ಗುರುತೇ ಸಿಗದಂತೆ ಬದಲಾದ ಬಿಗ್ ಬಾಸ್ ಮಾಜಿ ಸ್ಪರ್ಧಿ..! ಕ್ಯಾನ್ಸರ್ ಪತ್ತೆ, ಆಸ್ಪತ್ರೆಗೆ ದಾಖಲು
ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಸ್ಪರ್ಧಿಯೊಬ್ಬರು ಕ್ಯಾನ್ಸರ್‌ನಿಂದಾಗಿ ತೀವ್ರ ಆರೋಗ್ಯ ಸಮಸ್ಯೆಗೆ ಈಡಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Bigg Boss updates : ಬಿಗ್ ಬಾಸ್ ಮಲಯಾಳಂ ಸೀಸನ್ 7ರ ಮೂಲಕ ಜನಪ್ರಿಯತೆ ಗಳಿಸಿದ್ದ ಸ್ಪರ್ಧಿ ರೇಣು ಸುಧಿ ಅವರು ಪ್ರಸ್ತುತ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು, ಕೋಟ್ಟಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.
5ನೇ ಸುತ್ತಿನ ಕಿಮೊಥೆರಪಿ ಬಳಿಕ ಕ್ಷೀಣಿಸಿದ ಆರೋಗ್ಯ
ರೇಣು ಸುಧಿ ಅವರಿಗೆ ಕ್ಯಾನ್ಸರ್ ಇರುವುದು ಇತ್ತೀಚೆಗೆ ಬಹಿರಂಗವಾಗಿತ್ತು. ಐದು ಸುತ್ತಿನ ಕಿಮೊಥೆರಪಿ ಚಿಕಿತ್ಸೆಯ ನಂತರ ಅವರ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ರೇಣು ಅವರ ದೇಹವು ಇನ್ನೊಂದು ಸುತ್ತಿನ ಕಿಮೊಥೆರಪಿಯನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ, ಮತ್ತಷ್ಟು ಚಿಕಿತ್ಸೆ ನೀಡುವುದು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಗೆಳತಿ
ರೇಣು ಅವರ ಆಪ್ತ ಗೆಳತಿ ಹಾಗೂ ಬಿಗ್ ಬಾಸ್ ಸಹ ಸ್ಪರ್ಧಿ ಸಾರಿಕಾ ಕೆ.ಬಿ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಈ ವಿಷಯ ತಿಳಿಸಿದ್ದಾರೆ. ಆಹಾರ ಸೇವಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ ರೇಣು ಅವರಿಗೆ 'ಪಿಐಸಿಸಿ ಲೈನ್' (PICC Line) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ ಸಾರಿಕಾ, ಅಭಿಮಾನಿಗಳಲ್ಲಿ ಪ್ರಾರ್ಥಿಸುವಂತೆ ಭಾವುಕರಾಗಿ ಮನವಿ ಮಾಡಿದ್ದಾರೆ.
15ನೇ ವಯಸ್ಸಿನಲ್ಲೇ ಕಾಣಿಸಿಕೊಂಡಿತ್ತು ಸಣ್ಣ ಗಡ್ಡೆ
ತಮ್ಮ ಕ್ಯಾನ್ಸರ್ ಹೋರಾಟದ ಬಗ್ಗೆ ಈ ಹಿಂದೆ ಮಾತನಾಡಿದ್ದ ರೇಣು, ತಮ್ಮ 15ನೇ ವಯಸ್ಸಿನಲ್ಲೇ ದೇಹದಲ್ಲಿ ಸಣ್ಣ ಗಡ್ಡೆಯನ್ನು ಗಮನಿಸಿದ್ದಾಗಿ ಹೇಳಿದ್ದರು. ಡಿಪ್ಲೊಮಾ ವ್ಯಾಸಂಗದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ, ಭವಿಷ್ಯದಲ್ಲಿ ಇದು ಕ್ಯಾನ್ಸರ್ ಆಗಿ ಬದಲಾಗಬಹುದು ಎಂದು ಎಚ್ಚರಿಸಲಾಗಿತ್ತು. ಪತಿಯ ನಿಧನದ ನಂತರ ನಡೆಸಿದ ತಪಾಸಣೆ, ಮ್ಯಾಮೊಗ್ರಾಮ್ ಮತ್ತು ಬಯಾಪ್ಸಿ ಪರೀಕ್ಷೆಗಳಲ್ಲಿ ಅವರಿಗೆ 3ನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ಮಹಿಳೆಯರಿಗೆ ಜಾಗೃತಿ ಮತ್ತು ಆರ್ಥಿಕ ಸಂಕಷ್ಟ
ಕಠಿಣ ಪರಿಸ್ಥಿತಿಯ ನಡುವೆಯೂ ರೇಣು ತಮ್ಮ ಜಾಲತಾಣಗಳ ಮೂಲಕ "ನೋವಿಲ್ಲದ ಸಣ್ಣ ಗಡ್ಡೆಯನ್ನೂ ನಿರ್ಲಕ್ಷಿಸಬೇಡಿ" ಎಂದು ಮಹಿಳೆಯರಿಗೆ ಜಾಗೃತಿ ಮೂಡಿಸುತ್ತಿದ್ದರು. ಚಿಕಿತ್ಸೆಗೆ ಭಾರಿ ಹಣದ ಅಗತ್ಯವಿದ್ದ ಕಾರಣ, ಯೂಟ್ಯೂಬ್ ಕಾರ್ಯಕ್ರಮಗಳು, ಸಂಗೀತ ಆಲ್ಬಮ್‌ಗಳು ಮತ್ತು ಚಂದಾದಾರಿಕೆ ಆಧಾರಿತ ವಿಡಿಯೋಗಳ ಮೂಲಕ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟ ಪಡುತ್ತಿದ್ದರು.