ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ ದರ್ಶನ್
ವಿಜಯಲಕ್ಷ್ಮಿ ದರ್ಶನ್ ಹಾಗೂ ನಟ ಧನ್ವೀರ್ ನಡುವೆ ನಡೆಯುತ್ತಿದ್ದ ಜಟಾಪಟಿ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ದರ್ಶನ್ ಕುಟುಂಬದ ವಿಚಾರವಾಗಿ ನಡೆಯುತ್ತಿದ್ದ ಸೋಷಿಯಲ್ ಮೀಡಿಯಾ ಸಮರ ಈಗ ನ್ಯಾಯಾಲಯದ ಅಂಗಳಕ್ಕೆ ತಲುಪಿದ್ದು, ನಟ ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ಖಾಸಗಿ ದೂರು ದಾಖಲಿಸಿದ್ದಾರೆ.
ಹೌದು, ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ CCH-37 ದೂರು ದಾಖಲು ಮಾಡಿರುವ ವಿಜಯಲಕ್ಷ್ಮಿ ದರ್ಶನ್, ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
31 ಅಕ್ಟೋಬರ್ 2026ರಂದು ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ಕೋರ್ಟ್ ಮೆಟ್ಟಿಲೇರಿರುವ ವಿಜಯಲಕ್ಷ್ಮಿ ದರ್ಶನ್ ರಿಂದ BNSS ಸೆಕ್ಷನ್ 222 ಮತ್ತು 210ರ ಅಡಿಯಲ್ಲಿ ಖಾಸಗಿ ಅಪರಾಧ ದೂರು ಸಲ್ಲಿಕೆ ಮಾಡಿದ್ದಾರೆ.
ಧನ್ವೀರ್ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ ಆರೋಪ, ಧ್ವನಿಮುದ್ರಿಕೆಗಳು, ದಾಖಲೆಗಳ ಪ್ರತಿಗಳು ಹಾಗೂ ಪ್ರಸಾರಗಳ ಮೂಲಕ ಮಾನಹಾನಿ ಆರೋಪದ ಬಗ್ಗೆ ಖಾಸಗಿ ದೂರಿನಲ್ಲಿ ಪ್ರಸ್ತಾಪಿಸಿರುವ ವಿಜಯಲಕ್ಷ್ಮಿ ದರ್ಶನ್, ಧನ್ವೀರ್ ಅವರ ಹೇಳಿಕೆಗಳಿಂದ ತನಗೆ ಮಾನಹಾನಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2)ರ ಅಡಿಯಲ್ಲಿ ಧನ್ವೀರ್ ಅವರನ್ನು ಶಿಕ್ಷೆಗೆ ಒಳಪಡಿಸುವಂತೆ ಮನವಿ ಮಾಡಿರುವ ವಿಜಯಲಕ್ಷ್ಮಿ ಪ್ರಮಾಣವಚನದ ಹೇಳಿಕೆ ನೀಡಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಧನ್ವೀರ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ದಾಖಲೆಗಳು, ಆಡಿಯೋ ರೆಕಾರ್ಡಿಂಗ್ ಹಾಗೂ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿರುವ ವಿಜಯಲಕ್ಷ್ಮಿ ದರ್ಶನ್, ತಮ್ಮ ದೂರನ್ನು BNSS ಸೆಕ್ಷನ್ 222(1)ರ ಅಡಿಯಲ್ಲಿ ನೊಂದ ವ್ಯಕ್ತಿಯ ಖಾಸಗಿ ದೂರಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
BNSS ಸೆಕ್ಷನ್ 223 ಹಾಗೂ ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಮುಂದಿನ ಕ್ರಮಕ್ಕೆ ಕೋರಿಕೆ ಮಾಡಲಾಗಿದ್ದು, ಆರೋಪದ ವಿಚಾರಣೆಗೆ ಸಾಕಷ್ಟು ಆಧಾರಗಳಿವೆ ಎಂದು ಕಂಡುಬಂದರೆ BNSS ಸೆಕ್ಷನ್ 227ರ ಅಡಿಯಲ್ಲಿ ಧನ್ವೀರ್‌ಗೆ ಸಮನ್ಸ್ ಅಥವಾ ಪ್ರೊಸೆಸ್ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಧನ್ವೀರ್ ವಿರುದ್ಧ ಕಾನೂನು ಪ್ರಕಾರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ವಿಜಯಲಕ್ಷ್ಮಿ ದರ್ಶನ್ ಪ್ರಾರ್ಥನೆ ಸಲ್ಲಿಸಿದ್ದಾರೆ. ದೂರಿನ ದಾಖಲೆಗಳಲ್ಲಿ ವಿಜಯಲಕ್ಷ್ಮಿ ಪರವಾಗಿ ವಕೀಲರಾದ ವನಿತು ಆರ್. ಅವರ ಹೆಸರಿನ ಉಲ್ಲೇಖವಿದೆ. ಮತ್ತೊಂದೆಡೆ, ವಕೀಲರಾದ ರಂಗನಾಥ್ ರೆಡ್ಡಿ ಅವರ ಮೂಲಕ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿರುವುದಾಗಿ ಮಾಹಿತಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲೆ ಮೇರೆಗೆ ನ್ಯಾಯಾಲಯ ನವೆಂಬರ್ 30, 2026ಕ್ಕೆ ವಿಚಾರಣೆ ನಿಗದಿಪಡಿಸಿದೆ ಎಂದು ತಿಳಿದುಬಂದಿದೆ.