Ramayana Ravana Tandavam song : ಭಾರತೀಯ ಅತ್ಯಂತ ನಿರೀಕ್ಷಿತ, ಬಹುಕೋಟಿ ವೆಚ್ಚದ 'ರಾಮಾಯಣ' ಚಿತ್ರದ ಬಗ್ಗೆ ಪ್ರತಿದಿನ ಒಂದಲ್ಲ ಒಂದು ರೋಚಕ ವಿಷಯಗಳು ಹೊರಬರುತ್ತಲೇ ಇವೆ. ಅದರಲ್ಲೂ ವಿಶೇಷವಾಗಿ, ಈ ಚಿತ್ರದಲ್ಲಿ ಲಂಕಾಧಿಪತಿ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಲುಕ್ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಇದರ ಮಧ್ಯ ಮಹಾದೇವನ ಪರಮ ಭಕ್ತನಾದ ರಾವಣ, ಶಿವ ತಾಂಡವ ಮಾಡುವ ಹಾಡಿನ ಝಲಕ್‌ವೊಂದನ್ನು ಸಿನಿತಂಡ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ..
ಜಟಾಧಾರಿ ರಾವಣನ ಆವೇಶಭರಿತ ತಾಂಡವ
ಇಂದು ರಿಲೀಸ್ ಆದ ವೀಡಿಯೊದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದು ದೃಶ್ಯಗಳನ್ನು ನೋಡಿದ್ರರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಶಿವನ ಭಕ್ತನಾದ ರಾವಣನು ಮಹಾದೇವನ ಮುಂದೆ ನಿಂತು ಆವೇಶದಿಂದ ಶಿವ ತಾಂಡವ ನೃತ್ಯ ಮಾಡುವ ದೃಶ್ಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ತಾಂಡವ ನೃತ್ಯದಲ್ಲಿ ಆವೇಶ, ಆಕ್ರೋಶ ಹಾಗೂ ಭಕ್ತಿಯ ಪರಾಕಾಷ್ಠೆ ಸಂಗಮವಿದೆ.
ಅಂದಹಾಗೆ, ಶಿವತಾಂಡ ನೃತ್ಯವನ್ನು ಮಾಡುವುದು ಅಷ್ಟು ಸರಳವಲ್ಲ, ಪ್ರತಿಯೊಂದು ಹೆಜ್ಜೆ ಹಾಕಲು ಅಖಂಡ ಶಕ್ತಿ ಬೇಕಾಗುತ್ತದೆ. ಆದರೆ, ಯಶ್ ಲೀಲಾಜಾಲವಾಗಿ, ಅದ್ಭುತವಾಗಿ ಅಭಿನಯಿಸಿದ್ದು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ರಾಕಿ ಭಾಯ್, ರಾಯ ಲುಕ್‌ಗಿಂತಲೂ ಇಲ್ಲಿ ಯಶ್ ಅವರು ಕಂಪ್ಲೀಟ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜಟಾಧಾರಿ ರಾವಣನ ಗಾಂಭೀರ್ಯ, ಗತ್ತಿನಲ್ಲಿ ಮಿಂಚಿದ್ದಾರೆ.
ಕುಬೇರನ ಜತೆಗಿನ ಕದನ ಮತ್ತು ಲಂಕಾ ವಶದ ಹಿನ್ನೆಲೆ
ಈ ವಿಶೇಷ ಹಾಡಿನಲ್ಲಿ ಕೇವಲ ನೃತ್ಯವಷ್ಟೇ ಅಲ್ಲದೆ, ಮಹತ್ವದ ಪೌರಾಣಿಕ ಕಥೆಯ ಎಳೆಯನ್ನೂ ಸಹ ಸುಂದರವಾಗಿ ತೋರಿಸಲಾಗಿದೆ. ರಾವಣನು ತನ್ನ ಮಲಸಹೋದರನಾದ ಕುಬೇರನೊಂದಿಗೆ ಹೋರಾಡಿ ಲಂಕಾ ರಾಜ್ಯವನ್ನು ಕಬಳಿಸಿದ ಪ್ರಸಂಗವನ್ನು ಇದರೊಂದಿಗೆ ಥಳಕುಹಾಕಲಾಗಿದೆ. ಮೂಲತಃ ಬ್ರಹ್ಮನ ಮೊಮ್ಮಗ ಮತ್ತು ಧನದೇವತೆಯಾದ ಕುಬೇರನು ಮೊದಲು ಲಂಕಾ ನಗರಿಯನ್ನು ಆಳುತ್ತಿದ್ದನು. ಆದರೆ ತಾಯಿ ಕೈಕಸಿಯ ಪ್ರೇರಣೆ ಹಾಗೂ ಅಸುರ ಸೈನ್ಯದ ಬಲದಿಂದ ರಾವಣನು ಲಂಕೆಯ ಮೇಲೆ ಭೀಕರ ದಾಳಿ ನಡೆಸುತ್ತಾನೆ.
ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಲಂಕೆಯನ್ನು ಕಸಿದುಕೊಳ್ಳುವುದಲ್ಲದೆ, ಕುಬೇರನಿಗೆ ಸೇರಿದ ಅತ್ಯಂತ ಪ್ರಸಿದ್ಧವಾದ 'ಪುಷ್ಪಕ ವಿಮಾನ'ವನ್ನೂ ಸಹ ರಾವಣನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾನೆ. ಯುದ್ಧದಲ್ಲಿ ಸೋತ ಕುಬೇರನು ಲಂಕೆಯನ್ನು ತೊರೆದು, ಕೈಲಾಸ ಪರ್ವತದ ಸಮೀಪ 'ಅಳಕಾಪುರಿ' ಎಂಬ ಹೊಸ ನಗರಿಯನ್ನು ನಿರ್ಮಿಸಿಕೊಂಡು ವಾಸಿಸಲು ಆರಂಭಿಸುತ್ತಾನೆ ಎಂಬ ರೋಚಕ ಇತಿಹಾಸದ ದೃಶ್ಯಗಳು ಈ ಹಾಡಿನಲ್ಲಿ ಹೈಲೈಟ್ ಆಗಿವೆ ಎನ್ನಲಾಗಿದೆ.
ನವೆಂಬರ್ 5ರಂದು ದೃಶ್ಯ ವೈಭವ ತೆರೆಗೆ
ನಿತೇಶ್ ತಿವಾರಿ ನಿರ್ದೇಶನದಲ್ಲಿ ಅತ್ಯಂತ ಅದ್ದೂರಿಯಾಗಿ ಮೂಡಿಬರುತ್ತಿರುವ ಈ 'ರಾಮಾಯಣ' ಚಿತ್ರವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇಡೀ ಭಾರತೀಯ ಸಿನಿಮಾರಂಗವೇ ಹೆಮ್ಮೆ ಪಡುವಂತಹ ರೀತಿಯಲ್ಲಿ ಈ ಪೌರಾಣಿಕ ಕಥೆಯನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ. ವಿಶೇಷವಾಗಿ, ಇಡೀ ಕುಟುಂಬದ ಎಲ್ಲ ಸದಸ್ಯರು ಹಾಗೂ ಮಕ್ಕಳು ಒಟ್ಟಿಗೆ ಕುಳಿತು ಕಣ್ತುಂಬಿಕೊಳ್ಳುವಂತಹ ಕುಟುಂಬ ಸಮೇತ ನೋಡುವ ಸಿನಿಮಾವಾಗಿ ಇದನ್ನು ರೂಪಿಸಲಾಗಿದೆ ಎಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಸ್ವತಃ ಯಶ್ ತಿಳಿಸಿದ್ದರು.
ಈ ಚಿತ್ರವು ಒಟ್ಟು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅತ್ಯಂತ ಕುತೂಹಲ ಮೂಡಿಸಿರುವ ಮೊದಲ ಭಾಗವು ಇದೇ ಬರುವ ನವೆಂಬರ್ 5ರಂದು ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಇನ್ನು ಈ ಬ್ರಹ್ಮಾಂಡ ಸಿನಿಮಾದ ಎರಡನೇ ಭಾಗವು ಮುಂಬರುವ 2027ರ ದೀಪಾವಳಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಘೋಷಿಸಿದೆ. ದೃಶ್ಯ ವೈಭವದಿಂದ ಕೂಡಿರುವ ಈ ಹೊಸ ರಾಮಾಯಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.