ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಜನಪ್ರಿಯ ಜೋಡಿ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ನಾಳೆ (ನವೆಂಬರ್ 22) ನಿಶ್ಚಿತಾರ್ಥ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ವದಂತಿಗಳು ಮತ್ತು ಗುಸುಗುಸುಗಳಿಗೆ ತೆರೆ ಎಳೆದು, ಹೊಸ ಬಾಳಿಗೆ ಕಾಲಿಡುತ್ತಿರುವ ಈ ಜೋಡಿ ಕಿಚ್ಚ ಸುದೀಪ್ ಅವರಿಗೆ ವಿಶೇಷ ಆಮಂತ್ರಣ ನೀಡಿ ಗಮನ ಸೆಳೆದಿದೆ.
ನವೆಂಬರ್ 22ರಂದು ನಡೆಯಲಿರುವ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಈಗಾಗಲೇ ಆಪ್ತರು ಹಾಗೂ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ವೇದಿಕೆಯ ಮೂಲಕ ತಮ್ಮ ಬದುಕಿನ ತಿರುವು ಆರಂಭವಾದ ಕಾರಣ, ನಿರೂಪಕ ಕಿಚ್ಚ ಸುದೀಪ್ ಅವರಿಗೆ ವಿಶೇಷವಾಗಿ ಆಮಂತ್ರಣ ನೀಡಿದ್ದಾರೆ.
ಆಮಂತ್ರಣ ಪತ್ರಿಕೆಯ ಫೋಟೋ ಹಂಚಿಕೊಂಡಿರುವ ಜೋಡಿ, "ನಮ್ಮ ಜೀವನದ ಒಂದು ಸುಂದರ ತಿರುವಿಗೆ ಕಾರಣವಾದ ಬಿಗ್ ಬಾಸ್; ಅದೇ ವೇದಿಕೆಯಲ್ಲಿ ನಮ್ಮಿಬ್ಬರ ಪಯಣ ಶುರುವಾಗಲು ಕಾರಣರಾದವರು ಸುದೀಪ್ ಸರ್! ಇಂದು ನಮ್ಮ ಜೀವನದ ಅತಿ ವಿಶೇಷ ಕ್ಷಣವಾದ ನಿಶ್ಚಿತಾರ್ಥದ ಆಮಂತ್ರಣವನ್ನು ನಿಮಗೆ ನೀಡಿದ್ದು ನಿಜಕ್ಕೂ ತುಂಬಾ ಖುಷಿ ಮತ್ತು ಹೆಮ್ಮೆಯ ವಿಚಾರ. ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ನಮಗೆ ಸದಾ ವಿಶೇಷ. ನಮ್ಮ ಕಥೆಯಲ್ಲಿ ನಿಮಗೂ ಒಂದು ಸುಂದರ ಸ್ಥಾನವಿದೆ" ಎಂದು ಭಾವುಕ ಶೀರ್ಷಿಕೆ ಬರೆದುಕೊಂಡಿದೆ.
ಬಿಗ್ ಬಾಸ್‌ನಿಂದ 'ಐಶಿರ್' ಪಯಣದವರೆಗೆ
ಬಿಗ್ ಬಾಸ್ ಕನ್ನಡ 11ನೇ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದ ಶಿಶಿರ್ ಮತ್ತು ಐಶ್ವರ್ಯ ಅವರ ನಡುವಿನ ಆತ್ಮೀಯತೆ ಮನೆಯ ಒಳಗೆ ಚಿಗುರಿ, ಹೊರಬಂದ ಮೇಲೂ ಗಟ್ಟಿಯಾಗಿತ್ತು. ಕಾರ್ಯಕ್ರಮದ ಬಳಿಕ ಸೀರಿಯಲ್ ಹಾಗೂ ವೆಬ್ ಸೀರೀಸ್‌ಗಳಲ್ಲಿ ತೊಡಗಿಸಿಕೊಂಡಿದ್ದ ಐಶ್ವರ್ಯ, ಶಿಶಿರ್ ಜೊತೆ ವಿವಿಧ ಸಮಾರಂಭಗಳು ಮತ್ತು ಪ್ರವಾಸಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಬಾಂಧವ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಆರಂಭದಲ್ಲಿ ಈ ಜೋಡಿ ಅದನ್ನು ನಿರಾಕರಿಸಿ ಕೇವಲ ಸ್ನೇಹ ಮತ್ತು ವ್ಯಾಪಾರದ ಪಾಲುದಾರಿಕೆಯ ಬಗ್ಗೆ ಮಾತನಾಡುತ್ತಿತ್ತು. ಆದರೆ ಇತ್ತೀಚೆಗೆ ವಿಶೇಷ ವಿಡಿಯೋ ಮೂಲಕ ವದಂತಿ ಮತ್ತು ಟ್ರೋಲ್‌ಗಳಿಗೆ ಉತ್ತರ ನೀಡಿದ ಜೋಡಿ, ತಮ್ಮ ಕಥೆಗೆ 'AISHIR' ಎಂಬ ಹೆಸರನ್ನು ನೀಡಿ ನಿಶ್ಚಿತಾರ್ಥದ ಸಿಹಿ ಸುದ್ದಿಯನ್ನು ಅಧಿಕೃತಗೊಳಿಸಿದೆ.
ಸಂಕಷ್ಟ ಮೆಟ್ಟಿ ನಿಂತ ಐಶ್ವರ್ಯ, ಕಲೆಗೆ ಮೀಸಲಾದ ಶಿಶಿರ್
ಕಿರುತೆರೆ ಮತ್ತು ವೆಬ್ ಸೀರೀಸ್‌ಗಳ ಮೂಲಕ ಗುರುತಿಸಿಕೊಂಡಿರುವ ಐಶ್ವರ್ಯ ಸಿಂಧೋಗಿ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ತಂದೆ-ತಾಯಿಯ ಅಗಲಿಕೆಯ ನೋವು ಹಾಗೂ ವ್ಯಾಪಾರದಲ್ಲಿ ಎದುರಾದ ವಂಚನೆಯಂತಹ ಕಷ್ಟಗಳನ್ನು ಎದುರಿಸಿ, ಕಲೆ ಮತ್ತು ನಟನಾ ಕ್ಷೇತ್ರದಲ್ಲಿ ತಮ್ಮ ಪಯಣವನ್ನು ಮುಂದುವರಿಸಿದ್ದಾರೆ.
ಮತ್ತೊಂದೆಡೆ ನಟನೆ ಜೊತೆಗೆ ಭರತನಾಟ್ಯ ಕಲಾವಿದರೂ ಆಗಿರುವ ಶಿಶಿರ್ ಶಾಸ್ತ್ರಿ, 2012ರಲ್ಲಿ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. 'ಕುಲವಧು' ಧಾರಾವಾಹಿಯ ವಚನ್ ಪಾತ್ರದಿಂದ ಹೆಚ್ಚು ಜನಪ್ರಿಯರಾದ ಇವರು, 'ಪುಟ್ಟಗೌರಿ ಮದುವೆ', 'ಭಾರತಿ', 'ಸೇವಂತಿ' ಸೇರಿದಂತೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. 2018ರಲ್ಲಿ 'ಮಿ. ಎಲ್‌ಎಲ್‌ಬಿ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿ, 'ಬಿಲ್‌ಗೇಟ್ಸ್' ಮತ್ತು 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.