Manish nagadev divorce: ಮನರಂಜನಾ ಲೋಕದಲ್ಲಿ ಮತ್ತೊಂದು ದಾಂಪತ್ಯ ಜೀವನ ಅಂತ್ಯಗೊಂಡಿದೆ. ಹಿಂದಿ ಕಿರುತೆರೆಯ ಜನಪ್ರಿಯ ನಟ ಮನೀಶ್ ನಾಗದೇವ್ ಮತ್ತು ಅವರ ಪತ್ನಿ ಮಲಿಕಾ ಜುನೇಜಾ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ವಿಶೇಷ ಅಂದ್ರೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಬರೋಬ್ಬರಿ ಆರು ತಿಂಗಳ ಕಾಲ ಈ ದಂಪತಿ ಪರಸ್ಪರ ಮಾತನಾಡಿರಲಿಲ್ಲವಂತೆ. ಸಂಬಂಧ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರೂ ಪ್ರತ್ಯೇಕವಾಗುವ ನಿರ್ಧಾರ ಕೈಗೊಂಡಿದ್ದಾರೆ. ಅಷ್ಟಕ್ಕೂ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದೇಕೆ? ನಟ ಹೇಳಿದ್ದೇನು? ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಮನರಂಜನಾ ಲೋಕದಲ್ಲಿ ಪ್ರೀತಿ, ಮದುವೆ, ವಿಚ್ಛೇದನದ ಸುದ್ದಿಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಹಿಂದಿ ಕಿರುತೆರೆಯ ಮತ್ತೊಂದು ಜೋಡಿಯ ದಾಂಪತ್ಯ ಜೀವನ ಅಂತ್ಯಗೊಂಡಿರುವ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಜನಪ್ರಿಯ ನಟ ಮನೀಶ್ ನಾಗದೇವ್ ಮತ್ತು ಅವರ ಪತ್ನಿ ಮಲಿಕಾ ಜುನೇಜಾ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
2022ರಲ್ಲಿ ಹಸೆಮಣೆ ಏರಿದ್ದ ಜೋಡಿ!
ಮನೀಶ್ ನಾಗದೇವ್ ಮತ್ತು ಮಲಿಕಾ ಜುನೇಜಾ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಲಿಕಾ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಸುಂದರವಾಗಿ ಸಾಗುತ್ತಿದ್ದ ಇವರ ದಾಂಪತ್ಯದಲ್ಲಿ ದಿನಕಳೆದಂತೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ಸುಮಾರು ನಾಲ್ಕು ವರ್ಷಗಳ ದಾಂಪತ್ಯದ ಬಳಿಕ ಇದೀಗ ಇಬ್ಬರೂ ಬೇರೆಯಾಗಿದ್ದಾರೆ ಎನ್ನಲಾಗಿದೆ.
6 ತಿಂಗಳು ಒಂದೇ ಮನೆಯಲ್ಲಿ ಮೌನ!
ಈ ಜೋಡಿಯ ಸಂಬಂಧದಲ್ಲಿ ಬಿರುಕು ಮೂಡಿದ್ದರ ಬಗ್ಗೆ ಕೇಳಿಬಂದಿರುವ ವಿಚಾರವೇ ಅಚ್ಚರಿ ಮೂಡಿಸಿದೆ. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಬರೋಬ್ಬರಿ ಆರು ತಿಂಗಳ ಕಾಲ ಇಬ್ಬರೂ ಪರಸ್ಪರ ಮಾತನಾಡುತ್ತಿರಲಿಲ್ಲವಂತೆ. ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದವು. ಹೀಗಾಗಿ ದೈಹಿಕವಾಗಿ ಒಂದೇ ಸೂರಿನಡಿ ಇದ್ದರೂ ಮಾನಸಿಕವಾಗಿ ದೂರವಾಗಿದ್ದರು ಎನ್ನಲಾಗಿದೆ.
ವಿಚ್ಛೇದನದ ಬಗ್ಗೆ ನಟ ಹೇಳಿದ್ದೇನು?
ತಮ್ಮ ದಾಂಪತ್ಯದ ಅಂತ್ಯದ ಕುರಿತು ಮಾತನಾಡಿರುವ ಮನೀಶ್, ಇಬ್ಬರು ವ್ಯಕ್ತಿಗಳು ವೈಯಕ್ತಿಕವಾಗಿ ಒಳ್ಳೆಯವರಾಗಿದ್ದರೂ ಜೀವನ ಸಂಗಾತಿಗಳಾಗಿ ಹೊಂದಾಣಿಕೆಯಾಗದೇ ಇರಬಹುದು ಎಂದಿದ್ದಾರೆ. ಸಂಬಂಧವನ್ನು ಉಳಿಸಿಕೊಳ್ಳಲು ತಾವು ಮತ್ತು ಮಲಿಕಾ ಸಾಕಷ್ಟು ಪ್ರಯತ್ನಿಸಿದ್ದರೂ, ಪರಸ್ಪರ ಸೂಕ್ತ ಜೀವನ ಸಂಗಾತಿಗಳಲ್ಲ ಎಂಬ ಅರಿವು ಮೂಡಿತು ಎಂದು ತಿಳಿಸಿದ್ದಾರೆ.ಇದು ಯಾವುದೇ ಕೋಪ, ಹಠ ಅಥವಾ ಆತುರದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. ಸಾಕಷ್ಟು ಸಮಯ ಯೋಚಿಸಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಬಳಿಕ ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ ಎಂದು ಮನೀಶ್ ಹೇಳಿದ್ದಾರೆ. ಈ ಅವಧಿಯಲ್ಲಿ ಅಗತ್ಯ ಕಾನೂನು ವಿಚಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಮಾತುಕತೆ ಇರಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ವಿಚ್ಛೇದನದ ನಿರ್ಧಾರ ತಿಳಿಸಿದಾಗ ಎರಡೂ ಕುಟುಂಬಗಳು ಆರಂಭದಲ್ಲಿ ಆಘಾತಕ್ಕೊಳಗಾಗಿದ್ದವಂತೆ. ಆದರೂ ಕಷ್ಟದ ಸಮಯದಲ್ಲಿ ಕುಟುಂಬಗಳು ಬೆಂಬಲವಾಗಿ ನಿಂತಿದ್ದವು ಎಂದು ನಟ ಹೇಳಿದ್ದಾರೆ. ಸಂಬಂಧ ಮುಗಿದರೂ ಎರಡೂ ಕುಟುಂಬಗಳ ನಡುವಿನ ಬಾಂಧವ್ಯ ಮುಂದುವರಿಯಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಕಿರುತೆರೆಯ ಜನಪ್ರಿಯ ನಟ!
ಮನೀಶ್ ನಾಗದೇವ್ ಬನ್ನು ಮೈನ್ ತೇರಿ ದುಲ್ಹನ್, ಪವಿತ್ರ ರಿಶ್ತಾ, ಬೆಗುಸರೈ, ಉಡಾನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅನುಪಮಾ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಹಲವು ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಟನ ನಿಜಜೀವನದ ದಾಂಪತ್ಯ ಇದೀಗ ಅಂತ್ಯಗೊಂಡಿರುವ ಸುದ್ದಿ ಕಿರುತೆರೆ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.