ನಾನು, ನನ್ನ ಸೊಸೆ ಪ್ರತಿದಿನ ಗೋಮೂತ್ರ ಸೇವಿಸುತ್ತೇವೆ : ಗೋಮಾತೆ ಪಾವಿತ್ರ್ಯತೆ ನೆನೆದ ನಟ ದೊಡ್ಡಣ್ಣ
ರೈತ ಮತ್ತು ಗೋಮಾತೆಯ ಮಹತ್ವದ ಬಗ್ಗೆ ಮಾತನಾಡಿದ ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ತಾವು ಹಾಗು ತಮ್ಮ ಸೊಸೆ ಪ್ರತಿದಿನ ಗೋಮೂತ್ರ ಸೇವಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಹಸುವಿನ ಹಾಲು ತಾಯಿಯ ಎದೆ ಹಾಲಿನಷ್ಟೇ ಪವಿತ್ರ ಎಂದು ಹೇಳಿದರು..
ಗದಗ: ತಾಲೂಕಿನ ಬಾಳಂಬೀಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ನಟ ದೊಡ್ಡಣ್ಣ ಅವರು ಭಾವನಾತ್ಮಕ ಹಾಗೂ ಖಡಕ್ ಭಾಷಣ ಮಾಡಿದರು. ಭಾಷಣದ ವೇಳೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, "ಕೇಸರಿ ಎಂದರೆ ಗುರು, ಗುರುವಿನ ಕೃಪೆ ಇರಬೇಕು. ಭದ್ರಾವತಿ ಫ್ಯಾಕ್ಟರಿಯಲ್ಲಿ ನಾನು ಕಸ ಗುಡಿಸುವ ಕೆಲಸ ಮಾಡುತ್ತಿದ್ದೆ," ಎಂದು ಸ್ಮರಿಸಿದರು.
"ರೈತ ಎಂದರೆ ಭೂಮಿ ತಾಯಿಯ ಚೊಚ್ಚಲ ಮಗ. ತಾಯಿಯ ಎದೆಹಾಲಿನಷ್ಟೇ ಉತ್ಕೃಷ್ಟವಾದದ್ದು ಗೋವಿನ ಹಾಲು. ಗೋಮಾತೆಯ ಒಳಗೆ 33 ಕೋಟಿ ದೇವತೆಗಳು ವಾಸಿಸುತ್ತಾರೆ," ಎಂದ ನಟ ದೊಡ್ಡಣ್ಣ, ತಮ್ಮ ಮನೆಯ ಗೃಹಪ್ರವೇಶದ ವೇಳೆ ಹಸು ಒಳಗೆ ಬಂದು ಸಗಣಿ ಹಾಕಿದ ಪ್ರಸಂಗವನ್ನು ನೆನಪಿಸಿಕೊಂಡರಲ್ಲದೆ, ತಾವು ಮತ್ತು ತಮ್ಮ ಸೊಸೆ ಪ್ರತಿದಿನ ಗೋಮೂತ್ರ ಸೇವಿಸುವುದಾಗಿ ತಿಳಿಸಿದರು.
ಇದೇ ವೇಳೆ ತಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ಮಾತನಾಡುತ್ತಾ, "ಇತ್ತೀಚೆಗೆ ಕೊಪ್ಪಳದಲ್ಲಿ 8 ಮಕ್ಕಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಹಾಗೂ 430 ಮಕ್ಕಳಿಗೆ ಕನ್ನಡಕ ವಿತರಿಸಲಾಗಿದೆ. ನನ್ನ ಅಳಿಯ ಶಾಸಕನಾದ ಬಳಿಕ ಸುಮಾರು 20 ಸಾವಿರ ಜನರಿಗೆ ಉಚಿತ ಕಣ್ಣಿನ ಚಿಕಿತ್ಸೆ ನೀಡಲಾಗಿದೆ. ಈ ಭಾಗದ ಜನರೂ ಸಹ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು," ಎಂದು ಕರೆ ನೀಡಿದರು.