SOCIAL MEDIA

Newsletter

PARTNER SITES
Select Language Select State

TVS ಸಾಮ್ರಾಜ್ಯದಲ್ಲಿ ಆಸ್ತಿ ಕದನ! ತಂದೆಯ ಆಸ್ತಿಯಲ್ಲಿ ಸಮಪಾಲು ಕೇಳಿದ ಪುತ್ರಿ; ಮಗಳ ಬೆನ್ನಿಗೆ ನಿಂತ ತಾಯಿ

ಟಿವಿಎಸ್ ಉದ್ಯಮ ಸಮೂಹದ ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿದೆ. ತಂದೆ ವೇಣು ಶ್ರೀನಿವಾಸನ್ ಅವರ ಕುಟುಂಬದ ಅವಿಭಕ್ತ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ಪುತ್ರಿ ಲಕ್ಷ್ಮೀ ವೇಣು ವಿಭಜನಾ ನೋಟಿಸ್ ಕಳುಹಿಸಿದ್ದಾರೆ. ಪುತ್ರ ಸುದರ್ಶನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬುದು ಅವರ ಆರೋಪ. ತಾಯಿ ಮಲ್ಲಿಕಾ ಶ್ರೀನಿವಾಸನ್ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾರೆ. 2024ರ ಆಸ್ತಿ ಹಂಚಿಕೆ ಒಪ್ಪಂದದ ಬಗ್ಗೆ ಎರಡೂ ಕಡೆಯವರ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದ್ದು, ವಿವಾದ ಕಾನೂನು ಹೋರಾಟದ ಹಂತ ತಲುಪುವ ಸಾಧ್ಯತೆಯಿದೆ.

Written By Puttaraj K Alur
Published: Nov 17, 2026, 21:16 IST | Updated: Nov 17, 2026, 21:31 IST
Image Credit: TVS Family Dispute
Join

TVS Family Dispute: ದೇಶದ ಪ್ರಮುಖ ಉದ್ಯಮ ಸಮೂಹಗಳಲ್ಲಿ ಒಂದಾಗಿರುವ ಟಿವಿಎಸ್ (TVS) ಗ್ರೂಪ್‌ನ ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ದೊಡ್ಡ ವಿವಾದ ಭುಗಿಲೆದ್ದಿದೆ. ಟಿವಿಎಸ್ ಮೋಟಾರ್ ಕಂಪನಿಯ ಪ್ರಮುಖ ಉದ್ಯಮಿ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮೀ ವೇಣು, ತಂದೆಯ ಕುಟುಂಬದ ಅವಿಭಕ್ತ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ಅಧಿಕೃತವಾಗಿ ವಿಭಜನಾ ನೋಟಿಸ್ ಕಳುಹಿಸಿದ್ದಾರೆ. ವಿಶೇಷವೆಂದರೆ ಲಕ್ಷ್ಮೀ ಅವರ ತಾಯಿ ಹಾಗೂ ಟಾಫೆ (TAFE) ಸಂಸ್ಥೆಯ ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್ ಕೂಡ ಮಗಳ ಬೇಡಿಕೆಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಇದೀಗ ಈ ಕುಟುಂಬದ ಆಸ್ತಿ ವಿವಾದ ಕಾನೂನು ಹೋರಾಟದ ಹಂತಕ್ಕೆ ತಲುಪಿದೆ.

ವಿವಾದಕ್ಕೆ ಕಾರಣವೇನು?

1911ರಲ್ಲಿ ಸಣ್ಣ ಬಸ್ ಸೇವೆಯ ಮೂಲಕ ಆರಂಭವಾದ ಟಿವಿಎಸ್ ಉದ್ಯಮ ಸಮೂಹ ಇಂದು ಬೃಹತ್ ಉದ್ಯಮ ಸಾಮ್ರಾಜ್ಯವಾಗಿ ಬೆಳೆದಿದೆ. 2020ರಲ್ಲಿ ಟಿವಿಎಸ್ ಗ್ರೂಪ್‌ನ ಆಸ್ತಿಗಳನ್ನ ಕುಟುಂಬದ ನಾಲ್ಕು ಪ್ರಮುಖ ಶಾಖೆಗಳ ನಡುವೆ ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯಡಿ ವೇಣು ಶ್ರೀನಿವಾಸನ್ ಅವರ ಕುಟುಂಬಕ್ಕೆ ಟಿವಿಎಸ್ ಹೋಲ್ಡಿಂಗ್ಸ್, ಟಿವಿಎಸ್ ಮೋಟಾರ್ ಕಂಪನಿ, ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಮತ್ತು ಸುಂದರಂ-ಕ್ಲೇಟನ್ ಸಂಸ್ಥೆಗಳ ಷೇರುಗಳು ಹಾಗೂ ಆಸ್ತಿಗಳು ಬಂದಿದ್ದವು.

ಆದರೆ ಈ ಆಸ್ತಿಗಳಿಂದ ಸಿಗುವ ಲಾಭದಾಯಕ ಹಿತಾಸಕ್ತಿಗಳನ್ನ ತಮ್ಮ ಸಹೋದರ ಸುದರ್ಶನ್ ವೇಣು ಅವರ ಪರವಾಗಿ ಕೇಂದ್ರೀಕರಿಸಲಾಗಿದೆ ಎಂಬುದು ಲಕ್ಷ್ಮೀ ಅವರ ಪ್ರಮುಖ ಆರೋಪ. 2025ರ ಏಪ್ರಿಲ್‌ನಲ್ಲಿ ಸುದರ್ಶನ್ ಅವರನ್ನ ವಿಎಸ್ ಟ್ರಸ್ಟ್ ಮೂಲಕ ಟಿವಿಎಸ್ ಮೋಟಾರ್ ಕಂಪನಿಯ ಪ್ರಮುಖ ಫಲಾನುಭವಿ ಮಾಲೀಕ (Significant Beneficial Owner) ಎಂದು ಘೋಷಿಸಿದ್ದು, ಕುಟುಂಬದೊಳಗಿನ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಯಿತು.

ತಂದೆ-ಮಗ ಒಂದು ಕಡೆ, ತಾಯಿ-ಮಗಳು ಮತ್ತೊಂದು ಕಡೆ!

ಈ ವಿವಾದದಲ್ಲಿ ಕುಟುಂಬದ ಸದಸ್ಯರ ನಡುವೆ ಎರಡು ವಿಭಿನ್ನ ನಿಲುವುಗಳು ವ್ಯಕ್ತವಾಗಿವೆ. ವೇಣು ಶ್ರೀನಿವಾಸನ್ ಅವರ ಪ್ರಕಾರ, 2024ರ ಮಾರ್ಚ್‌ನಲ್ಲಿ ಕುಟುಂಬದ ನಾಲ್ವರು ಸದಸ್ಯರು ಸಹಿ ಹಾಕಿದ ತಿಳುವಳಿಕೆ ಪತ್ರದ (MoU) ಮೂಲಕ ಆಸ್ತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅದರಂತೆ ಪುತ್ರ ಸುದರ್ಶನ್ ಅವರಿಗೆ ಟಿವಿಎಸ್ ಮೋಟಾರ್ ಕಂಪನಿಯ ಜವಾಬ್ದಾರಿ ನೀಡಲಾಗಿದ್ದು, ಪುತ್ರಿ ಲಕ್ಷ್ಮೀ ಅವರಿಗೆ ಸುಂದರಂ-ಕ್ಲೇಟನ್ ಸಂಸ್ಥೆಯ ಆಡಳಿತವನ್ನ ವಹಿಸಲಾಗಿದೆ. ಹೀಗಾಗಿ ಈ ಹಂಚಿಕೆ ನ್ಯಾಯಸಮ್ಮತವಾಗಿದೆ ಎಂಬುದು ತಂದೆ ಮತ್ತು ಮಗನ ನಿಲುವು.

ಆದರೆ ಇದಕ್ಕೆ ಲಕ್ಷ್ಮೀ ವೇಣು ಮತ್ತು ಮಲ್ಲಿಕಾ ಶ್ರೀನಿವಾಸನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2024ರ ಒಪ್ಪಂದವು ಬ್ರ್ಯಾಂಡ್ ಬಳಕೆ, ಟ್ರೇಡ್‌ಮಾರ್ಕ್ ಮತ್ತು ಸ್ಪರ್ಧಾತ್ಮಕವಲ್ಲದ ನಿಯಮಗಳಿಗೆ (Non-compete) ಮಾತ್ರ ಸಂಬಂಧಿಸಿದ್ದಾಗಿದೆ. ಆಸ್ತಿಗಳ ಮೌಲ್ಯಮಾಪನ ಮಾಡಿ ಆರ್ಥಿಕವಾಗಿ ಸಮಾನ ಹಂಚಿಕೆ ಮಾಡುವ ಒಪ್ಪಂದ ಅದಾಗಿರಲಿಲ್ಲ ಎಂಬುದು ಅವರ ವಾದ. ಕೇವಲ ಕಂಪನಿಯ ಆಡಳಿತದ ಜವಾಬ್ದಾರಿ ನೀಡುವುದರಿಂದ ಆ ಕಂಪನಿಯ ಮಾಲೀಕತ್ವದ ಹಕ್ಕು ಸಿಗುವುದಿಲ್ಲ ಎಂದು ಲಕ್ಷ್ಮೀ ಪ್ರತಿಪಾದಿಸಿದ್ದಾರೆ.

ಹೆಣ್ಣುಮಕ್ಕಳಿಗೂ ಸಮಾನ ಆಸ್ತಿ ಹಕ್ಕು

2005ರಲ್ಲಿ ತಿದ್ದುಪಡಿಯಾದ 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 6 ಅನ್ನ ಉಲ್ಲೇಖಿಸಿರುವ ಲಕ್ಷ್ಮೀ ವೇಣು, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರರಿಗೆ ಇರುವಷ್ಟೇ ಹಕ್ಕು ಪುತ್ರಿಯರಿಗೂ ಇದೆ ಎಂದು ಹೇಳಿದ್ದಾರೆ. ಕಾನೂನಿನ ಮುಂದೆ ಪಿತೃಪ್ರಧಾನ ಧೋರಣೆಗೆ ಅವಕಾಶವಿಲ್ಲ ಮತ್ತು ಏಕಪಕ್ಷೀಯ ನಿರ್ಧಾರಗಳಿಂದ ಹೆಣ್ಣುಮಕ್ಕಳ ಹಕ್ಕುಗಳನ್ನ ನಿರಾಕರಿಸಲು ಸಾಧ್ಯವಿಲ್ಲ ಎಂಬುದು ಅವರ ವಾದ. ಮಗಳು ಲಕ್ಷ್ಮೀ ಪರವಾಗಿ ಮಾತನಾಡಿರುವ ಮಲ್ಲಿಕಾ ಶ್ರೀನಿವಾಸನ್, ಮಗ ಮತ್ತು ಮಗಳು ಇಬ್ಬರೂ ಸಮಾನರು ಎಂದು ಹೇಳಿದ್ದಾರೆ. ಸುದರ್ಶನ್‌ಗೆ ಸಿಗುವಷ್ಟೇ ನ್ಯಾಯಯುತ ಪಾಲು ಲಕ್ಷ್ಮೀಗೂ ಕುಟುಂಬದ ಆಸ್ತಿಯಲ್ಲಿ ದೊರೆಯಬೇಕು ಎಂಬುದು ಅವರ ಅಭಿಪ್ರಾಯ.

ಟಾಫೆ ಕಂಪನಿಗೂ ಈ ವಿವಾದಕ್ಕೂ ಸಂಬಂಧವಿಲ್ಲ!

ಈ ಪ್ರಕರಣದಲ್ಲಿ ಟಾಫೆ ಕಂಪನಿಯ ವಿಚಾರವೂ ಚರ್ಚೆಗೆ ಬಂದಿದೆ. ಮಲ್ಲಿಕಾ ಶ್ರೀನಿವಾಸನ್ ಟಾಫೆ ಕಂಪನಿಯ ಅಧ್ಯಕ್ಷೆಯಾಗಿದ್ದು, ಲಕ್ಷ್ಮೀ ವೇಣು ಅದರ ಉಪಾಧ್ಯಕ್ಷೆಯಾಗಿದ್ದಾರೆ. ಆದರೆ ಟಾಫೆ ಸಂಸ್ಥೆ ಟಿವಿಎಸ್ ಗ್ರೂಪ್‌ಗೆ ಸೇರಿದ್ದಲ್ಲ. ಅದು ಮಲ್ಲಿಕಾ ಶ್ರೀನಿವಾಸನ್ ಅವರ ತಂದೆಯ ಕಡೆಯ ಉದ್ಯಮವಾಗಿದೆ. ಹೀಗಾಗಿ ಲಕ್ಷ್ಮೀ ಈಗ ಕೇಳುತ್ತಿರುವ ಟಿವಿಎಸ್ ಕುಟುಂಬದ ಆಸ್ತಿ ಹಂಚಿಕೆಯಲ್ಲಿ ಟಾಫೆ ಕಂಪನಿಗೆ ಸಂಬಂಧವಿಲ್ಲ.

ಟಿವಿಎಸ್ ಸಾಮ್ರಾಜ್ಯದ ಕುಟುಂಬ ಹಿನ್ನೆಲೆ

ಟಿವಿಎಸ್ ಸಮೂಹದ ಸ್ಥಾಪಕ ಟಿವಿ ಸುಂದರಂ ಅಯ್ಯಂಗಾರ್ ಅವರಿಗೆ ಐವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳಿದ್ದರು. ಹಿರಿಯ ಪುತ್ರ ಟಿಎಸ್ ದೊರೈಸ್ವಾಮಿ ಅಲ್ಪವಯಸ್ಸಿನಲ್ಲೇ ಮೃತಪಟ್ಟಿದ್ದರು. ಉಳಿದ ನಾಲ್ವರು ಪುತ್ರರಾದ ಟಿಎಸ್ ರಾಜಂ, ಟಿಎಸ್ ಕೃಷ್ಣ, ಟಿಎಸ್ ಸಂತಾನಂ ಮತ್ತು ಟಿಎಸ್ ಶ್ರೀನಿವಾಸನ್ ಅವರಿಗೆ ಉದ್ಯಮಗಳನ್ನ ಹಂಚಲಾಗಿತ್ತು. ಈ ಕುಟುಂಬದ ಉದ್ಯಮಗಳು ಬೆಳೆಯುತ್ತಾ ಬಂದಿದ್ದು, ಟಿವಿಎಸ್ ಸಮೂಹದ ಅಡಿಯಲ್ಲಿ ಸುಮಾರು 50 ಕಂಪನಿಗಳಿವೆ. ಟಿಎಸ್ ಶ್ರೀನಿವಾಸನ್ ಅವರ ಮೂವರು ಮಕ್ಕಳಾದ ವೇಣು ಶ್ರೀನಿವಾಸನ್, ಗೋಪಾಲ್ ಶ್ರೀನಿವಾಸನ್ ಮತ್ತು ಶೀಲಾ ಅವರಿಗೆ ವಿವಿಧ ಉದ್ಯಮಗಳನ್ನ ಹಂಚಲಾಗಿತ್ತು. ಮೂವರೂ ತಮ್ಮ ತಮ್ಮ ಉದ್ಯಮಗಳನ್ನ ಪ್ರತ್ಯೇಕವಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ವೇಣು ಶ್ರೀನಿವಾಸನ್ ಅವರ ಕುಟುಂಬದಲ್ಲೇ ಆಸ್ತಿ ಹಂಚಿಕೆ ವಿವಾದ ಎದುರಾಗಿದೆ.

ಕಾನೂನು ಹೋರಾಟದ ಸೂಚನೆ; ಸಂಧಾನಕ್ಕೂ ಆಸಕ್ತಿ

ಎರಡೂ ಕಡೆಯವರು ಚೆನ್ನೈ ನ್ಯಾಯಾಲಯಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇವಿಯಟ್ ಅರ್ಜಿಗಳನ್ನ ಸಲ್ಲಿಸಿದ್ದಾರೆ. ಇದರಿಂದ ಪ್ರಕರಣ ಕಾನೂನು ಹೋರಾಟದತ್ತ ಸಾಗುವ ಸಾಧ್ಯತೆ ಎದುರಾಗಿದೆ. ಆದರೂ ಕುಟುಂಬದ ಗೌರವ ಮತ್ತು ಎಲ್ಲರ ಹಿತಾಸಕ್ತಿಯನ್ನ ಕಾಪಾಡುವ ನಿಟ್ಟಿನಲ್ಲಿ ಪಾರದರ್ಶಕ ಮಾತುಕತೆ ಮೂಲಕ ವಿವಾದವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಆಶಯವನ್ನ ಲಕ್ಷ್ಮೀ ಮತ್ತು ಮಲ್ಲಿಕಾ ವ್ಯಕ್ತಪಡಿಸಿದ್ದಾರೆ. ಟಿವಿಎಸ್‌ನಂತಹ ಪ್ರತಿಷ್ಠಿತ ಉದ್ಯಮ ಕುಟುಂಬದ ಆಸ್ತಿ ಹಂಚಿಕೆ ವಿವಾದ ಇದೀಗ ಉದ್ಯಮ ವಲಯದ ಗಮನ ಸೆಳೆದಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES