"ಗಗನ್-ತಾಂಡವ್ ಜೋಕರ್ಸ್ ಥರ ಕಾಣಿಸ್ತಿದ್ದೀರಿ" : ಗೆಳೆಯರ ಮುಖವಾಡ ಬಿಚ್ಚಿಟ್ಟ ಕಿಚ್ಚ
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಈ ವಾರ ಆಪ್ತ ಸ್ನೇಹಿತರಾಗಿದ್ದ ಗಗನ್ ಮತ್ತು ತಾಂಡವ್ ರಾಮ್ ನಡುವೆ ತೀವ್ರ ಜಗಳ ನಡೆದಿತ್ತು.. ಅಷ್ಟೇ ಅಲ್ಲದೆ, ಕ್ಷಣದಲ್ಲೇ ಇಬ್ಬರು ಒಂದಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಈ ಬಗ್ಗೆ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ... ಅಸಲಿಗೆ ಆಗಿದ್ದೇನು..? ಇಲ್ಲಿದೆ ವರದಿ..
Bigg Boss Kannada 13 : ಬಿಗ್ ಬಾಸ್ ಕನ್ನಡ ಸೀಸನ್ 13 ಮನೆಯಲ್ಲಿ ಈ ವಾರ ನಡೆದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ನಡುವಿನ ಜಗಳ ಹಾಗೂ ನಂತರದ ನಾಟಕೀಯ ಬೆಳವಣಿಗೆಗಳು ಪ್ರೇಕ್ಷಕರನ್ನು ಅಚ್ಚರಿಗೊಳಿಸುವುದರ ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಶೋ ಆರಂಭದಿಂದಲೂ ಅತ್ಯಂತ ಆಪ್ತ ಸ್ನೇಹಿತರಂತೆ ಓಡಾಡಿಕೊಂಡಿದ್ದ ಈ ಜೋಡಿ, ಒಂದು ಸಣ್ಣ ಟಾಸ್ಕ್ ವಿಚಾರವಾಗಿ ಬೀದಿರಂಪದಂತೆ ಕಿತ್ತಾಡಿಕೊಂಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಅದರಲ್ಲೂ ವೀಕೆಂಡ್‌ನಲ್ಲಿ ಬಂದ ಕಿಚ್ಚ ಸುದೀಪ್ ಇವರ ಈ ಅಸಲಿ ಮುಖವನ್ನು ಕನ್ನಡಿ ಹಿಡಿದು ತೋರಿಸಿದ ರೀತಿ ಈಗ ಎಲ್ಲೆಡೆ ವೈರಲ್ ಆಗಿದೆ.
ಚೆಂಡಿನ ವಿಚಾರಕ್ಕೆ ಶುರುವಾದ ಕಿತ್ತಾಟ
ವಾರದ ಟಾಸ್ಕ್ ಒಂದು ನಡೆಯುತ್ತಿದ್ದ ವೇಳೆ ಸಣ್ಣದೊಂದು ಚೆಂಡಿನ ವಿಚಾರವಾಗಿ ಗಗನ್ ಹಾಗೂ ತಾಂಡವ್ ನಡುವೆ ಮಾತಿನ ಚಕಮಕಿ ಆರಂಭವಾಯಿತು. ತಾಂಡವ್ ಅವರು ಸ್ನೇಹಿತನಾಗಿ "ಸುಮ್ಮನಿರು, ಸಮಾಧಾನವಾಗಿರು, ರೇಗಿಸಬೇಡ" ಎಂದು ಗಗನ್‌ಗೆ ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಗಗನ್ ಮಾತ್ರ ಯಾವುದನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅತಿರೇಕಕ್ಕೆ ಹೋದ ಗಗನ್ ತಾಳ್ಮೆ ಕಳೆದುಕೊಂಡು ಏಕಾಏಕಿ ತಾಂಡವ್ ಮೇಲೆ ಹರಿಹಾಯ್ದು, ಏಕವಚನದಲ್ಲಿ ಬೈಯುವುದಲ್ಲದೆ 'ಕುನ್ನಿ' ಎಂಬ ವಿವಾದಾತ್ಮಕ ಪದ ಬಳಸಿ ನಿಂದಿಸಿದರು. ಇದನ್ನು ಕಂಡು ತಾಂಡವ್ ಕೂಡ ತಮ್ಮ ಸಹನೆ ಕಳೆದುಕೊಂಡು ಗಗನ್ ಮೇಲೆ ರೇಗಾಡಿದರು. ಇದರಿಂದ ಇಡೀ ಮನೆಯ ವಾತಾವರಣವೇ ಹದಗೆಟ್ಟು ಹೋಗಿತ್ತು.
ಕ್ಷಣಾರ್ಧದಲ್ಲೇ ಒಂದಾದ ಅಚ್ಚರಿ
ಆದರೆ, ಇವರ ಜಗಳದ ಅಸಲಿ ಟ್ವಿಸ್ಟ್ ಸಿಕ್ಕಿದ್ದೇ ಕೆಲವೇ ಕ್ಷಣಗಳ ಬಳಿಕ. ಅಷ್ಟೊಂದು ಉಗ್ರವಾಗಿ, ಜೀವ ತೆಗೆಯುವವರಂತೆ ಜಗಳವಾಡಿಕೊಂಡಿದ್ದ ಈ ಇಬ್ಬರು ಗೆಳೆಯರು, ಕೊಂಚ ಹೊತ್ತಿನಲ್ಲೇ ಏನೂ ನಡೆದೇ ಇಲ್ಲವೇನೋ ಎಂಬಂತೆ ಮತ್ತೆ ಒಂದಾಗಿಬಿಟ್ಟರು! ಊಟದ ಮೇಜಿನ ಬಳಿ ಕುಳಿತ ಗಗನ್ ಸ್ವತಃ ತಾಂಡವ್‌ಗೆ ತಮ್ಮ ಕೈಯಿಂದಲೇ ತುತ್ತು ತಿನ್ನಿಸುವ ಮೂಲಕ ಮತ್ತೆ ಸ್ನೇಹದ ಹಸ್ತ ಚಾಚಿದರು. ಕೆಲವೇ ನಿಮಿಷಗಳ ಹಿಂದೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳದವರು, ಒಮ್ಮೊಮ್ಮೆಲೇ ಹೀಗೆ ಅತಿರೇಕದ ಪ್ರೀತಿ ಪ್ರದರ್ಶನ ಮಾಡಿದ್ದನ್ನು ಕಂಡು ವೀಕ್ಷಕರು ಮಾತ್ರವಲ್ಲದೆ ಮನೆಯ ಇತರ ಸದಸ್ಯರೂ ಸಹ ದಂಗಾಗಿ ಹೋದರು.
ಕಿಚ್ಚ ಸುದೀಪ್ ವಾರ್ನಿಂಗ್ ಮತ್ತು ಚಾಟಿ
ಶನಿವಾರದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ನಟ ಕಿಚ್ಚ ಸುದೀಪ್, ಇಬ್ಬರನ್ನೂ ವೇದಿಕೆ ಮೇಲೆಯೇ ಕಟಕಟೆಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು. "ಮನೆಗೆ ಬಂದ ಮಂಜ ಅವರು ಹೊರಗಿನ ರಿಪೋರ್ಟ್ ನೀಡಿದ್ದೇ ನಿಮ್ಮಿಬ್ಬರ ಜಗಳಕ್ಕೆ ಕಾರಣವಾಯಿತೇ?" ಎಂದು ಸುದೀಪ್ ನೇರವಾಗಿ ಪ್ರಶ್ನಿಸಿದಾಗ, ಗಗನ್ ಮತ್ತು ತಾಂಡವ್ ಅದನ್ನು ಒಪ್ಪದೆ ತಡಬಡಾಯಿಸತೊಡಗಿದರು.
ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿದ ಸುದೀಪ್, "ಒಂದು ಸಣ್ಣ ಚೆಂಡಿಗಾಗಿ ಗಗನ್ ಅಷ್ಟೊಂದು ಕೋಪಗೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಹಾಗೆಯೇ ತಾಂಡವ್ ಕೂಡ ಕೈಮಾಡುವ ಮಟ್ಟಕ್ಕೆ ಹೋಗುವುದು ಸರಿಯಲ್ಲ" ಎಂದು ತರಾಟೆಗೆ ತೆಗೆದುಕೊಂಡರು. ಇದೆಲ್ಲಕ್ಕಿಂತ ಮುಖ್ಯವಾಗಿ, "ಅಷ್ಟೊಂದು ತೀವ್ರವಾಗಿ ಜಗಳವಾಡಿದ ಬಳಿಕ ಊಟದ ಟೇಬಲ್‌ನಲ್ಲಿ ಒಬ್ಬರಿಗೊಬ್ಬರು ತುತ್ತು ತಿನ್ನಿಸುವ ಈ ನಾಟಕದ ಅವಶ್ಯಕತೆಯಾದರೂ ಏನಿತ್ತು? ನಿಮ್ಮ ಈ ವರ್ತನೆಯಿಂದ ಹೊರಗಡೆ ನೋಡುವ ಪ್ರೇಕ್ಷಕರಿಗೆ ನಿಮ್ಮ ಜಗಳವೂ ನಕಲಿ, ನಿಮ್ಮ ಸ್ನೇಹವೂ ನಕಲಿ ಎಂಬ ಭಾವನೆ ಮೂಡುತ್ತಿದೆ. ಜನರ ಕಣ್ಣಿಗೆ ನೀವಿಬ್ಬರೂ ಜೋಕರ್‌ಗಳ ಥರಹ ಕಾಣಿಸುತ್ತಿದ್ದೀರಿ" ಎಂದು ನೇರ ಮಾತುಗಳಲ್ಲಿ ಬಿಸಿಮುಟ್ಟಿಸಿದರು. ಸುದೀಪ್ ಅವರ ಈ ಕಠಿಣ ಮಾತುಗಳು ಈಗ ಸ್ಪರ್ಧಿಗಳ ಕಣ್ಣು ತೆರೆಸುತ್ತಾ ಅಥವಾ ಮುಂದಿನ ದಿನಗಳಲ್ಲಿ ಇವರ ಆಟದಲ್ಲಿ ಬದಲಾವಣೆ ತರುತ್ತಾ ಎಂಬುದನ್ನು ಕಾದು ನೋಡಬೇಕಿದೆ.