SOCIAL MEDIA

Newsletter

PARTNER SITES
Select Language Select State

ದರ್ಶನ್ ಮನೆಗೆ ಆಟೋಗಳನ್ನು ಕಳುಹಿಸಿ ಸೆಕ್ಯೂರಿಟಿಗೆ ಧಮ್ಕಿ : ಅನಾಮಿಕನ ಆಡಿಯೋ ವೈರಲ್!

ವಿಜಯಲಕ್ಷ್ಮಿ ದರ್ಶನ್‌ ಮತ್ತು ಧನ್ವೀರ್ ಗೌಡ ನಡುವಿನ ವೈಮನಸ್ಸು ಈಗ ಮತ್ತೊಂದು ಹಂತ ತಲುಪಿದೆ. ದರ್ಶನ್‌ ಮನೆ ಸೆಕ್ಯೂರಿಟಿ ಗಾರ್ಡ್‌ಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಚಿತ್ರರಂಗದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಕುರಿತ ಸಂಪೂರ್ಣ ವಿವರಗಳು ಇಲ್ಲಿವೆ..

Written By Krishna NK
Published: Nov 04, 2026, 06:55 PM IST | Updated: Nov 04, 2026, 07:00 PM IST
Image Credit: Darshan home news
Join

ಬೆಂಗಳೂರು : ವಿಜಯಲಕ್ಷ್ಮಿ ದರ್ಶನ್ ಮತ್ತು ಯುವ ನಟ ಧನ್ವೀರ್ ಗೌಡ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಇದೀಗ ವಿವಾದ ಮತ್ತಷ್ಟು ಸ್ಫೋಟಗೊಂಡಿದೆ. ದರ್ಶನ್ ಅವರ ಮನೆಗೆ ಸಾಲು ಸಾಲು ಆಟೋಗಳನ್ನು ಕಳುಹಿಸಿ, ಸೆಕ್ಯೂರಿಟಿ ಗಾರ್ಡ್‌ಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.  

ಹೌದು.. ನವೆಂಬರ್ 1 ರಂದು ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವ ಹಬ್ಬದ ವಾತಾವರಣವಿತ್ತು. ಇದರ ನಡುವೆ ದರ್ಶನ್ ಅವರ ಮನೆ ಮುಂದೆ ಅನಿರೀಕ್ಷಿತವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಆಟೋಗಳು ಬಂದು ನಿಂತಿದ್ದವು. ಆಟೋ ಬುಕ್ ಮಾಡಿದ್ದ ವ್ಯಕ್ತಿಯ ನಂಬರ್‌ಗೆ ಆಟೋ ಡ್ರೈವರ್‌ಗಳು ಕರೆ ಮಾಡಿ, ನಾವು ಲೊಕೇಶನ್ ತಲುಪಿದ್ದೇವೆ ಎಂದು ತಿಳಿಸಿದಾಗ ಆ ಕಡೆಯಿಂದ ಬಂದ ಧ್ವನಿ ಎಲ್ಲರಿಗೂ ಆಘಾತ ತಂದಿತು. ಒಂದೇ ನಂಬರ್‌ನಿಂದ (8861859081) ಪದೇ ಪದೇ ಕರೆ ಮಾಡುತ್ತಿದ್ದ ಅನಾಮಿಕ ವ್ಯಕ್ತಿ ತಾನು “ಧನ್ವೀರ್ ಮ್ಯಾನೇಜರ್” ಎಂದು ಪರಿಚಯಿಸಿಕೊಂಡಿದ್ದಾನೆ.

ಆಟೋ ಡ್ರೈವರ್‌ಗಳು ದರ್ಶನ್‌ ಮನೆ ಸೆಕ್ಯೂರಿಟಿ ಸಿಬ್ಬಂದಿಗೆ ಫೋನ್ ಕೊಟ್ಟಾಗ ಅವಾಚ್ಯ ಶಬ್ದಗಳಿಂದ ಬೈದು ಅವಾಜ್ ಹಾಕಿದ್ದಾನೆ. "ಕೇಸ್ ವಾಪಸ್ ತಗೊಂಡಿಲ್ಲ ಅಂದ್ರೆ ನಿನ್ನ ಸುಮ್ಮನೆ ಬಿಡೋದಿಲ್ಲ, ಸಾಯಿಸುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಧಮ್ ಇದ್ದರೆ ಧನ್ವೀರ್ ಅನ್ನು ಬಂದು ಮೀಟ್ ಮಾಡುವಂತೆ ದರ್ಶನ್ ಮ್ಯಾನೇಜರ್‌ಗೆ ಸವಾಲು ಹಾಕಿದ್ದಾನೆ. ಜೊತೆಗೆ ದರ್ಶನ್ ಮನೆಯನ್ನೇ ಹೊಡೆದು ಬೀಳಿಸುವುದಾಗಿ, ವಿಜಯಲಕ್ಷ್ಮಿ ಅವರನ್ನೂ ಬಿಡುವುದಿಲ್ಲ ಎಂದು ಆ ಅನಾಮಿಕ ವ್ಯಕ್ತಿ ಧಮ್ಕಿ ಹಾಕಿರುವ ಆಡಿಯೋ ತುಣುಕುಗಳು ಸದ್ಯ ವೈರಲ್ ಆಗಿವೆ.  

ಧನ್ವೀರ್‌-ವಿಜಯಲಕ್ಷ್ಮಿ ಪ್ರಕರಣದ ಹಿನ್ನೆಲೆ  
ರೇಣುಕಾಸ್ವಾಮಿ ಪ್ರಕರಣದ ನಂತರ ದರ್ಶನ್ ಕಾನೂನು ಹೋರಾಟ ಎದುರಿಸುತ್ತಿರುವ ಸಂದರ್ಭದಲ್ಲಿ, ದರ್ಶನ್ ಪರಿವಾರ ಹಾಗೂ ನಟ ಧನ್ವೀರ್ ನಡುವಿನ ಒಡನಾಟದಲ್ಲಿ ಬಿರುಕು ಮೂಡಲು ಆರಂಭವಾಯಿತು.    
ವಿಜಯಲಕ್ಷ್ಮಿ ದರ್ಶನ್ ಅವರ ಮ್ಯಾನೇಜರ್ ನಾಗರಾಜ್ ಅವರು, ನಟ ಧನ್ವೀರ್ ತಮ್ಮೊಂದಿಗೆ ಫೋನ್‌ನಲ್ಲಿ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.   

ಇದರ ಬೆನ್ನಲ್ಲೇ, ಧನ್ವೀರ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ವಿಜಯಲಕ್ಷ್ಮಿ ಮತ್ತು ಅವರ ತಂಡದವರು ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿ, ಧನ್ವೀರ್ ತಂದೆ ತಿಮ್ಮೇಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.

ನ್ಯಾಯಾಲಯದ ಮೆಟ್ಟಿಲೇರಿದ ವಿವಾದ
ಧನ್ವೀರ್ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳು ಹಾಗೂ ಸಂದೇಶಗಳ ಮೂಲಕ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು (Defamation Case) ದಾಖಲಿಸಿ ಕಾನೂನು ಹೋರಾಟವನ್ನು ಮುಂದುವರೆಸಿದ್ದಾರೆ.  

ಒಟ್ಟಿನಲ್ಲಿ, ದರ್ಶನ್ ಅನುಪಸ್ಥಿತಿಯಲ್ಲಿ ಅವರ ಕುಟುಂಬ ಮತ್ತು ಧನ್ವೀರ್ ಬಣದ ನಡುವೆ ಆರಂಭವಾದ ಈ ತಿಕ್ಕಾಟವು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನ ಈ ವಿಚಾರ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.. ಅಲ್ಲದೆ, ಈ ವಿಚಾರವಾಗಿ ರಾಜರಾಜೇಶ್ವರಿ ನಗರ ಪೊಲೀಸರ ಗಮನಕ್ಕೂ ತರಲಾಗಿದ್ದು, ತನಿಖೆ ಮುಂದುವರೆದಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES