Soundarya Shetty talks about Ganavi Gowda relationship in bbk13 : ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ, ವಾಗ್ವಾದ ಹಾಗೂ ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಈ ವಾರ ಯುವರಾಣಿಯರ ನಡುವಿನ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಗಾನವಿ ಗೌಡ ಮತ್ತು ಸೌಂದರ್ಯಾ ಶೆಟ್ಟಿ ನಡುವೆ ನಡೆದ ಮಾತಿನ ಚಕಮಕಿ ಮನೆಯ ವಾತಾವರಣವನ್ನೇ ಕಾವೇರಿಸಿದೆ.
ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆಯೇ ಈ ಜಗಳಕ್ಕೆ ಪ್ರಮುಖ ಕಾರಣವಾಗಿದೆ. ಆಸಿಯಾ ಫಿರ್ದೋಸ್ ಮತ್ತು ಗಾನವಿ ಒಟ್ಟಾಗಿ ಆಟವಾಡಿ ಸೌಂದರ್ಯಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಸೌಂದರ್ಯಾ ಮತ್ತು ಗಾನವಿ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಆರಂಭದಲ್ಲಿ ಆಟದ ತಂತ್ರಗಾರಿಕೆ ಹಾಗೂ ನಾಮಿನೇಷನ್ ವಿಚಾರಕ್ಕೆ ಸೀಮಿತವಾಗಿದ್ದ ಜಗಳ ನಂತರ ವೈಯಕ್ತಿಕ ಮಟ್ಟಕ್ಕೆ ತಲುಪಿದೆ.
ವಾದದ ನಡುವೆ ಗಾನವಿ, ಸೌಂದರ್ಯಾ ಅವರ ಕನ್ನಡ ಮಾತನಾಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮೊದಲು ಸರಿಯಾಗಿ ಕನ್ನಡ ಮಾತನಾಡುವುದನ್ನು ಕಲಿತುಕೋ ಎಂದು ಗಾನವಿ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ‘ಮೊದಲು ನೆಟ್ಟಗೆ ಕನ್ನಡ ಮಾತಾಡು, ದುಬೈಗೆ ಕಳಿಸಿಬಿಡ್ತೀನಿ’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಗಾನವಿ ಅವರ ಈ ಮಾತು ಸೌಂದರ್ಯಾ ಅವರನ್ನು ಮತ್ತಷ್ಟು ಕೆರಳಿಸಿದೆ.
8 ವರ್ಷಗಳ ರಿಲೇಶನ್‌ಶಿಪ್ ವಿಚಾರ ಪ್ರಸ್ತಾಪಿಸಿದ ಸೌಂದರ್ಯಾ!
ಗಾನವಿ ಮಾತಿಗೆ ಸುಮ್ಮನಿರದ ಸೌಂದರ್ಯಾ ಕೂಡ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಗಾನವಿ ಅವರ ವೈಯಕ್ತಿಕ ಜೀವನದ ವಿಚಾರವನ್ನು ಪ್ರಸ್ತಾಪಿಸಿ, ಎಂಟು ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದುಕೊಂಡು ಬಿಗ್ ಬಾಸ್ ಮನೆಯಲ್ಲಿ ಇಂತಹ ವರ್ತನೆ ತೋರುತ್ತಿದ್ದೀಯಾ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ. ‘8 ವರ್ಷಗಳ ರಿಲೇಶನ್‌ಶಿಪ್ ಇಟ್ಟುಕೊಂಡು ಇಲ್ಲಿ ಬಂದು ಗುಳುಗುಳು ಮಾಡ್ತೀಯಾ?’ ಎಂಬ ಸೌಂದರ್ಯಾ ಅವರ ಮಾತು ಇದೀಗ ಚರ್ಚೆಗೆ ಕಾರಣವಾಗಿದೆ. ಇಬ್ಬರ ನಡುವಿನ ಜಗಳ ಕೇವಲ ನಾಮಿನೇಷನ್‌ಗೆ ಸಂಬಂಧಿಸಿದ ವಾಗ್ವಾದವಾಗಿ ಉಳಿಯದೆ, ಪರಸ್ಪರರ ವೈಯಕ್ತಿಕ ಬದುಕಿನ ವಿಚಾರಗಳವರೆಗೂ ತಲುಪಿದೆ. ಈ ಬೆಳವಣಿಗೆಯಿಂದ ಬಿಗ್ ಬಾಸ್ ಮನೆಯೊಳಗಿನ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಆಟದ ತಂತ್ರಗಾರಿಕೆ, ನಾಮಿನೇಷನ್ ಮತ್ತು ಮೈತ್ರಿಗಳ ವಿಚಾರವಾಗಿ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಾಮಾನ್ಯ. ಆದರೆ ಈ ಬಾರಿ ಭಾಷೆಯ ವಿಚಾರದಿಂದ ಆರಂಭವಾದ ಜಗಳ ವೈಯಕ್ತಿಕ ಸಂಬಂಧದ ಚರ್ಚೆಯವರೆಗೂ ತಲುಪಿರುವುದು ಗಮನ ಸೆಳೆದಿದೆ. ಒಂದೆಡೆ ಗಾನವಿ ಅವರ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಸೌಂದರ್ಯಾ ವೈಯಕ್ತಿಕ ಜೀವನವನ್ನು ಜಗಳಕ್ಕೆ ಎಳೆದು ತಂದಿರುವುದು ಸರಿಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಈ ಜಗಳಕ್ಕೆ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ? ಇಬ್ಬರಿಗೂ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿದೆ.