Bigg Boss Manja : ಬಿಗ್ ಬಾಸ್ ಮನೆಗೆ ಮಾಡರ್ನ್ ಕವಿ ಮಂಜ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಕಾಲಿಡುವ ಮುನ್ನವೇ ಸ್ಪರ್ಧಿಗಳ ಬಗ್ಗೆ ಆಡಿರುವ ಮಾತುಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬುದರ ಸುಳಿವು ಸಿಕ್ಕಿದೆ.
ಹೌದು.. ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ದೊಡ್ಮನೆಗೆ ಮಂಜು ವಾಪಸ್ ಹೋಗಿದ್ದಾರೆ. "ಸಿಹಿ ಜೊತೆಗೆ ಖಾರ ಕಳಿಸುತ್ತಿದ್ದೇವೆ" ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಭಾನುವಾರದ ಸಂಚಿಕೆಯಲ್ಲಿ ಹೇಳುವ ಮೂಲಕ ಮಂಜನ ಎಂಟ್ರಿಗೆ ವೇದಿಕೆ ಸಿದ್ಧಪಡಿಸಿದ್ದರು. ಮನೆಯೊಳಗೆ ಹೋಗುವ ಮುನ್ನವೇ ಮಾರ್ಡ್ರನ್ ಕವಿ ಎಲ್ಲಾ ಸ್ಪರ್ಧಿಗಳ ಮುಖವಾಡ ಕಳಚುವ ಕೆಲಸ ಮಾಡಿದ್ದಾರೆ. ಈ ಬಾರಿ ಕಪ್ ಗೆಲ್ಲುವುದೇ ನನ್ನ ಏಕೈಕ ಗುರಿ ಎಂದು ಹೇಳಿಕೊಂಡಿರುವ ಅವರು, ಯಾರಿಗೂ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಅಷ್ಟೇ ಅಲ್ಲದೆ, ಮನೆ ಒಳಗೆ ಹೋಗುತ್ತಿದ್ದಂತೆ ಇಡೀ ಮನೆಗೆ ದೊಡ್ಡ ಶಾಕ್ ಕಾದಿದೆ ಎಂದು ಸವಾಲು ಹಾಕಿದ್ದಾರೆ. ಈ ಬಾರಿ ಸಿಕ್ಕಿರುವ ಅವಕಾಶವನ್ನು ಕೇವಲ ಸ್ನೇಹಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನರಿಗೆ ಮನರಂಜನೆ ನೀಡುವುದು ಹಾಗೂ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಆಡುವುದು ಮಾತ್ರ ನನ್ನ ಏಕೈಕ ಉದ್ದೇಶ ಎಂದಿರುವ ಕವಿ, ತನ್ನ ದಾರಿಗೆ ಅಡ್ಡ ಬಂದವರ ಜತೆ ನೇರವಾಗಿ ಜಗಳವಾಡಲು ಹಿಂದೆಮುಂದೆ ನೋಡುವುದಿಲ್ಲ ಎಂದಿದ್ದಾರೆ.
ಸ್ಪರ್ಧಿಗಳ ಬಗ್ಗೆ ಮಾತನಾಡುವಾಗ ಮಂಜು ಯಾರನ್ನೂ ಬಿಟ್ಟಿಲ್ಲ. ತಾಂಡವ್ ರಾಮ್ ಹೆಸರಿನಲ್ಲಿ ಮಾತ್ರ ತಾಂಡವ ಇದೆ ಹೊರತು ಆಟದಲ್ಲಿ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಸೌಂದರ್ಯ ಶೆಟ್ಟಿ ಆಟದ ಹೆಸರಿನಲ್ಲಿ ದೋಖಾ ಮಾಡುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಪ್ರಶಾಂತ್ ಅವರ ಬಗ್ಗೆ ಮಾತನಾಡಿ, ಅವರು ಪ್ರಶಾಂತವಾಗಿದ್ದರೂ ಅವರಿವರ ಬಕೆಟ್ ಹಿಡಿದುಕೊಂಡು ಆಡುತ್ತಿದ್ದಾರೆ. ಇದು ಅವರ ಹೆಸರಿಗೇ ಕಳಂಕ ತರುತ್ತಿದೆ ಎಂದು ಟೀಕಿಸಿದ್ದಾರೆ. ಗಗನ ಹೆಸರಿಗೆ ತಕ್ಕಂತೆ ಇದ್ದರೂ ಆಟದಲ್ಲಿ ಎಲ್ಲೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಕಿರಣ್ ಶಾಸ್ತ್ರಿ ಅವರನ್ನು 'ಕಳ್ಳ ಶಾಸ್ತ್ರಿ ಮಳ್ಳ ಶಾಸ್ತ್ರಿ' ಎಂದು ತರಾಟೆಗೆ ತೆಗೆದುಕೊಂಡಿದ್ದರೆ, ಯಶಸ್ ಹಿಂದೆ ಒಂದು ಮಾತು ಮುಂದೆ ಒಂದು ಮಾತು ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಮಾಡರ್ನ್ ಕವಿ ಮಂಜು ಈ ಬಾರಿ ಬರಿಗೈಲಿ ಬಂದಿಲ್ಲ, ಬದಲಿಗೆ ಪಕ್ಕಾ ರಣತಂತ್ರದೊಂದಿಗೆ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರ ಈ ನೇರ ಮಾತುಗಳು ಮತ್ತು ಟೀಕೆಗಳು ಮನೆಯೊಳಗೆ ಯಾವ ರೀತಿಯ ಬಿರುಗಾಳಿ ಎಬ್ಬಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ. ಮನೆಯ ಇತರ ಸ್ಪರ್ಧಿಗಳು ಮಂಜ್ಯಾ ಅವರ ಈ ದಾಳಿಯನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.