ಯುಟ್ಯೂಬರ್ ಅಮುಕು ಡುಮುಕು ಮಂಜ ವಿರುದ್ಧ ಮತ್ತೊಂದು FIR ದಾಖಲು
youtuber amuku dumuku manga against FIR : ಸೋಷಿಯಲ್ ಮೀಡಿಯಾದಲ್ಲಿ ಅಮುಕು ಡುಮುಕು ಮಂಜು (Amuku Dumuku Manja) ಹೆಸರು ಮತ್ತೊಮ್ಮೆ ವಿವಾದದ ಮೂಲಕ ಸುದ್ದಿಯಾಗಿದೆ.
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಅಮುಕು ಡುಮುಕು ಮಂಜು (Amuku Dumuku Manja) ಹೆಸರು ಮತ್ತೊಮ್ಮೆ ವಿವಾದದ ಮೂಲಕ ಸುದ್ದಿಯಾಗಿದೆ. ಈಗಾಗಲೇ ಪಬ್‌ನಲ್ಲಿ ಗಲಾಟೆ ಮಾಡಿಕೊಂಡ ಆರೋಪ ಎದುರಿಸಿದ್ದ ಯುಟ್ಯೂಬರ್ ಮಂಜು, ಇದೀಗ ಪಕ್ಕದ ಮನೆಯವರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಮುಕು ಡುಮುಕು ಮಂಜು ಅಲಿಯಾಸ್ ಮಂಜುನಾಥ್ ಮತ್ತು ಅವರ ಪಕ್ಕದ ಮನೆಯ ನಿವಾಸಿ ವಿಕ್ರಂ ನಡುವೆ ಗಲಾಟೆ ನಡೆದಿದೆ. ಇಬ್ಬರ ನಡುವಿನ ವೈಮನಸ್ಸಿಗೆ ಮಂಜುನಾಥ್ ಅವರ ತಮ್ಮ ಸಿದ್ದ ಎಂಬಾತನ ವಿಚಾರ ಕಾರಣ ಎನ್ನಲಾಗಿದೆ. ಈ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಳಿಕ ಎರಡೂ ಕುಟುಂಬಗಳ ನಡುವೆ ದೊಡ್ಡ ಮಟ್ಟದ ವಾಗ್ವಾದಕ್ಕೆ ತಿರುಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಎರಡೂ ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವಿಕ್ರಂ ಅವರು ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಮಂಜುನಾಥ್ ಕೂಡ ಸುಮ್ಮನಿರದೆ ವಿಕ್ರಂ ವಿರುದ್ಧವೇ ಪ್ರತ್ಯೇಕ ದೂರು ನೀಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪೊಲೀಸರು ಎರಡೂ ಕಡೆಯವರ ಆರೋಪಗಳನ್ನು ಪರಿಶೀಲಿಸುತ್ತಿದ್ದಾರೆ.
ಇನ್ನು, ಅಮುಕು ಡುಮುಕು ಮಂಜು ಈ ಹಿಂದೆಯೂ ಪಬ್‌ನಲ್ಲಿ ಬಿಲ್ ಪಾವತಿಸುವ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ವಿವಾದದ ಚರ್ಚೆ ತಣ್ಣಗಾಗುವ ಮುನ್ನವೇ ಇದೀಗ ಪಕ್ಕದ ಮನೆಯವರ ಜೊತೆಗಿನ ಜಗಳ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.ಸದ್ಯ ಯಶವಂತಪುರ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಎರಡೂ ಕಡೆಯವರ ಹೇಳಿಕೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ಮಂಜು, ಪದೇಪದೆ ವಿವಾದಗಳಲ್ಲಿ ಸಿಲುಕುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ತಮ್ಮದೇ ವಿಶಿಷ್ಟ ಮಾತಿನ ಶೈಲಿ, ಕಾಮಿಡಿ ಹಾಗೂ ವಿಚಿತ್ರ ವರ್ತನೆಯ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ.
ನಟ ಧ್ರುವ ಸರ್ಜಾ ಅವರ ಮುಂದೆ 'ಅಮುಕು ಡುಮುಕು' ಎಂದು ಹೇಳಿದ ವಿಡಿಯೋ ವೈರಲ್ ಆದ ಬಳಿಕ ಹೆಚ್ಚು ಗುರುತಿಸಿಕೊಂಡರು. ಮಾತ್ರವಲ್ಲದೇ ಜೀ ಕನ್ನಡದ ರಿಯಾಲಿಟಿ ಶೋ ಕಾರ್ಯಕ್ರಮಕ್ಕೂ ಅತಿಥಿಯಾಗಿ ಹೋಗಿದ್ದರು.ಬಿಗ್‌ಬಾಸ್ ಕನ್ನಡ 13ರ ಅಗ್ನಿಪರೀಕ್ಷೆಯಲ್ಲೂ ಕಾಣಿಸಿಕೊಂಡಿದ್ದರು.
ಒಟ್ಟಿನಲ್ಲಿ: ಕಾಮಿಡಿ ಮತ್ತು ವೈರಲ್ ರೀಲ್ಸ್ ಮೂಲಕ ಗುರುತಿಸಿಕೊಂಡ ಮಂಜುನಾಥ್, ಇದೀಗ ಸೋಶಿಯಲ್ ಮೀಡಿಯಾ ಜನಪ್ರಿಯತೆಯ ಜೊತೆಗೆ ಹಲವು ವಿವಾದಗಳಿಂದಲೂ ಸುದ್ದಿಯಲ್ಲಿದ್ದಾರೆ.