ಬೈಕ್ ತೆಗೆಯುವ ವಿಚಾರಕ್ಕೆ ಗಲಾಟೆ : ಚಾಕು, ಡ್ರ್ಯಾಗರ್‌ನಿಂದ ಹ*ಲ್ಲೆ, ಆರೋಪಿಗಳಿಗಾಗಿ ಪೊಲೀಸ್ ಶೋಧ
ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗೌಡನಪಾಳ್ಯದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ತೆಗೆಯುವ ವಿಚಾರಕ್ಕೆ ಶುರುವಾದ ಸಣ್ಣ ಕಿರಿಕ್, ಎರಡು ಗುಂಪುಗಳ ನಡುವಿನ ಭೀಕರ ಬಡಿದಾಟಕ್ಕೆ ಕಾರಣವಾಗಿದೆ. ಚಾಕು, ಡ್ರ್ಯಾಗರ್, ಹೆಲ್ಮೆಟ್ ಮತ್ತು ಮದ್ಯದ ಬಾಟಲಿಗಳಿಂದ ನಡೆದ ಈ ಹಲ್ಲೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಘಟನೆಯ ಬಳಿಕ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಗಾಡಿಯನ್ನು ತೆಗೆಯುವ ವಿಚಾರಕ್ಕೆ ಶುರುವಾದ ಕಿರಿಕ್ ಎರಡು ಗುಂಪುಗಳ ನಡುವೆ ದೊಡ್ಡ ಬಡಿದಾಟಕ್ಕೆ ಕಾರಣವಾಗಿದೆ. ಚಾಕು,ಡ್ರಾಗರ್ ಬಾಟಲ್ ಗಳಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಎಸ್ಕೇಪ್ ಆಗಿರೋ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.
ಕೈಯಲ್ಲಿ ಚಾಕುವನ್ನು ಹಿಡಿದುಕೊಂಡು ಹೋರಾಡುತ್ತಿರುವ ಯುವಕ,ಹಲ್ಲೆಗೊಳಗಾಗಿ ಮಲಗಿರೋ ಗಾಯಾಳು, ರಾತ್ರಿ ಘಟನೆ ಬಗ್ಗೆ ಭಯದಿಂದ ಹೇಳುತ್ತಿರುವ ಕಲಾವಿದೆ ಸೌಮ್ಯ ಇದಕ್ಕೆಲ್ಲ ಕಾರಣವಾಗಿದ್ದು ತಡರಾತ್ರಿ ಸುಬ್ರಹ್ಮಣ್ಯ ಪುರದ ಚಿಕ್ಕಗೌಡನಪಾಳ್ಯದಲ್ಲಿ ನಡೆದ ಗಲಾಟೆ.
ರಾತ್ರಿ ಕಲಾವಿದೆ ಸೌಮ್ಯ ಅವರ ಮನೆಗೆ ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್ ಊಟಕ್ಕೆ ಬಂದಿದ್ದರು. ಊಟ ಮುಗಿಸಿ ವಾಪಸ್ ತೆರಳುವಾಗ ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಬೈಕ್ ನ್ನ ತೆಗೆಯುವಂತೆ ಧಮ್ಕಿ ಹಾಕಿದ್ದಾರೆ.ಆಗ ಆಟೋ, ಬೈಕ್ ನಲ್ಲಿದ್ದ ಆರೇಳು ಜನ ಯುವಕರ ಗ್ಯಾಂಗ್ ಏಕಾಏಕಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಕ್ಷಣ ಮನೆಯಿಂದ ಬಂದ ಸೌಮ್ಯ ಹಾಗೂ ಅವರ ಪತಿ ಭಾನುಪ್ರಕಾಶ್ ಜಗಳ ಬಿಡಿಸಲು ಮುಂದಾದಾಗ ಇಬರಿಗೂ ಕೂಡ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ಸೌಮ್ಯ ಅವರ ಸಹೋದರ ಮಾರ್ಟಿನ್‌ಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಲಾಗಿದೆ. ನಂತರ ಇದೇ ಮಾರ್ಟಿನ್ ಕೂಡ ಕೈಯಲ್ಲಿ ಚಾಕುವನ್ನು ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದಾನಂತೆ. ಘಟನೆಯಲ್ಲಿ ಸ್ಥಳೀಯ ಯುವಕರಾದ ಚರಣ್, ಧನುಷ್, ಬಬ್ಲುಗೂ ಕೂಡ ಗಾಯಗಳಾಗಿದೆಯಂತೆ. ಇನ್ನೂ ವಿನಾಕಾರಣ ಜಗಳ ಮಾಡಿ ನಮ್ಮ ಹುಡುಗರ ಮೇಲೆ ಹಲ್ಲೆ ಮಾಡಿ ದೂರು ನೀಡಿದ್ದಾರೆ ಎಂದು ಹಲ್ಲೆ ಮಾಡಿದ ಯುವಕನ ತಾಯಿ ಆರೋಪ ಮಾಡಿದ್ದಾರೆ.
ಹಲ್ಲೆ ಮಾಡಿದ ಬಳಿಕ ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ನಂಬರ್ ಪ್ಲೇಟ್ ಇಲ್ಲದ ಆಟೋ, ಅದರಲ್ಲಿದ್ದ ಮದ್ಯದ ಬಾಟಲಿಗಳು, ಡ್ರ್ಯಾಗರ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.