ನಟ ದರ್ಶನ್‌ಗೆ ಸಿಗಲಿದೆಯಾ ಡಬಲ್ ರಿಲೀಫ್? ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗಳ ಯೂಟರ್ನ್, ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಲು ಅರ್ಜಿ!
ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ನರೇಂದ್ರ ಸಿಂಗ್‌ನನ್ನ ಪ್ರಶ್ನಿಸಿದಾಗ, ಶೆಡ್‌ನಲ್ಲಿ ನಡೆದ ಘಟನೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳಿದ್ದಾರೆ. ಪ್ರಕರಣದ ಆರೋಪಿಗಳನ್ನ ತಾವು ನೋಡಿಲ್ಲವೆಂದೂ ತಿಳಿಸಿದ್ದಾರೆ.
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ನಡುವೆ ಎರಡು ಮಹತ್ವದ ಬೆಳವಣಿಗೆಗಳು ಎದುರಾಗಿವೆ. ಒಂದೆಡೆ ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಮತ್ತೊಂದೆಡೆ ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಎರಡೂ ಬೆಳವಣಿಗೆಗಳು ಪ್ರಕರಣದ ಮುಂದಿನ ವಿಚಾರಣೆಯ ಮೇಲೆ ಕುತೂಹಲ ಮೂಡಿಸಿವೆ.
ಪ್ರತ್ಯಕ್ಷ ಸಾಕ್ಷಿಗಳಿಂದ ಪ್ರಾಸಿಕ್ಯೂಷನ್‌ಗೆ ಹಿನ್ನಡೆ?
ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ಪ್ರಾಸಿಕ್ಯೂಷನ್‌ಗೆ ಸವಾಲಾಗಿ ಪರಿಣಮಿಸಿವೆ. ಈ ಹಿಂದೆ ಪ್ರತ್ಯಕ್ಷ ಸಾಕ್ಷಿ ಪುನೀತ್ ನ್ಯಾಯಾಲಯದಲ್ಲಿ ತಮಗೆ ಪ್ರಕರಣದ ಬಗ್ಗೆ ಏನೂ ತಿಳಿದಿಲ್ಲವೆಂದು ಹೇಳಿ ಪ್ರತಿಕೂಲ ಸಾಕ್ಷಿಯಾಗಿದ್ದರು. ಇದೀಗ ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ ಗಾರ್ಡ್‌ಗಳಾದ ನರೇಂದ್ರ ಸಿಂಗ್ ಮತ್ತು ಕಿರಣ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ನರೇಂದ್ರ ಸಿಂಗ್‌ನನ್ನ ಪ್ರಶ್ನಿಸಿದಾಗ, ಶೆಡ್‌ನಲ್ಲಿ ನಡೆದ ಘಟನೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳಿದ್ದಾರೆ. ಪ್ರಕರಣದ ಆರೋಪಿಗಳನ್ನ ತಾವು ನೋಡಿಲ್ಲವೆಂದೂ ತಿಳಿಸಿದ್ದಾರೆ. ವಿನಯ್ ಪರಿಚಯವಿದ್ದು, ಅವರ ಬಳಿ ಕೆಂಪು ಬಣ್ಣದ ಕಾರು ಇದೆ ಎಂಬುದು ಗೊತ್ತಿದೆ. ಆದರೆ ಕೊ*ಲೆ ನಡೆದ ದಿನ ಆ ಕಾರು ಶೆಡ್‌ಗೆ ಬಂದಿತ್ತೇ ಎಂಬುದು ನೆನಪಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
'ಆ ದಿನ ಶೆಡ್‌ನಲ್ಲಿ ಏನೂ ನಡೆದಿಲ್ಲ' ಎಂದ ಕಿರಣ್
ಮತ್ತೊಬ್ಬ ಸಾಕ್ಷಿ ಕಿರಣ್ ಕೂಡ ನ್ಯಾಯಾಲಯದಲ್ಲಿ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. 2024ರ ಜೂನ್ 8ರಂದು ಪಟ್ಟಣಗೆರೆ ಶೆಡ್‌ನಲ್ಲಿ ಯಾವುದೇ ಘಟನೆ ನಡೆದಿಲ್ಲವೆಂದು ಆತ ಹೇಳಿದ್ದಾನೆ. ಅಂದು ಎಂದಿನಂತೆ ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಹಾಜರಾಗಿ ಸಂಜೆ 6 ಗಂಟೆಗೆ ಮನೆಗೆ ತೆರಳಿದ್ದಾಗಿ ತಿಳಿಸಿದ್ದಾನೆ. ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದ ಆರೋಪಿಗಳನ್ನ ಗುರುತಿಸಲು ಸಾಧ್ಯವಿಲ್ಲವೆಂದಿರುವ ಕಿರಣ್, ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ 164ರ ಹೇಳಿಕೆಯಲ್ಲಿ ಏನು ಹೇಳಿದ್ದೆ ಎಂಬುದೂ ಸರಿಯಾಗಿ ನೆನಪಿಲ್ಲವೆಂದು ತಿಳಿಸಿದ್ದಾನೆ. ಈ ಮೂಲಕ ಪ್ರಕರಣದ ವಿಚಾರಣೆಯಲ್ಲಿ ಮತ್ತೊಬ್ಬ ಪ್ರಮುಖ ಸಾಕ್ಷಿ ಪ್ರತಿಕೂಲ ಸಾಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಸಾಕ್ಷಿಗಳ ಪಾಟಿ ಸವಾಲಿಗೆ ಕಾಲಾವಕಾಶ ಕೋರಿದ ಎಸ್‌ಪಿಪಿ
ನರೇಂದ್ರ ಸಿಂಗ್ ಮತ್ತು ಕಿರಣ್ ಇಬ್ಬರೂ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹಿನ್ನೆಲೆಯಲ್ಲಿ, ಅವರನ್ನ ಪಾಟಿ ಸವಾಲಿಗೆ ಒಳಪಡಿಸಲು ಎಸ್‌ಪಿಪಿ ಪ್ರಸನ್ನ ಕುಮಾರ್ ಕಾಲಾವಕಾಶ ಕೇಳಿದ್ದಾರೆ. ನ್ಯಾಯಾಲಯ ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನ ನವೆಂಬರ್ 30ಕ್ಕೆ ಮುಂದೂಡಿದೆ. ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರತಿಕೂಲವಾಗಿ ಹೇಳಿಕೆ ನೀಡುತ್ತಿರುವುದು ದರ್ಶನ್ ಪರ ವಕೀಲರಿಗೆ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸಬಹುದು ಎಂಬ ಚರ್ಚೆ ನಡೆದಿದೆ. ಆದರೆ ಸಾಕ್ಷಿಗಳು ಉಲ್ಟಾ ಹೊಡೆದಿರುವುದರಿಂದ ಮಾತ್ರ ಪ್ರಕರಣದ ಅಂತಿಮ ತೀರ್ಪು ನಿರ್ಧಾರವಾಗುವುದಿಲ್ಲ. ಮುಂದಿನ ವಿಚಾರಣೆಯಲ್ಲಿ ಪಾಟಿ ಸವಾಲಿನ ವೇಳೆ ಯಾವ ವಿಚಾರಗಳು ಹೊರಬರುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಬೆನ್ನುನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಅರ್ಜಿ
ಇನ್ನೊಂದೆಡೆ ದರ್ಶನ್ ಅವರ ಆರೋಗ್ಯದ ವಿಚಾರವೂ ನ್ಯಾಯಾಲಯದ ಮುಂದೆ ಬಂದಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಇದುವರೆಗೆ ಕೇವಲ ಮೂರು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿದೆ. ಆದರೂ ಬೆನ್ನುನೋವು ಕಡಿಮೆಯಾಗಿಲ್ಲವೆಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಅರ್ಜಿಯನ್ನ ಪರಿಗಣಿಸಿದ ನ್ಯಾಯಾಲಯ, ಜೈಲಿನ ಹಿರಿಯ ವೈದ್ಯಾಧಿಕಾರಿಗಳಿಂದ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದೇ ವೇಳೆ ದರ್ಶನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೇಳಿದ್ದಾರೆ.
ನವೆಂಬರ್ 30ರ ವಿಚಾರಣೆಯತ್ತ ಎಲ್ಲರ ಗಮನ
ಒಂದೆಡೆ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಪ್ರಮುಖ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡುತ್ತಿರುವ ಬೆಳವಣಿಗೆ, ಮತ್ತೊಂದೆಡೆ ಬೆನ್ನುನೋವಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳಲು ದರ್ಶನ್ ಸಲ್ಲಿಸಿರುವ ಅರ್ಜಿ. ಈ ಎರಡು ವಿಚಾರಗಳೂ ಸದ್ಯ ನ್ಯಾಯಾಲಯದ ಮುಂದಿವೆ. ನವೆಂಬರ್ 30ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಸಾಕ್ಷಿಗಳ ಪಾಟಿ ಸವಾಲು ಯಾವ ತಿರುವು ಪಡೆಯಲಿದೆ? ದರ್ಶನ್ ಅವರ ಆರೋಗ್ಯ ತಪಾಸಣೆಯ ವರದಿ ಏನು ಹೇಳಲಿದೆ? ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನ್ಯಾಯಾಲಯ ಅನುಮತಿ ನೀಡಲಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸದ್ಯಕ್ಕೆ ದರ್ಶನ್‌ಗೆ ಯಾವುದೇ ಹೊಸ ಪರಿಹಾರ ಅಥವಾ ಬಿಡುಗಡೆ ದೊರೆತಿಲ್ಲ. ಮುಂದಿನ ನ್ಯಾಯಾಲಯದ ಆದೇಶದ ಬಳಿಕವೇ ಈ ಬೆಳವಣಿಗೆಗಳ ಸ್ಪಷ್ಟ ಚಿತ್ರಣ ಸಿಗಲಿದೆ.