Bigg boss kannada: ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳದ ಕಾವು ಹೆಚ್ಚಾಗುತ್ತಿದೆ. ಮನೆಯೊಳಗೆ ರಾಜಕೀಯ ಆಟ ಶುರುವಾಗಿದ್ದು, ಸ್ಪರ್ಧಿಗಳೆಲ್ಲಾ ಕಾರ್ಯಕರ್ತರ ಅವತಾರ ತಾಳಿದ್ದಾರೆ. ತಮ್ಮ ತಮ್ಮ ನಾಯಕರ ಪರವಾಗಿ ವಾದಕ್ಕಿಳಿದಿರುವ ಸ್ಪರ್ಧಿಗಳು, ಇದೀಗ ಪರಸ್ಪರ ಸವಾಲು ಹಾಕುವ ಹಂತಕ್ಕೆ ತಲುಪಿದ್ದಾರೆ. ಮಾಡರ್ನ್ ಕವಿ ಮಂಜ್ಯಾ ತೊಡೆ ತಟ್ಟಿದರೆ, ತಾಂಡವ್ ರಾಮ್ ತೋಳು ತಟ್ಟಿ ಅಬ್ಬರಿಸಿದ್ದಾರೆ. ಇನ್ನು ಗಾನವಿ ಗೌಡ ಚಾಕು ಹಿಡಿದು ಬಂದು ಹಲ್ಲು ಕೀಳುವಂತೆ ಸವಾಲು ಹಾಕಿದ್ದಾರೆ. ಅಸಲಿಗೆ ದೊಡ್ಮನೆಯಲ್ಲಿ ನಡೆದಿದ್ದೇನು?
ಮಾಡರ್ನ್ ಕವಿ ಮಂಜ್ಯಾ ಬಿಗ್‌ಬಾಸ್ ಮನೆಗೆ ಮರಳಿದ ಬೆನ್ನಲ್ಲೇ ಮನೆಯ ವಾತಾವರಣವೇ ಬದಲಾಗಿದೆ. ಮೊದಲಿನಿಂದಲೂ ತಮ್ಮದೇ ಶೈಲಿಯಲ್ಲಿ ಆಟವಾಡುತ್ತಿರುವ ಮಂಜ್ಯಾ, ಇದೀಗ ಫುಲ್ ಆಕ್ಟಿವ್ ಆಗಿದ್ದಾರೆ. ಗಗನ್, ಯಶಸ್ ಮತ್ತು ಮಂಜ್ಯಾ ನಾಯಕರಾಗಿ ರಾಜಕೀಯ ಆಟ ಶುರುವಾಗಿದ್ದು, ಅವರ ಬೆಂಬಲಿಗರು ತಮ್ಮ ನಾಯಕರಿಗಾಗಿ ವಾದಕ್ಕೆ ಇಳಿದಿದ್ದಾರೆ. ಈ ನಡುವೆ ನಡೆದ ಸಭೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ.
'ಕೆಂಪಾದವೋ ಎಲ್ಲ ಕೆಂಪಾದವು' ಟಾಸ್ಕ್ ವೇಳೆ ಶುರುವಾದ ಜಗಳ ರಾಜಕೀಯ ಸಭೆಯಲ್ಲೂ ಮುಂದುವರಿದಿದೆ. ಟಾಸ್ಕ್‌ನಲ್ಲಿ ನಡೆದ ಘಟನೆಗಳನ್ನು ಮುಂದಿಟ್ಟುಕೊಂಡು ಸ್ಪರ್ಧಿಗಳು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ಈ ವೇಳೆ ಮಾಡರ್ನ್ ಕವಿ ಮಂಜ್ಯಾ ತಮ್ಮದೇ ಸ್ಟೈಲ್‌ನಲ್ಲಿ ತೊಡೆ ತಟ್ಟಿ ಎದುರಾಳಿಗಳಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಸುಮ್ಮನಿರದ ತಾಂಡವ್ ರಾಮ್ ಕೂಡ ತೋಳು ತಟ್ಟಿ, 'ಅಖಾಡಕ್ಕೆ ಬಾ.. ತಿಂದು ಹಾಕ್ತೀನಿ' ಎನ್ನುವ ರೀತಿಯಲ್ಲಿ ಅಬ್ಬರಿಸಿದ್ದಾರೆ. ಇಬ್ಬರ ನಡುವಿನ ಈ ವಾಕ್ಸಮರ ಸಭೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.
ಚಾಕು ಹಿಡಿದು ಬಂದ ಗಾನವಿ ಗೌಡ!
ಇನ್ನು ಈ ಜಗಳದ ನಡುವೆ ಗಾನವಿ ಗೌಡ ಎಂಟ್ರಿ ಮತ್ತಷ್ಟು ಕುತೂಹಲ ಮೂಡಿಸಿದೆ. ಟಾಸ್ಕ್ ವೇಳೆ ಧನು, ಗಾನವಿ ಗೌಡ ಅವರ ಹಲ್ಲು ಕೀಳುವ ಬಗ್ಗೆ ಮಾತನಾಡಿದ್ದ ವಿಚಾರ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗಾನವಿ, ನೇರವಾಗಿ ಕಿಚನ್‌ಗೆ ಹೋಗಿ ಚಾಕು ತಂದು ಟೇಬಲ್ ಮೇಲೆ ಇಟ್ಟಿದ್ದಾರೆ. 'ಬಾ, ಹಲ್ಲು ಕೀಳು' ಎನ್ನುವಂತೆ ಸವಾಲು ಹಾಕಿದ್ದಾರೆ. ಗಾನವಿ ಅವರ ಈ ಆವೇಶದ ನಡೆ ಮನೆಯವರನ್ನು ಬೆಚ್ಚಿಬೀಳಿಸಿದೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯ ರಾಜಕೀಯ ಆಟ ಈಗ ವೈಯಕ್ತಿಕ ಜಗಳದ ರೂಪ ಪಡೆದುಕೊಂಡಿದೆ. ಮಾತಿನ ಚಕಮಕಿ, ತೊಡೆ ತಟ್ಟುವುದು, ತೋಳು ತಟ್ಟುವುದು, ಚಾಕು ತಂದು ಸವಾಲು ಹಾಕುವುದು ಹೀಗೆ ದಿನದಿನಕ್ಕೂ ಹೈಡ್ರಾಮಾ ಹೆಚ್ಚಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಜಗಳದ ದೃಶ್ಯಗಳೇ ಹೈಲೈಟ್ ಆಗಿದ್ದು, ಮುಂದೇನು ಆಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಮಂಜ್ಯಾ ಮತ್ತೆ ಮನೆಗೆ ಬಂದ ಬಳಿಕ ದೊಡ್ಮನೆಯಲ್ಲಿ ಜಗಳದ ಅಬ್ಬರ ಹೆಚ್ಚಾಗಿದೆ ಎನ್ನುವ ಚರ್ಚೆಯೂ ಶುರುವಾಗಿದೆ.