Prashanth Gowda : ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' (Bigg Boss Kannada Season 13) ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಿರಿಕ್, ಜಗಳ ಹಾಗೂ ತಂತ್ರ-ಪ್ರತಿತಂತ್ರಗಳ ಆಟ ಕಾವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಲು ವೈಲ್ಡ್ ಕಾರ್ಡ್ (Wildcard Entry) ಮೂಲಕ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ಕಾಮಿಡಿ ಕಲಾವಿದ ಪ್ರಶಾಂತ್ ಗೌಡ ಎಂಟ್ರಿ ನೀಡಿದ್ದಾರೆ. ತಮ್ಮದೇ ಆದ ವಿಭಿನ್ನ ಶೈಲಿಯ ಹಾಸ್ಯ ಹಾಗೂ ಟೈಮಿಂಗ್‌ನಿಂದ ಕನ್ನಡಿಗರ ಮನಗೆದ್ದಿರುವ ಪ್ರಶಾಂತ್ ಅವರ ಹಿನ್ನೆಲೆ ಹಾಗೂ ಕಿರುತೆರೆ ಪಯಣ ಇಲ್ಲಿದೆ.
ಕಿರುತೆರೆಯಲ್ಲಿ ಮನೆ ಮಾತಾದ ಪ್ರಶಾಂತ್ ಗೌಡ
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪ್ರಶಾಂತ್ ಗೌಡ, ಡಿಜಿಟಲ್ ವೇದಿಕೆಗಳ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಶೋ ಮೂಲಕ ತಮ್ಮ ನಟನಾ ಪ್ರತಿಭೆಯನ್ನು ಸಾಬೀತುಪಡಿಸಿದ ಇವರು, ಕಿರುತೆರೆ ವೀಕ್ಷಕರನ್ನು ತಮ್ಮ ಕಾಮಿಡಿ ಪಂಚ್‌ಗಳಿಂದ ರಂಜಿಸಿದ್ದಾರೆ.
ಅಷ್ಟೇ ಅಲ್ಲದೆ, ಪ್ರಸಾರವಾದ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ಸಮಯಪ್ರಜ್ಞೆ ಹಾಗೂ ಆಟದ ವೈಖರಿಯ ಮೂಲಕ ಸೀಸನ್‌ನ ಮೊದಲ ವಿಜೇತರಾಗಿ (Winner) ಹೊರಹೊಮ್ಮಿದ್ದರು. ಇದಲ್ಲದೆ 'ಮಜಾ ಭಾರತ' ಹಾಗೂ 'ಬಾಯ್ಸ್ ವರ್ಸಸ್ ಗರ್ಲ್ಸ್' ನಂತಹ ವಿವಿಧ ಹಾಸ್ಯ ಕಾರ್ಯಕ್ರಮಗಳಲ್ಲಿ ಸ್ಪರ್ಧಿಯಾಗಿ ಪ್ರೇಕ್ಷಕರಿಗೆ ಕಚಗುಳಿ ಇಟ್ಟಿದ್ದಾರೆ.
ಬರಿ ಕಾಮಿಡಿ ಅಷ್ಟೇ ಅಲ್ಲ, ನೃತ್ಯದಲ್ಲೂ ಸೈ!
ಪ್ರಶಾಂತ್ ಗೌಡ ಬೇವರೆ ಕಾಮಿಡಿಗೆ ಸೀಮಿತವಾಗಿರದೆ, ಉತ್ತಮ ನರ್ತಕರಾಗಿಯೂ ಜನಪ್ರಿಯರಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಖಾತೆಗಳಲ್ಲಿ ಆಕರ್ಷಕ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ವೈರಲ್ ಆಗುತ್ತಿರುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ಜಾಕಿ' ಸಿನಿಮಾದ ಹಾಡಿಗೆ ಇವರು ಮಾಡಿದ್ದ ಡ್ಯಾನ್ಸ್ ವಿಡಿಯೋ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.
ಉದ್ಯಮ ಹಾಗೂ ವೈಯಕ್ತಿಕ ಜೀವನ
ಕಿರುತೆರೆ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಮಿಂಚುತ್ತಿರುವ ಪ್ರಶಾಂತ್, ಇತ್ತೀಚೆಗಷ್ಟೇ ಉದ್ಯಮ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. 'ಸೆಲೆಬ್ರೇಟ್ ಲೈಫ್' (Celebrate Life) ಎಂಬ ಐಷಾರಾಮಿ ಸಲೂನ್ ಉದ್ಯಮವನ್ನು ಆರಂಭಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿಯೂ ಹೆಜ್ಜೆ ಇಟ್ಟಿದ್ದಾರೆ.
ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ಅವರು ತಮ್ಮ ಬಹುಕಾಲದ ಗೆಳತಿ ಕೃತಿ ಗೌಡ ಅವರೊಂದಿಗೆ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಸಂಭ್ರಮದ ಬೆನ್ನಲ್ಲೇ ಇದೀಗ ದೊಡ್ಮನೆ ಪ್ರವೇಶಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪತ್ನಿ ಜೊತೆ ವಿದೇಶಿ ಪ್ರವಾಸಕ್ಕೆ ತೆರಳಿದ್ದರು.
ದೊಡ್ಮನೆಯಲ್ಲಿ ಹೆಚ್ಚಿದ ಕುತೂಹಲ
ಬಿಗ್ ಬಾಸ್ ಸೀಸನ್ 13ರಲ್ಲಿ ಜಗಳ, ಭಿನ್ನಾಭಿಪ್ರಾಯ ಹಾಗೂ ಕಾಂಪಿಟೇಷನ್ ಜೋರಾಗಿರುವಾಗ, ಪ್ರಶಾಂತ್ ಗೌಡ ಅವರ ಎಂಟ್ರಿಯಿಂದ ಮನೆಗೆ ಹಾಸ್ಯದ ಸ್ಪರ್ಶ ಸಿಗಲಿದೆ ಎಂಬ ನಿರೀಕ್ಷೆ ವೀಕ್ಷಕರಲ್ಲಿದೆ. ತಮ್ಮ ಕಾಮಿಡಿ ಟೈಮಿಂಗ್ ಮತ್ತು ಎಂಟರ್‌ಟೈನ್‌ಮೆಂಟ್ ಮೂಲಕ ದೊಡ್ಮನೆಯ ವೈಖರಿಯನ್ನು ಹೇಗೆ ಬದಲಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.