ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ: ಡಿಜಿಲಾಕರ್‌ನಲ್ಲೇ ಸಿಗಲಿದೆ ಮಾರ್ಕ್ಸ್‌ಕಾರ್ಡ್!
ರಾಜ್ಯ ಶಿಕ್ಷಣ ಇಲಾಖೆಯು ಮುಂಬರುವ 2026-27ನೇ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ನೀಡಲು ನಿರ್ಧರಿಸಿದೆ. ಡಿಜಿಟಲ್ ವ್ಯವಸ್ಥೆಯಿಂದ ಅಂಕಪಟ್ಟಿಯ ಅಸಲಿತನವನ್ನ ಸುಲಭವಾಗಿ ಪರಿಶೀಲಿಸಬಹುದು, ಇದರಿಂದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ತಡೆಯಲು ಮತ್ತು ಅಂಕಪಟ್ಟಿ ಕಳೆದುಹೋಗುವ ಕಿರಿಕಿರಿ ತಪ್ಪಿಸಲು ಸಾಧ್ಯವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
Digital Marks Cards: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ಮೇಲೆ ಒರಿಜಿನಲ್ ಮಾರ್ಕ್ಸ್ ಕಾರ್ಡ್‌ಗಾಗಿ ತಿಂಗಳುಗಟ್ಟಲೇ ಕಾಯುವುದು, ಆಮೇಲೆ ಆ ಕಾಗದದ ಅಂಕಪಟ್ಟಿ ಹರಿದುಹೋಗದಂತೆ ಅಥವಾ ಕಳೆದುಹೋಗದಂತೆ ಜೋಪಾನವಾಗಿ ಎತ್ತಿಡುವುದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೊಡ್ಡ ತಲೆನೋವಾಗಿತ್ತು. ಆದ್ರೆ ಇನ್ಮುಂದೆ ಆ ಟೆನ್ಷನ್ ಇರಲ್ಲ. ರಾಜ್ಯ ಶಿಕ್ಷಣ ಇಲಾಖೆ ಅಂಕಪಟ್ಟಿ ವಿತರಣೆ ವಿಧಾನದಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದ್ದು, 2026-27ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕ್ಸ್ ಕಾರ್ಡ್ ನೀಡಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲೇ ಅಂಕಪಟ್ಟಿಯನ್ನ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಡಿಜಿಲಾಕರ್‌ನಲ್ಲೇ ಸಿಗಲಿದೆ ಅಂಕಪಟ್ಟಿ!
ಮುಂಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನ ನೇರವಾಗಿ ಕೇಂದ್ರ ಸರ್ಕಾರದ ಡಿಜಿಲಾಕರ್ ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಈ ಡಿಜಿಟಲ್ ರೂಪದಲ್ಲಿ ಸಿಗುವ ಅಂಕಪಟ್ಟಿಗೆ ಸಂಪೂರ್ಣ ಅಧಿಕೃತ ಮಾನ್ಯತೆ ಇರಲಿದೆ. ಅಂದರೆ ಕಾಲೇಜು ಪ್ರವೇಶವಿರಲಿ ಅಥವಾ ಸರ್ಕಾರಿ/ಖಾಸಗಿ ಉದ್ಯೋಗದ ಸಂದರ್ಶನವಿರಲಿ, ಎಲ್ಲಾ ಕಡೆ ಇದನ್ನ ಒರಿಜಿನಲ್ ದಾಖಲೆಯಂತೆಯೇ ಬಳಸಬಹುದು. ಒಂದು ವೇಳೆ ಅಂಕಪಟ್ಟಿ ಕಳೆದುಹೋದ್ರೆ ಡುಪ್ಲಿಕೇಟ್ ಕಾಪಿಗಾಗಿ ಶಿಕ್ಷಣ ಮಂಡಳಿ ಕಚೇರಿಗಳಿಗೆ ಅಲೆದಾಡುವ, ಅರ್ಜಿ ಹಾಕಿ ಕಾಯುವ ಕಿರಿಕಿರಿ ಇನ್ನುಮುಂದೆ ತಪ್ಪಲಿದೆ.
ಡಿಜಿಟಲ್ ಅಂಕಪಟ್ಟಿಯ ಜೊತೆಗೆ ವಿದ್ಯಾರ್ಥಿಗಳ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನ 'ಅಪಾರ್ ಐಡಿ'ಗೆ (APAAR ID) ಲಿಂಕ್ ಮಾಡುವ ವ್ಯವಸ್ಥೆಯನ್ನೂ ಶಿಕ್ಷಣ ಇಲಾಖೆ ರೂಪಿಸುತ್ತಿದೆ. ಇದರಿಂದ ವಿದ್ಯಾರ್ಥಿಯ ಇಡೀ ವಿದ್ಯಾಭ್ಯಾಸದ ಸಂಪೂರ್ಣ ದಾಖಲೆಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುರಕ್ಷಿತವಾಗಿ ಇರಲಿವೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಕಾಲೇಜುಗಳಿಗೆ ಸೇರುವಾಗ ಅಥವಾ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸುವಾಗ ಈ ದಾಖಲೆಗಳನ್ನ ಕ್ಷಣಾರ್ಧದಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ.
ನಕಲಿ ಮಾರ್ಕ್ಸ್ ಕಾರ್ಡ್ ಹಾವಳಿಗೆ ಬ್ರೇಕ್!
ಇತ್ತೀಚಿನ ದಿನಗಳಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅಥವಾ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಯತ್ನಿಸುವ ಪ್ರಕರಣಗಳು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದವು. ಅಸಲಿ ಅಂಕಪಟ್ಟಿಯಲ್ಲಿರುವ ಅಂಕಗಳನ್ನ ಎಡಿಟ್ ಮಾಡಿ ವಂಚನೆ ಎಸಗುವ ಜಾಲಗಳೂ ಸಕ್ರಿಯವಾಗಿದ್ದವು. ಆದ್ರೆ ಈ ಹೊಸ ಡಿಜಿಟಲ್ ವ್ಯವಸ್ಥೆಯಲ್ಲಿ ಅಂಕಪಟ್ಟಿಯ ಅಸಲಿತನವನ್ನ ಆನ್‌ಲೈನ್‌ನಲ್ಲೇ ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುವುದರಿಂದ, ಇಂತಹ ಎಲ್ಲಾ ಅಕ್ರಮ ಮತ್ತು ನಕಲಿ ದಂಧೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂಬುದು ಇಲಾಖೆಯ ಆಶಯವಾಗಿದೆ.
ಈ ಮಹತ್ವದ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೆ ಸುಲಭವಾಗಿ ಮತ್ತು ಪಾರದರ್ಶಕವಾಗಿ ಅಂಕಪಟ್ಟಿ ತಲುಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಡಿಜಿಟಲ್ ವ್ಯವಸ್ಥೆಯನ್ನ ಜಾರಿಗೊಳಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಯಾವುದೇ ತಾಂತ್ರಿಕ ತೊಂದರೆಗಳನ್ನ ಮೊದಲೇ ಗುರುತಿಸಿ, ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಡಿಜಿಟಲ್ ಕ್ರಾಂತಿ ವರದಾನವಾಗಲಿದೆ.