ಲಾಡೆನ್‌ನ ಭಯೋತ್ಪಾದನಾ ಜಾಲದ ವ್ಯಾಪ್ತಿಯ ಬಗ್ಗೆ ಹೊಸ ಮಾಹಿತಿಯನ್ನು ನೀಡಿವೆ. 1998ರ ಆಗಸ್ಟ್ 28ರಂದು ಸಿದ್ಧಪಡಿಸಲಾದ ಗುಪ್ತಚರ ದಾಖಲೆಯಲ್ಲಿ ಭಾರತವನ್ನು ಬಿನ್ ಲಾಡೆನ್ ದಾಳಿ ನಡೆಸಲು ಉದ್ದೇಶಿಸಿದ್ದ ದೇಶಗಳ ಪೈಕಿ ಒಂದಾಗಿ ಉಲ್ಲೇಖಿಸಲಾಗಿದೆ. ಭಾರತದ ಜೊತೆಗೆ ಪಾಕಿಸ್ತಾನ, ಈಜಿಪ್ಟ್, ಅರೇಬಿಯನ್ ಪೆನಿನ್ಸುಲಾದ ಕೆಲವು ದೇಶಗಳು, ಉಗಾಂಡಾ ಮತ್ತು ಸಾಧ್ಯತೆಯಾಗಿ ನೈಜೀರಿಯಾದ ಹೆಸರೂ ದಾಖಲಾಗಿದೆ. ಆದರೆ ಇಲ್ಲಿ ಒಂದು ಪ್ರಮುಖ ಅಂಶವಿದೆ. CIA ದಾಖಲೆಯಲ್ಲಿ ಭಾರತದ ಯಾವ ನಗರವನ್ನು ಗುರಿಯಾಗಿಸಲಾಗಿತ್ತು, ಯಾವಾಗ ದಾಳಿ ನಡೆಯಬೇಕಿತ್ತು ಅಥವಾ ಹೇಗೆ ದಾಳಿ ನಡೆಸಬೇಕಿತ್ತು ಎಂಬ ನಿರ್ದಿಷ್ಟ ಮಾಹಿತಿ ಇಲ್ಲ. ಹೀಗಾಗಿ ಇದನ್ನು ಭಾರತದಲ್ಲಿ ರೂಪುಗೊಂಡ ನಿರ್ದಿಷ್ಟ ದಾಳಿ ಯೋಜನೆ ಎಂದು ಹೇಳುವುದಕ್ಕಿಂತ, ಭಾರತ ಅಲ್‌ಖೈದಾದ ಸಂಭವನೀಯ ದಾಳಿ ಗುರಿಗಳ ಪಟ್ಟಿಯಲ್ಲಿ ಇತ್ತು ಎಂದೇ ಅರ್ಥೈಸಬೇಕು.
CIA ದಾಖಲೆಗಳ ಮತ್ತೊಂದು ಪ್ರಮುಖ ಅಂಶವೆಂದರೆ ಬಿನ್ ಲಾಡೆನ್ ಕೇವಲ ಒಂದು ದೇಶವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕನಾಗಿರಲಿಲ್ಲ ಅನ್ನೋದು. 1998ರ CIA ಮೌಲ್ಯಮಾಪನದ ಪ್ರಕಾರ, ಅಫ್ಘಾನಿಸ್ತಾನದಲ್ಲಿದ್ದ ಬಿನ್ ಲಾಡೆನ್ ಮತ್ತು ಆತನ ಸಹಚರರು ಅಮೆರಿಕದ ದಾಳಿಗಳ ಹೊರತಾಗಿಯೂ ತಮ್ಮ ಸಂಪರ್ಕ ಜಾಲವನ್ನು ಉಳಿಸಿಕೊಂಡಿದ್ದರು. ತರಬೇತಿ ಶಿಬಿರಗಳು ಮತ್ತೆ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಆತನ ಜಾಲದ ಸಂಪರ್ಕಗಳು ಕನಿಷ್ಠ 60 ದೇಶಗಳವರೆಗೆ ಹರಡಿದ್ದವು ಎಂದು CIA ಅಂದಾಜಿಸಿತ್ತು. ಅಂದರೆ 9/11ರ ದಾಳಿಯ ಮೂರು ವರ್ಷಗಳ ಮುನ್ನವೇ ಅಲ್‌ಖೈದಾ ಒಂದು ಸ್ಥಳೀಯ ಉಗ್ರ ಸಂಘಟನೆಯಲ್ಲ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಬಲ್ಲ ಜಾಲವಾಗಿ ಬೆಳೆದಿತ್ತು ಅನ್ನೋ ಚಿತ್ರಣ ಈ ದಾಖಲೆಗಳಿಂದ ಸಿಗುತ್ತದೆ.
ಇದೀಗ ಈ ಕಥೆಯ ಮತ್ತೊಂದು ಕರಾಳ ಭಾಗ ಅಮೆರಿಕಕ್ಕೆ ಸಂಬಂಧಿಸಿದೆ. ಹೊಸದಾಗಿ ಬಹಿರಂಗಗೊಂಡ CIA ದಾಖಲೆಗಳಲ್ಲಿ 1998ರಿಂದಲೇ ಬಿನ್ ಲಾಡೆನ್ ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಎಚ್ಚರಿಕೆಗಳಿದ್ದವು ಅನ್ನೋದು ಗೊತ್ತಾಗಿದೆ. ಕೆಲವು ವರದಿಗಳಲ್ಲಿ ವಿಮಾನ ಅಪಹರಣ ಮತ್ತು ವಿಮಾನಗಳ ಮೂಲಕ ಅಮೆರಿಕದ ನಗರಗಳನ್ನು ಗುರಿಯಾಗಿಸುವ ಸಾಧ್ಯತೆಯನ್ನೂ ಚರ್ಚಿಸಲಾಗಿತ್ತು. 2001ರ ಆಗಸ್ಟ್ 6ರಂದು ನೀಡಲಾಗಿದ್ದ ಪ್ರಸಿದ್ಧ ‘ಬಿನ್ ಲಾಡೆನ್ ಅಮೆರಿಕದಲ್ಲಿ ದಾಳಿ ಮಾಡಲು ನಿರ್ಧರಿಸಿದ್ದಾನೆ’ ಎಂಬ ವರದಿಯಲ್ಲೂ ಅಮೆರಿಕದೊಳಗಿನ ದಾಳಿಯ ಅಪಾಯದ ಬಗ್ಗೆ ಎಚ್ಚರಿಕೆ ಇತ್ತು. ಆದರೆ ಈ ದಾಖಲೆಗಳಲ್ಲಿ 9/11ರ ನಿಖರ ದಿನಾಂಕ, ಸ್ಥಳ ಅಥವಾ ಸಂಪೂರ್ಣ ಕಾರ್ಯಾಚರಣೆಯ ವಿವರ ಇರಲಿಲ್ಲ. ಅಂದರೆ ಎಚ್ಚರಿಕೆಗಳು ಇದ್ದವು.. ಆದರೆ ದಾಳಿಯನ್ನು ನಿಖರವಾಗಿ ತಡೆಯುವಷ್ಟು ಕಾರ್ಯಾಚರಣಾತ್ಮಕ ಮಾಹಿತಿ ಇರಲಿಲ್ಲ.
9/11ರ ನಂತರ ಅಮೆರಿಕ ಅಲ್‌ಖೈದಾ ವಿರುದ್ಧ ಭಾರೀ ಕಾರ್ಯಾಚರಣೆ ನಡೆಸಿತು. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಬಿನ್ ಲಾಡೆನ್ ಹತ್ಯೆಯಾದ. ನಂತರ 2022ರಲ್ಲಿ ಅಲ್‌ಖೈದಾದ ಮತ್ತೊಬ್ಬ ಪ್ರಮುಖ ನಾಯಕ ಅಯ್ಮನ್ ಅಲ್‌ಜವಾಹಿರಿಯೂ ಹತ್ಯೆಯಾದ. ಆದರೆ ನಾಯಕತ್ವದ ಮೇಲೆ ನಡೆದ ದಾಳಿಗಳಿಂದ ಅಲ್‌ಖೈದಾ ಸಂಪೂರ್ಣವಾಗಿ ಅಳಿದುಹೋಗಲಿಲ್ಲ. ಸಂಘಟನೆ ತನ್ನ ಹಿಂದಿನ ಕೇಂದ್ರಿತ ರೂಪದಿಂದ ಹೆಚ್ಚು ವಿಕೇಂದ್ರೀಕೃತ ಜಾಲವಾಗಿ ಬದಲಾಗಿದೆ. ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಲ್ಲಿರುವ ಅದರ ಅಂಗಸಂಘಟನೆಗಳು ಜಿಹಾದಿ ಚಟುವಟಿಕೆಗಳಲ್ಲಿ ಇನ್ನೂ ಪ್ರಭಾವ ಹೊಂದಿವೆ ಎಂದು ಇತ್ತೀಚಿನ ವಿಶ್ಲೇಷಣೆಗಳು ಸೂಚಿಸುತ್ತವೆ. ಹೀಗಾಗಿ ಬಿನ್ ಲಾಡೆನ್ ಇಲ್ಲ.. ಜವಾಹಿರಿ ಇಲ್ಲ.. ಆದರೆ ಲಾಡೆನ್ ಕಟ್ಟಿದ ಜಾಲದ ನೆರಳು ಇನ್ನೂ ಉಳಿದಿದೆ.
ಇದೀಗ 9/11ರ 25ನೇ ವಾರ್ಷಿಕೋತ್ಸವದ ಹೊತ್ತಲ್ಲೇ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಅಲ್‌ಖೈದಾದ ಮಾಧ್ಯಮ ವಿಭಾಗ ಅಸ್-ಸಹಾಬ್ ಸುಮಾರು 50 ನಿಮಿಷಗಳ ಹೊಸ ಪ್ರಚಾರ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಬಿನ್ ಲಾಡೆನ್‌ನ ಮಗ ಹಮ್ಜಾ ಬಿನ್ ಲಾಡೆನ್ ಕಾಣಿಸಿಕೊಂಡಿದ್ದಾನೆ. ಹಮ್ಜಾ ಬಿನ್ ಲಾಡೆನ್ 2019ರಲ್ಲಿ ಅಮೆರಿಕದ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿತ್ತು. ಆದರೆ ಇದೀಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಹಮ್ಜಾನ ಹಿಂದೆಂದೂ ಕಾಣದ ದೃಶ್ಯಗಳಿವೆ ಎಂದು ವರದಿಯಾಗಿದೆ. ಇದರಿಂದ ಹಮ್ಜಾ ನಿಜವಾಗಿಯೂ ಮತ್ತೆ ಸಕ್ರಿಯನಾಗಿದ್ದಾನಾ ಎಂಬ ಪ್ರಶ್ನೆಗಿಂತಲೂ, ಅಲ್‌ಖೈದಾ ತನ್ನ ಹಳೆಯ ನಾಯಕತ್ವದ ಪ್ರತೀಕಗಳನ್ನು ಬಳಸಿಕೊಂಡು ತನ್ನ ಅಸ್ತಿತ್ವವನ್ನು ಮತ್ತೆ ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದೆಯಾ ಅನ್ನೋ ಚರ್ಚೆ ಶುರುವಾಗಿದೆ.
25 ವರ್ಷಗಳ ಹಿಂದೆ 9/11ರ ದಾಳಿ ಇಡೀ ಜಗತ್ತಿನ ಭದ್ರತಾ ವ್ಯವಸ್ಥೆಯನ್ನೇ ಬದಲಿಸಿತು. ಆದರೆ ಇದೀಗ ಹೊರಬಂದ CIA ದಾಖಲೆಗಳು ಆ ದಾಳಿಗೂ ವರ್ಷಗಳ ಮುನ್ನವೇ ಬಿನ್ ಲಾಡೆನ್‌ನ ಜಾಗತಿಕ ಭಯೋತ್ಪಾದನಾ ಜಾಲದ ಬಗ್ಗೆ ಅಮೆರಿಕಕ್ಕೆ ಸಾಕಷ್ಟು ಎಚ್ಚರಿಕೆಗಳಿದ್ದವು ಅನ್ನೋದನ್ನು ಮತ್ತೊಮ್ಮೆ ನೆನಪಿಸಿವೆ. ಅದೇ ದಾಖಲೆಗಳಲ್ಲಿ ಭಾರತವೂ ಸಂಭವನೀಯ ದಾಳಿ ಗುರಿಗಳ ಪಟ್ಟಿಯಲ್ಲಿತ್ತು ಅನ್ನೋ ಮಾಹಿತಿ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ ಭಾರತದ ನಿರ್ದಿಷ್ಟ ಸ್ಥಳ ಅಥವಾ ದಾಳಿಯ ಕಾರ್ಯಾಚರಣೆಯ ವಿವರ ದಾಖಲೆಗಳಲ್ಲಿ ಇಲ್ಲ ಅನ್ನೋದನ್ನೂ ಗಮನಿಸಬೇಕು. ಮತ್ತೊಂದೆಡೆ 9/11ರ 25ನೇ ವಾರ್ಷಿಕೋತ್ಸವದ ಹೊತ್ತಲ್ಲೇ ಹಮ್ಜಾ ಬಿನ್ ಲಾಡೆನ್ ಕಾಣಿಸಿಕೊಂಡಿರುವ ಹೊಸ ಅಲ್‌ಖೈದಾ ವಿಡಿಯೋ ಭಯೋತ್ಪಾದನೆಯ ಹಳೆಯ ಪ್ರತೀಕಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಂದರೆ 9/11.. ಒಂದು 25 ವರ್ಷಗಳ ಹಿಂದಿನ ಘಟನೆ ಮಾತ್ರವಲ್ಲ.. ಅದರ ಹಿಂದೆ ಬೆಳೆದ ಜಾಗತಿಕ ಉಗ್ರ ಜಾಲದ ಪರಿಣಾಮ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಲಾಡೆನ್ ಸತ್ತ.. ನಾಯಕರು ಬದಲಾಗಿದ್ದಾರೆ.. ಸಂಘಟನೆಯ ರೂಪ ಬದಲಾಗಿದೆ.. ಆದರೆ ಜಾಗತಿಕ ಭಯೋತ್ಪಾದನೆಯ ಸವಾಲು ಮಾತ್ರ ಇನ್ನೂ ಜೀವಂತವಾಗಿದೆ.