ಕನ್ನಡ ಚಿತ್ರರಂಗಕ್ಕೆ ಶಾಕ್.. ‘ಎ’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!
ಕನ್ನಡದ ಆಲ್-ಟೈಮ್ ಹಿಟ್ 'ಎ' ಸಿನಿಮಾದ ಮೂಲಕ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ 'ಸಿಲ್ಕ್ ಮಂಜು' ಎಂದೇ ಖ್ಯಾತರಾದ ಬಿ.ಜಿ. ಮಂಜುನಾಥ್ (65) ವಿಧಿವಶರಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ಅಕ್ಟೋಬರ್ 26) ಕೊನೆಯುಸಿರೆಳೆದಿದ್ದಾರೆ.
A Manju Passed away : ನಟ ಹಾಗೂ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಸೂಪರ್‌ಹಿಟ್ 'ಎ' ಸಿನಿಮಾದ ನಿರ್ಮಾಪಕ ಸಿಲ್ಕ್ ಮಂಜು ಎಂದೇ ಖ್ಯಾತರಾಗಿದ್ದ ಬಿ.ಜಿ. ಮಂಜುನಾಥ್ ಅವರು ಇಹಲೋಕ ತ್ಯಜಿಸಿದ್ದಾರೆ. ತಮ್ಮ 65 ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಅಕ್ಟೋಬರ್ 26 ರಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
'ಸಿಲ್ಕ್ ಮಂಜು'
ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿದ ಚೊಚ್ಚಲ ಸಿನಿಮಾ 'ಎ' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬಿ.ಜಿ. ಮಂಜುನಾಥ್, ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಯಶಸ್ಸು ಕಂಡರು. ಆ ನಂತರ ಅವರನ್ನು ಚಿತ್ರರಂಗದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ 'ಸಿಲ್ಕ್ ಮಂಜು' ಎಂದೇ ಕರೆಯಲಾರಂಭಿಸಿದರು. 'ಎ' ಮಾತ್ರವಲ್ಲದೆ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಪ್ರತ್ಯರ್ಥ’, ‘ಸೂರ್ಯಕಾಂತಿ’, ‘ಹಗಲು ವೇಷ’, ‘ಸೈಕಿಕ್’ ಮತ್ತು ‘ಟೆರರ್’ ಸೇರಿದಂತೆ ಹಲವು ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಸಾಲದ ಸುಳಿಗೆ ಸಿಲುಕಿದ ನಿರ್ಮಾಪಕ
ಅವರು ಕೊನೆಯದಾಗಿ ನಿರ್ಮಾಣ ಮಾಡಿದ್ದ ‘ಟೆರರ್’ ಸಿನಿಮಾ ಅವರಿಗೆ ದೊಡ್ಡ ಆಘಾತ ನೀಡಿತ್ತು. ಈ ಚಿತ್ರಕ್ಕಾಗಿ ಸುಮಾರು 8 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಖರ್ಚು ಮಾಡಲಾಗಿತ್ತು. ಇದರಲ್ಲಿ 2 ರಿಂದ 3 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮಾಡಿದ್ದಲ್ಲದೆ, ತಮ್ಮ ಸ್ವಂತ ಮನೆಯನ್ನೇ ಅಡವಿಟ್ಟಿದ್ದರು ಎಂದು ಅವರ ಸೊಸೆ ಆಶಾ ಇತ್ತೀಚೆಗೆ ಖಾಸಗಿ ವಾಹನಿಯೊಂದರ ಸಂದರ್ಶನದಲ್ಲಿ ಕಣ್ಣೀರಿಡುತ್ತಾ ಹೇಳಿಕೊಂಡಿದ್ದರು. ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ ಒಂದೇ ಒಂದು ರೂಪಾಯಿ ಕೂಡ ವಾಪಸ್ ಬಾರದೆ ಚಿತ್ರ ಸಂಪೂರ್ಣವಾಗಿ ಸೋತಿತು. ಈ ಅನಿರೀಕ್ಷಿತ ಸೋಲು ಮತ್ತು ತಲೆಮೇಲೆ ಬಂದ ಬೃಹತ್ ಸಾಲದ ಹೊರೆ ಸಿಲ್ಕ್ ಮಂಜು ಅವರ ಮನಸ್ಸಿಗೆ ತೀವ್ರವಾಗಿ ಘಾಸಿ ಮಾಡಿತ್ತು.
ಆರೋಗ್ಯ ಹದಗೆಡಲು ಅದೇ ಕಾರಣವಾಯಿತೇ?
ಸಿನಿಮಾ ಸೋತು, ಸಾಲದ ಸುಳಿಗೆ ಸಿಲುಕಿದ ನಂತರ ಮಂಜುನಾಥ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದೇ ಚಿಂತೆಯಲ್ಲಿ ಅವರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯರು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಅಂದರೆ ಮರುಜೋಡಣೆ ಕೂಡ ಮಾಡಿದ್ದರು. ಆದರೆ, ಮನಸ್ಸಿನಲ್ಲಿ ಕೊರೆಯುತ್ತಿದ್ದ ಸಾಲದ ಚಿಂತೆ ಹಾಗೂ ನೋವು ಗುಣಮುಖರಾಗಲು ಬಿಡಲಿಲ್ಲ. ಆಸ್ಪತ್ರೆಯ ಖರ್ಚು ಭರಿಸಲು ಕೂಡ ಕುಟುಂಬವು ಪರದಾಡುವಂತಾಯಿತು. ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬವು ಸಹಾಯಕ್ಕಾಗಿ ಕೈಯೊಡ್ಡಿದರೂ ಯಾವುದೇ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ.
ಕುಟುಂಬಕ್ಕೆ ಎದುರಾದ ಕಷ್ಟದ ದಿನಗಳು
ಮೃತರ ಕುಟುಂಬಕ್ಕೆ ಈಗ ಬರಸಿಡುಲು ಅಪ್ಪಳಿಸಿದಂತಾಗಿದೆ. ಮಂಜುನಾಥ್ ಅವರು ಇಬ್ಬರು ಮಕ್ಕಳು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಿಶೇಷವಾಗಿ, ಅವರ ಸೊಸೆ ಆಶಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದು, ಮನೆಯೊಡೆಯನನ್ನು ಕಳೆದುಕೊಂಡ ಆ ಕುಟುಂಬದ ಸ್ಥಿತಿ ನೋಡುಗರ ಕರುಳು ಚುರುಕಿಸುವಂತಿದೆ.
ಇಂದೇ ಅಂತ್ಯಸಂಸ್ಕಾರ
ಕಳೆದ ಹಲವು ತಿಂಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಸಿಲ್ಕ್ ಮಂಜು ಅವರು ಅಕ್ಟೋಬರ್ 26 ರಂದು ಸೋಮವಾರದಂದು ಕೊನೆಯುಸಿರೆಳೆದಿದ್ದು, ಇಂದು ಅಕ್ಟೋಬರ್ 27 ರಂದು ಬೆಂಗಳೂರಿನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಹಿಟ್ ಸಿನಿಮಾಗಳನ್ನು ನೀಡಿದ ಓರ್ವ ಸರಳ ನಿರ್ಮಾಪಕನೊಬ್ಬ ಇಂತಹ ದಯನೀಯ ಪರಿಸ್ಥಿತಿಯಲ್ಲಿ ಕೊನೆಯುಸಿರೆಳೆದಿರುವುದು ಇಡೀ ಸ್ಯಾಂಡ್‌ವುಡ್‌ಗೆ ಹಾಗೂ ಕಲಾಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.