ನಟ ಧನ್ವೀರ್‌ಗೌಡ ವಿರುದ್ಧ ಆಕ್ರೋಶ! ಕ್ಷಮೆ ಕೇಳದಿದ್ರೆ ಉಗ್ರ ಹೋರಾಟದ ಎಚ್ಚರಿಕೆ!
ನಟ ದರ್ಶನ್ ಅವರ ಕುಟುಂಬದೊಂದಿಗೆ ಝೈದ್ ಖಾನ್ ಉತ್ತಮ ಒಡನಾಟ ಹೊಂದಿರುವುದನ್ನ ಧನ್ವೀರ್‌ಗೌಡ ಸಹಿಸುತ್ತಿಲ್ಲವೆಂದು ಅಭಿಮಾನಿಗಳ ಬಳಗ ಆರೋಪಿಸಿದೆ. ಝೈದ್ ಖಾನ್ ಮತ್ತು ದರ್ಶನ್ ಕುಟುಂಬದ ನಡುವಿನ ಉತ್ತಮ ಸಂಬಂಧವೇ ಧನ್ವೀರ್‌ಗೌಡ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಆರೋಪವನ್ನ ವಿಜಯ್ ಕುಮಾರ್ ಮಾಡಿದ್ದಾರೆ.
Dhanveer Gowda Controversy: ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಪದಗಳನ್ನ ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ ಧನ್ವೀರ್‌ಗೌಡ ವಿರುದ್ಧ ಮಂಡ್ಯದಲ್ಲಿ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಿದೆ. ಝೈದ್ ಖಾನ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯವೆಂದು ಆರೋಪಿಸಿರುವ ಅಭಿಮಾನಿಗಳು, ಧನ್ವೀರ್‌ಗೌಡ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯ ಜಿಲ್ಲಾ ಝೈದ್ ಖಾನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಹೆಚ್.ಬಿ.ವಿಜಯ್ ಕುಮಾರ್ ಅವರು ಧನ್ವೀರ್‌ಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನಾಳೆಯೊಳಗೆ ತಮ್ಮ ಹೇಳಿಕೆಯನ್ನ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಹೋರಾಟದ ಜೊತೆಗೆ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ
ನಟ ಝೈದ್ ಖಾನ್ ಅವರನ್ನ ಗುರಿಯಾಗಿಸಿಕೊಂಡು ಧನ್ವೀರ್‌ಗೌಡ ಅತ್ಯಂತ ಕೀಳುಮಟ್ಟದ ಭಾಷೆ ಹಾಗೂ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ. ಒಬ್ಬ ನಟನ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ. ಇತರ ಕಲಾವಿದರ ಕುರಿತು ಗೌರವಯುತವಾಗಿ ನಡೆದುಕೊಳ್ಳಬೇಕೆಂದು ಅಭಿಮಾನಿಗಳ ಬಳಗ ಆಗ್ರಹಿಸಿದೆ. ಝೈದ್ ಖಾನ್ ವಿರುದ್ಧ ಧನ್ವೀರ್‌ಗೌಡ ಬಳಸಿದ್ದಾರೆ ಎನ್ನಲಾದ ಪದಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಜಯ್ ಕುಮಾರ್, ಇಂತಹ ಹೇಳಿಕೆಗಳನ್ನ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.
ಸಿಎಂ ಡಿಕೆಶಿ ಕುರಿತು ಹೇಳಿಕೆಗೂ ಆಕ್ರೋಶ
ಝೈದ್ ಖಾನ್ ವಿರುದ್ಧದ ಅವಹೇಳನ ಆರೋಪದ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಗುರವಾಗಿ ಮಾತನಾಡಿದ್ದಾರೆಂಬ ಆರೋಪವನ್ನೂ ಅಭಿಮಾನಿಗಳ ಬಳಗ ಮಾಡಿದೆ. ಮುಖ್ಯಮಂತ್ರಿ ಕುರಿತು ಈ ರೀತಿಯ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವೆಂದು ವಿಜಯ್ ಕುಮಾರ್ ಹೇಳಿದ್ದಾರೆ. ಧನ್ವೀರ್‌ಗೌಡ ತಮ್ಮ ಹೇಳಿಕೆಗಳನ್ನ ಹಿಂಪಡೆಯಬೇಕು. ಝೈದ್ ಖಾನ್ ಹಾಗೂ ಮುಖ್ಯಮಂತ್ರಿ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ನಾಳೆಯೊಳಗೆ ಕ್ಷಮೆ ಕೇಳದಿದ್ದರೆ ಹೋರಾಟದ ಎಚ್ಚರಿಕೆ
ಧನ್ವೀರ್‌ಗೌಡಗೆ ನಾಳೆಯವರೆಗೆ ಗಡುವು ನೀಡಿರುವ ಅಭಿಮಾನಿಗಳ ಬಳಗ, ಅಷ್ಟರೊಳಗೆ ಬಹಿರಂಗ ಕ್ಷಮೆಯಾಚಿಸದಿದ್ದರೆ ಮುಂದಿನ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದೆ. ಕ್ಷಮೆಯಾಚನೆಗೆ ಮುಂದಾಗದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು. ಇದರ ಜೊತೆಗೆ ಮಂಡ್ಯದಲ್ಲಿ ಬೀದಿಗಿಳಿದು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೆಚ್.ಬಿ.ವಿಜಯ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಈ ಎಚ್ಚರಿಕೆಯನ್ನೂ ಮೀರಿ ಧನ್ವೀರ್‌ಗೌಡ ಮಂಡ್ಯ ಜಿಲ್ಲೆಗೆ ಬಂದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಟ ದರ್ಶನ್ ಕುಟುಂಬಕ್ಕೆ ಮಾನಸಿಕ ಕಿರುಕುಳ ಆರೋಪ
ನಟ ದರ್ಶನ್ ಅವರ ಕುಟುಂಬದೊಂದಿಗೆ ಝೈದ್ ಖಾನ್ ಉತ್ತಮ ಒಡನಾಟ ಹೊಂದಿರುವುದನ್ನ ಧನ್ವೀರ್‌ಗೌಡ ಸಹಿಸುತ್ತಿಲ್ಲವೆಂದು ಅಭಿಮಾನಿಗಳ ಬಳಗ ಆರೋಪಿಸಿದೆ. ಝೈದ್ ಖಾನ್ ಮತ್ತು ದರ್ಶನ್ ಕುಟುಂಬದ ನಡುವಿನ ಉತ್ತಮ ಸಂಬಂಧವೇ ಧನ್ವೀರ್‌ಗೌಡ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಆರೋಪವನ್ನ ವಿಜಯ್ ಕುಮಾರ್ ಮಾಡಿದ್ದಾರೆ. ಇದೇ ವಿಚಾರವಾಗಿ ಧನ್ವೀರ್‌ಗೌಡ ದರ್ಶನ್ ಕುಟುಂಬದ ಸದಸ್ಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ತಡೆಯಲು ಧನ್ವೀರ್‌ಗೌಡನನ್ನ ಕೂಡಲೇ ಬಂಧಿಸಬೇಕೆಂದು ಅಭಿಮಾನಿಗಳ ಬಳಗ ಒತ್ತಾಯಿಸಿದೆ.
ನಟ ಧನ್ವೀರ್‌ಗೌಡ ಬಂಧನಕ್ಕೆ ಆಗ್ರಹ
ಧನ್ವೀರ್‌ಗೌಡ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಜಯ್ ಕುಮಾರ್, ಹಣ ಮತ್ತು ಆಸ್ತಿಯ ದುರಹಂಕಾರದಿಂದ ಇತರರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಒಂದೆರಡು ಪ್ಲಾಪ್ ಸಿನಿಮಾಗಳನ್ನ ಮಾಡಿರುವ ಧನ್ವೀರ್‌ಗೌಡ ಇತರ ಕಲಾವಿದರನ್ನ ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನ ನೀಡುವುದನ್ನ ನಿಲ್ಲಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಒಟ್ನಲ್ಲಿ ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಧನ್ವೀರ್‌ಗೌಡ ವಿರುದ್ಧ ಮಂಡ್ಯದಲ್ಲಿ ಅಭಿಮಾನಿಗಳ ಅಸಮಾಧಾನ ವ್ಯಕ್ತವಾಗಿದೆ. ಬಹಿರಂಗ ಕ್ಷಮೆಯಾಚನೆ, ಹೇಳಿಕೆ ಹಿಂಪಡೆಯುವುದು ಹಾಗೂ ಬಂಧನಕ್ಕೆ ಆಗ್ರಹಿಸಿರುವ ಅಭಿಮಾನಿಗಳ ಬಳಗ, ಬೇಡಿಕೆ ಈಡೇರದಿದ್ದರೆ ಕಾನೂನು ಹೋರಾಟ ಮತ್ತು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.