SOCIAL MEDIA

Newsletter

PARTNER SITES
Select Language Select State

ಅಪರೂಪದ ಸೌಂದರ್ಯ, ದಿಗ್ಗಜರ ಜೊತೆ ನಟನೆ ಸಿನಿರಂಗ ಬಿಟ್ಟು ಸನ್ಯಾಸಿಯಾದ ಖ್ಯಾತ ನಟಿ..!

ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್‌ಗಳ ಜೊತೆ ನಟಿಸಿ, ಕರಿಯರ್‌ನ ಉತ್ತುಂಗದಲ್ಲಿದ್ದಾಗ ಎಲ್ಲವನ್ನೂ ತೊರೆದು ಆಧ್ಯಾತ್ಮಿಕ ಮಾರ್ಗ ಹಿಡಿದ ನಟಿಯರ ಉದಾಹರಣೆಗಳು ಬಹಳ ಕಡಿಮೆ. ಅಂತಹ ಅತಿ ಅಪರೂಪದ ಹಾಗೂ ಅಚ್ಚರಿಯ ನಿರ್ಧಾರ ತೆಗೆದುಕೊಂಡವರಲ್ಲಿ ಈ ಅಪ್ಸರೆಯಂತ ನಟಿ ಒಬ್ಬರು.. ದಿಗ್ಗಜರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಈ ಚೆಲುವೆ, ಇಂದು ಗ್ಲಾಮರ್ ಲೋಕಕ್ಕೆ ಸಂಪೂರ್ಣ ವಿದಾಯ ಹೇಳಿ ಟಿಬೆಟಿಯನ್ ಬೌದ್ಧ ಸನ್ಯಾಸಿನಿಯಾಗಿ ಸರಳ ಜೀವನ ನಡೆಸುತ್ತಿದ್ದಾರೆ.. ಯಾರದು..? ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..

Written By Krishna NK
Published: Oct 25, 2026, 09:06 PM IST | Updated: Oct 25, 2026, 09:11 PM IST
Image Credit: Barkha Madan
Join

Barkha Madan Spiritual journey : ಬಣ್ಣದ ಲೋಕವನ್ನು ತೊರೆದು ಆಧ್ಯಾತ್ಮಿಕ ಮಾರ್ಗ ಹಿಡಿದ ನಟಿಯರ ಉದಾಹರಣೆಗಳು ಬಹಳ ಕಡಿಮೆ. ಅಂತಹ ಅತಿ ಅಪರೂಪದ ಹಾಗೂ ಅಚ್ಚರಿಯ ನಿರ್ಧಾರ ತೆಗೆದುಕೊಂಡವರಲ್ಲಿ ಮಾಜಿ ಮಾಡೆಲ್ ಹಾಗೂ ನಟಿ ಬರ್ಖಾ ಮದನ್ ಕೂಡ ಒಬ್ಬರು. ಅಕ್ಷಯ್ ಕುಮಾರ್ ಮತ್ತು ರಾಮ್ ಗೋಪಾಲ್ ವರ್ಮಾ ಅವರಂತಹ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಈ ನಟಿ, ಇಂದು ಗ್ಲಾಮರ್ ಲೋಕಕ್ಕೆ ಸಂಪೂರ್ಣ ವಿದಾಯ ಹೇಳಿ ಟಿಬೆಟಿಯನ್ ಬೌದ್ಧ ಸನ್ಯಾಸಿನಿಯಾಗಿ ಸರಳ ಜೀವನ ನಡೆಸುತ್ತಿದ್ದಾರೆ.

ಐಶ್ವರ್ಯ ರೈ, ಸುಶ್ಮಿತಾ ಸೇನ್ ಜೊತೆ ಸ್ಪರ್ಧೆ
ಪಂಜಾಬಿ ಮೂಲದ ಬರ್ಖಾ ಮದನ್ ಅವರ ಆರಂಭಿಕ ಜೀವನವು ಬಹಳ ರೋಚಕವಾಗಿದೆ. 1994ರಲ್ಲಿ ನಡೆದ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಭಾಗವಹಿಸಿದ್ದರು. ವಿಶೇಷವೆಂದರೆ, ಅದೇ ವರ್ಷದ ಸ್ಪರ್ಧೆಯಲ್ಲಿ ವಿಶ್ವ ಸುಂದರಿಯರಾದ ಐಶ್ವರ್ಯ ರೈ ಮತ್ತು ಸುಶ್ಮಿತಾ ಸೇನ್ ಕೂಡ ಸ್ಪರ್ಧಿಗಳಾಗಿದ್ದರು. ಅವರ ಜೊತೆ ಕಣಕ್ಕಿಳಿದಿದ್ದ ಬರ್ಖಾ ಮದನ್, ನಂತರ 'ಮಿಸ್ ಟೂರಿಸಂ ಇಂಡಿಯಾ' ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ಮಾಡೆಲಿಂಗ್ ಲೋಕದಲ್ಲಿ ಸಿಕ್ಕ ಯಶಸ್ಸು ಅವರಿಗೆ ನೇರವಾಗಿ ಬಾಲಿವುಡ್‌ನ ಬಾಗಿಲು ತೆರೆಯಿತು.

ಅಕ್ಷಯ್ ಕುಮಾರ್ ಚಿತ್ರದ ಮೂಲಕ ಎಂಟ್ರಿ
1996ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ಮತ್ತು ರೇಖಾ ಅಭಿನಯದ ಸೂಪರ್‌ಹಿಟ್ ಚಿತ್ರ 'ಖಿಲಾಡಿಯೋಂಕ ಕಿಲಾಡಿ' (Khiladiyon Ka Khiladi) ಮೂಲಕ ಬರ್ಖಾ ಮದನ್ ಬಾಲಿವುಡ್‌ಗೆ ಕಾಲಿಟ್ಟರು. ತಮ್ಮ ಮೊದಲ ಚಿತ್ರದಲ್ಲೇ ನಟನೆಯಿಂದ ಪ್ರೇಕ್ಷಕರ ಮನ ಗೆದ್ದ ಅವರು, ಬಳಿಕ ಹಿಂದಿ ಮಾತ್ರವಲ್ಲದೆ ಪಂಜಾಬಿ ಮತ್ತು ಡಚ್ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು.

ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 2003ರ ಜನಪ್ರಿಯ ಹಾರರ್ ಚಿತ್ರ 'ಭೂತ್' (Bhoot) ಸಿನಿಮಾದಲ್ಲಿ ಪ್ರೇತದ (ಮಂಜಿತ್) ಪಾತ್ರದಲ್ಲಿ ಅವರು ನೀಡಿದ ಅಭಿನಯ ಯಾರೂ ಮರೆಯುವಂತಿಲ್ಲ. ಈ ಚಿತ್ರದಲ್ಲಿ ಅವರ ನಟನೆಗೆ ವಿಮರ್ಶಕರಿಂದಲೂ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಸಿನಿಮಾಗಳ ಜೊತೆಗೆ ಸುಮಾರು 20ಕ್ಕೂ ಹೆಚ್ಚು ಟಿವಿ ಧಾರವಾಹಿಗಳು, ರಿಯಾಲಿಟಿ ಶೋಗಳು ಹಾಗೂ ಸ್ವಂತ ಸಿನಿಮಾ ನಿರ್ಮಾಣದಲ್ಲೂ ಅವರು ಬ್ಯುಸಿಯಾಗಿದ್ದರು. ಹೀಗೆ ನಟನೆ, ಮಾಡೆಲಿಂಗ್ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಯಶಸ್ಸಿನ ಏಣಿಯೇರುತ್ತಿದ್ದ ಸಮಯ ಅದು.

2012ರ ಆ ಒಂದು ದಿಢೀರ್ ನಿರ್ಧಾರ
ಕರಿಯರ್ ಚೆನ್ನಾಗಿ ಸಾಗುತ್ತಿದ್ದರೂ, ಬರ್ಖಾ ಮದನ್ ಮನಸ್ಸಿನಲ್ಲಿ ಅಧ್ಯಾತ್ಮದ ಒಲವು ಹೆಚ್ಚಾಗುತ್ತಾ ಸಾಗಿತು. ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಬೋಧನೆಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, 2012ರಲ್ಲಿ ತಮ್ಮ ಜೀವನದ ಅತಿ ದೊಡ್ಡ ಮತ್ತು ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಸಿನಿಮಾ ರಂಗದ ನಳನಳಿಸುವ ಬೆಳಕು, ದುಬಾರಿ ಕಾರು, ಐಷಾರಾಮಿ ಜೀವನ ಎಲ್ಲವನ್ನೂ ತ್ಯಜಿಸಿ ಬೌದ್ಧ ಧರ್ಮದ ಕಡೆಗೆ ಒಲವು ತೋರಿದರು.

ಬೌದ್ಧ ಸನ್ಯಾಸಿಯಾಗಿ ದೀಕ್ಷೆ ಪಡೆದ ಬಳಿಕ ಅವರು ತಮ್ಮ ಹೆಸರನ್ನು 'ಗ್ಯಾಲ್ಟೆನ್ ಸಮ್ಟೆನ್' ಎಂದು ಬದಲಾಯಿಸಿಕೊಂಡರು. ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ (ಸುಮಾರು 14 ವರ್ಷಗಳು) ಅವರು ಲೌಕಿಕ ಜಗತ್ತಿನಿಂದ ಸಂಪೂರ್ಣ ದೂರವಿದ್ದು, ಟಿಬೆಟಿಯನ್ ಬೌದ್ಧ ಸನ್ಯಾಸಿನಿಯಾಗಿ ಅತುಲವಾದ ಸೇವಾ ಕಾರ್ಯಗಳು ಮತ್ತು ತಪಸ್ಸಿನಲ್ಲಿ ತೊಡಗಿಸಿಕೊಂಡಿದ್ದಾರೆ. ತಾವೆಂದಿಗೂ ತಮ್ಮ ಈ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಟ್ಟಿಲ್ಲ ಎಂದೂ, ಇದು ತಮ್ಮ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ನೆಮ್ಮದಿಯ ಹಾಗೂ ಸರಿಯಾದ ನಿರ್ಧಾರ ಎಂದು ಅವರು ಹಲವು ಸಂದರ್ಭಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇಂದಿನ ಗ್ಲಾಮರ್ ಯುಗದಲ್ಲಿ ಹೆಸರು, ಹಣ ಹಾಗೂ ಕೀರ್ತಿಯ ಹಿಂದೆ ಓಡುವವರ ಮಧ್ಯೆ, ಎಲ್ಲವನ್ನೂ ಸ್ವಯಂಪ್ರೇರಿತವಾಗಿ ತೊರೆದು ಮನಸ್ಸಿನ ಶಾಂತಿಗಾಗಿ ಆಧ್ಯಾತ್ಮಿಕ ಮಾರ್ಗ ಹಿಡಿದ ಬರ್ಖಾ ಮದನ್ ಅವರ ಈ ವಿಭಿನ್ನ ಪಯಣ ನಿಜಕ್ಕೂ ಅಸಾಧಾರಣ ಹಾಗೂ ಸ್ಫೂರ್ತಿದಾಯಕವಾದದ್ದು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES