ನಭಾ ನಟೇಶ್ ಜೊತೆ ಧ್ರುವ ಸರ್ಜಾ ಹೊಸ ಲವ್ ಸ್ಟೋರಿ.. ಫ್ಯಾಮಿಲಿ ಸೆಂಟಿಮೆಂಟ್ ಇರೋ ‘ಕೆಮಿಸ್ಟ್ರಿ’
ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರ; ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್ & ಫ್ಯಾಮಿಲಿ ಎಮೋಷನ್ಸ್ ಇರುವ ‘ಕೆಮಿಸ್ಟ್ರಿ’ ಚಿತ್ರ ಘೋಷಣೆ, ನಾಯಕಿಯಾಗಿ ನಭಾ ನಟೇಶ್!
Dhruva Sarja and Nabha Natesh to star in Chemistry movie: ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್‌ನಿಂದ ಹೊರ ಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಕ್ಕೆ ‘ಕೆಮಿಸ್ಟ್ರಿ’ ಎಂಬ ಆಕರ್ಷಕ ಶೀರ್ಷಿಕೆ ಇಡಲಾಗಿದೆ. ನಟಿ ನಭಾ ನಟೇಶ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ PMF ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಮಾಸ್ ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟ ಧ್ರುವ
ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್‌ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಚಿತ್ರದಲ್ಲಿ ಧ್ರುವ ಅವರ ರೊಮ್ಯಾನ್ಸ್, ಮಮತೆ ಹಾಗೂ ಭಾವನಾತ್ಮಕ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆ ಮಾಡಿದೆ. ಮಾಸ್ ಆಕ್ಷನ್ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಹೀರೋ ಆಗಿರುವ ಧ್ರುವ, ಈಗ ಕೌಟುಂಬಿಕ ಪ್ರೇಕ್ಷಕರು, ಮಹಿಳೆಯರು ಹಾಗೂ ಯುವ ಜೋಡಿಗಳ ಹೃದಯ ಗೆಲ್ಲಲು ಹೊರಟಿದ್ದಾರೆ.
ಕುಟುಂಬ ಸಮೇತ ಸಂಭ್ರಮಿಸುವ ಅದ್ಧೂರಿ ಸಿನಿಮಾ
ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಕನೆಕ್ಟ್ ಮಾಡಿಕೊಳ್ಳುವಂತಹ ಕೌಟುಂಬಿಕ ಬಾಂಧವ್ಯ ಮತ್ತು ಲವ್ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ. ಅಭಿಮಾನಿಗಳು ತಮ್ಮ ಇಡೀ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬಂದು ಆನಂದಿಸುವಂತಹ ಸಂಪೂರ್ಣ ಮನರಂಜನೆಯನ್ನು ಚಿತ್ರತಂಡ ಕಟ್ಟಿಕೊಡಲಿದೆ. ಧ್ರುವ ಸರ್ಜಾ ಅವರ ಭರ್ಜರಿ ಸ್ಟಾರ್‌ಡಮ್ ಜೊತೆಗೆ ಭಾವನೆಗಳು ಮೇಳೈಸಿದ ಈ ಸಿನಿಮಾ, ಅದ್ಧೂರಿ ಮೇಕಿಂಗ್ ಮೂಲಕ ತೆರೆಯ ಮೇಲೆ ಅರಳಲಿದೆ.
ಅನಿರೀಕ್ಷಿತ ಕಾಂಬಿನೇಷನ್; ಹೊಚ್ಚ ಹೊಸ ದೃಷ್ಟಿಕೋನ
ಸ್ಟಾರ್ ನಟ ಧ್ರುವ ಸರ್ಜಾ ಹಾಗೂ ಯುವ ಪ್ರತಿಭೆ ವಿಶಾಲ್ ಆತ್ರೇಯ ಅವರ ಜೋಡಿ ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ. ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್‌ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ಕನ್ನಡದ ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರೊಂದಿಗೆ ಕೈಜೋಡಿಸಿದೆ. ಈಗ ಧ್ರುವ ಸರ್ಜಾ ಜೊತೆ ದೊಡ್ಡ ಪ್ರಾಜೆಕ್ಟ್‌ಗೆ ಕೈಹಾಕಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರುವ ಹಾಗೂ ವಿಭಿನ್ನ ಕಥೆಗಳನ್ನು ಕನ್ನಡಿಗರಿಗೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಧ್ರುವ ಸರ್ಜಾ ಅವರ ವೃತ್ತಿಜೀವನದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಈ ಸಿನಿಮಾದ ಮೂಲಕ ಗೋಚರಿಸುತ್ತಿದೆ.
ಸ್ಯಾಂಡಲ್‌ವುಡ್‌ನ ಧ್ರುವ ಸರ್ಜಾ ಅವರು ಈಗಾಗಲೇ ಲವ್ ಸ್ಟೋರಿ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಯಶಸ್ಸು ಅನ್ನು ಕಂಡಿದ್ದಾರೆ. ಅವರು ಮಾಡಿದ ಲವ್ ಸಿನಿಮಾಗಳು ಬಿಗ್ ಹಿಟ್ ಕಂಡಿವೆ. ಭರ್ಜರಿ, ಅದ್ಧೂರಿ, ಬಹುದ್ದೂರು ಇವು ಎಲ್ಲ ಹಿಟ್ ಸಿನಿಮಾಗಳು ಆಗಿದ್ದು ಯಶಸ್ವಿ ಸಿನಿಮಾಗಳು ಆಗಿವೆ. ಈ ಸಿನಿಮಾಗಳಲ್ಲಿರುವಂತಹ ಡೈಲಾಗ್‌ಗಳು ಇಂದಿಗೂ ಕೂಡ ಯುವಕರ ಬಾಯಲ್ಲಿ ಬರುತ್ತಲೇ ಇರುತ್ತವೆ. ಲವ್ ಸ್ಟೋರಿ ಸಿನಿಮಾಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಧ್ರುವ ಸರ್ಜಾ ಅವರು ಅತ್ಯಂತ ಹೆಚ್ಚು ಖ್ಯಾತಿ ಗಳಿಸಿದ್ದು. ಅದೇ ಇಂದಿಗೂ ಮುಂದುವರೆಯುತ್ತದೆ. ಈಗ ಮತ್ತೆ ಲವ್ ಜಾನರ್‌ಗೆ ಧ್ರುವ ಸರ್ಜಾ ಅವರು ಹೋಗುತ್ತಿದ್ದರಿಂದ ಮತ್ತೊಂದು ಬಿಗ್ ಸಕ್ಸಸ್ ಅವರ ಬೆನ್ನಿಗೆ ಇದೆ ಎಂದು ಪಕ್ಕಾ ಹೇಳಬಹುದು.