SOCIAL MEDIA

Newsletter

PARTNER SITES
Select Language Select State

ಜನಸಾಮಾನ್ಯರಿಗೆ ಭರ್ಜರಿ ಸಿಹಿಸುದ್ದಿ! ದೀಪಾವಳಿಗೂ ಮುನ್ನ ಸಕ್ಕರೆ ಬೆಲೆ ಇಳಿಕೆಗೆ ಕೇಂದ್ರದ ಮಾಸ್ಟರ್‌ಪ್ಲಾನ್‌!

ದೀಪಾವಳಿ ಹಬ್ಬಕ್ಕೂ ಮುನ್ನ ಸಕ್ಕರೆ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ 14 ಲಕ್ಷ ಟನ್ ಸಕ್ಕರೆ ಮಾರಾಟಕ್ಕೆ ಅನುಮತಿ ನೀಡಿದೆ. ಕರ್ನಾಟಕಕ್ಕೆ 2.32 ಲಕ್ಷ ಟನ್ ಹಂಚಿಕೆಯಾಗಿದ್ದು, ವ್ಯಾಪಾರಿಗಳ ದಾಸ್ತಾನು ಮಿತಿಯನ್ನೂ ಬಿಗಿಗೊಳಿಸಲಾಗಿದೆ. ಇದರಿಂದ ಸಕ್ಕರೆ ಬೆಲೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ.

Written By Puttaraj K Alur
Published: Oct 14, 2026, 02:58 PM IST | Updated: Oct 14, 2026, 03:03 PM IST
Image Credit: Sugar Price Update
Join

Sugar Price Update: ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಸಕ್ಕರೆ ಬೆಲೆ ಏರಿಕೆಯ ಆತಂಕ ಎದುರಾಗಿದೆ. ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗಳ ತಯಾರಿಕೆ ಹೆಚ್ಚಾಗುವುದರಿಂದ ಸಕ್ಕರೆಗೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಪೂರೈಕೆಯನ್ನ ಸುಗಮಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ ತಿಂಗಳ ದ್ವಿತೀಯಾರ್ಧದಲ್ಲಿ ದೇಶೀಯ ಮಾರುಕಟ್ಟೆಗೆ 14 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ಹಬ್ಬದ ಸಂದರ್ಭದಲ್ಲಿ ಸಕ್ಕರೆ ಕೊರತೆ ಉಂಟಾಗದಂತೆ ತಡೆಯುವ ಜೊತೆಗೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ನಿಗದಿತ ಅವಧಿಗೂ ಮುನ್ನ ಸಕ್ಕರೆ ಬಿಡುಗಡೆ

ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಅಕ್ಟೋಬರ್ 13ರಿಂದ 31ರವರೆಗಿನ ಅವಧಿಗೆ 14 ಲಕ್ಷ ಟನ್ ಸಕ್ಕರೆಯ ಮಾರಾಟ ಕೋಟಾವನ್ನ ನಿಗದಿಪಡಿಸಿದೆ. ವಿಶೇಷವೆಂದರೆ ನಿಗದಿತ ವೇಳಾಪಟ್ಟಿಗಿಂತ ಎರಡು ದಿನ ಮುಂಚಿತವಾಗಿಯೇ ಈ ನಿರ್ಧಾರ ಪ್ರಕಟಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳ ಮಾರಾಟ ದರದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಕಾರ್ಖಾನೆ ಹಂತದ ಸಕ್ಕರೆ ಬೆಲೆ ಕ್ವಿಂಟಲ್‌ಗೆ ಸುಮಾರು ₹1,000 ಏರಿಕೆಯಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಹಬ್ಬದ ಬೇಡಿಕೆ ಹೆಚ್ಚಾಗುವ ಮುನ್ನವೇ ಮಾರುಕಟ್ಟೆಗೆ ಹೆಚ್ಚಿನ ಸಕ್ಕರೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕಕ್ಕೂ ದೊಡ್ಡ ಪ್ರಮಾಣದ ಸಕ್ಕರೆ ಹಂಚಿಕೆ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಕ್ಕರೆ ಕೋಟಾದಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ಹೆಚ್ಚಿನ ಪಾಲು ದೊರೆತಿದೆ. ಈ ಮೂರು ರಾಜ್ಯಗಳಿಗೆ ಒಟ್ಟು 11.59 ಲಕ್ಷ ಟನ್ ಸಕ್ಕರೆ ಹಂಚಿಕೆ ಮಾಡಲಾಗಿದ್ದು, ಇದು ಒಟ್ಟು ಕೋಟಾದ ಸುಮಾರು ಶೇ.83ರಷ್ಟಾಗಿದೆ. ಮಹಾರಾಷ್ಟ್ರಕ್ಕೆ 4.76 ಲಕ್ಷ ಟನ್, ಉತ್ತರ ಪ್ರದೇಶಕ್ಕೆ 4.51 ಲಕ್ಷ ಟನ್ ಹಾಗೂ ಕರ್ನಾಟಕಕ್ಕೆ 2.32 ಲಕ್ಷ ಟನ್ ಸಕ್ಕರೆ ಹಂಚಿಕೆಯಾಗಿದೆ. ಪ್ರಮುಖ ಸಕ್ಕರೆ ಉತ್ಪಾದನಾ ರಾಜ್ಯವಾಗಿರುವ ಕರ್ನಾಟಕಕ್ಕೂ ಈ ನಿರ್ಧಾರ ಮಹತ್ವದ್ದಾಗಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಮಾರುಕಟ್ಟೆಗೆ ಪೂರೈಕೆ ಸುಗಮವಾಗಲು ಈ ಹಂಚಿಕೆ ನೆರವಾಗಬಹುದು. 

ದೇಶದಲ್ಲಿ ಈಗ ಒಂದು ಕೆಜಿ ಸಕ್ಕರೆ ಬೆಲೆ ಎಷ್ಟು?

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 13ರಂದು ದೇಶದ ಸರಾಸರಿ ಚಿಲ್ಲರೆ ಸಕ್ಕರೆ ಬೆಲೆ ಕೆಜಿಗೆ ₹56.67ರಷ್ಟಿತ್ತು. ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಸರಾಸರಿ ₹5,254.91 ದರ ದಾಖಲಾಗಿದೆ. ಆದರೆ ಈ ದರಗಳು ದೇಶದ ಸರಾಸರಿ ಬೆಲೆಗಳಾಗಿದ್ದು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಅಂಗಡಿ, ಪ್ರದೇಶ ಹಾಗೂ ಸ್ಥಳೀಯ ಪೂರೈಕೆಗೆ ಅನುಗುಣವಾಗಿ ಬೆಲೆಗಳಲ್ಲಿ ವ್ಯತ್ಯಾಸವಿರಬಹುದು. ಹೆಚ್ಚುವರಿ ಸಕ್ಕರೆ ಬಿಡುಗಡೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಇದರಿಂದ ತಕ್ಷಣವೇ ಚಿಲ್ಲರೆ ಅಂಗಡಿಗಳಲ್ಲಿ ಬೆಲೆ ಇಳಿಕೆಯಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಸಕ್ಕರೆ ದಾಸ್ತಾನು ಮಾಡುವ ವ್ಯಾಪಾರಿಗಳಿಗೆ ಹೊಸ ನಿಯಮ

ಸಕ್ಕರೆ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಪೂರೈಕೆ ಹೆಚ್ಚಿಸುವುದರ ಜೊತೆಗೆ ದಾಸ್ತಾನು ಮಿತಿಯನ್ನೂ ಬಿಗಿಗೊಳಿಸಿದೆ. ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಸಕ್ಕರೆ ವ್ಯಾಪಾರಿಗಳು ಗರಿಷ್ಠ 1,000 ಕ್ವಿಂಟಲ್ ಸಕ್ಕರೆ ಮಾತ್ರ ದಾಸ್ತಾನು ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ ಸ್ವೀಕರಿಸಿದ ಸಕ್ಕರೆಯನ್ನ 15 ದಿನಗಳಿಗಿಂತ ಹೆಚ್ಚು ಕಾಲ ದಾಸ್ತಾನು ಇಟ್ಟುಕೊಳ್ಳುವಂತಿಲ್ಲ. ಈ ನಿಯಮವು ಕೋಲ್ಕತ್ತಾ ಮತ್ತು ಅದರ ವಿಸ್ತೃತ ಮಹಾನಗರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸುವ ಪ್ರಯತ್ನಗಳನ್ನ ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ. 

ಸಕ್ಕರೆ ಬೆಲೆ ಏರಿಕೆಗೆ ಕಾರಣವೇನು?

ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಗೆ ಹಲವು ಅಂಶಗಳು ಕಾರಣವಾಗಿವೆ. ನಿರೀಕ್ಷೆಗಿಂತ ಕಡಿಮೆ ಉತ್ಪಾದನೆ, ಕಬ್ಬಿನ ಬೆಳೆಗೆ ಹವಾಮಾನದಿಂದ ಉಂಟಾದ ಹಾನಿ, ಹಬ್ಬದ ಬೇಡಿಕೆ ಹಾಗೂ ಕೆಲವು ವ್ಯಾಪಾರಿಗಳ ಮುನ್ನೆಚ್ಚರಿಕೆಯ ದಾಸ್ತಾನು ಹೆಚ್ಚಳ ಪ್ರಮುಖ ಕಾರಣಗಳಾಗಿವೆ. ಈ ಹಿಂದೆ ಕೇಂದ್ರ ಸರ್ಕಾರವು ದೇಶೀಯ ಪೂರೈಕೆಯನ್ನ ಹೆಚ್ಚಿಸಲು 10 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯ ಸುಂಕಮುಕ್ತ ಆಮದಿಗೂ ಅವಕಾಶ ನೀಡಿತ್ತು. ಇದೀಗ ಹೆಚ್ಚುವರಿ ಮಾರಾಟ ಕೋಟಾ ಬಿಡುಗಡೆ ಮಾಡುವ ಮೂಲಕ ಬೆಲೆ ಸ್ಥಿರತೆಗೆ ಮತ್ತೊಂದು ಕ್ರಮ ಕೈಗೊಂಡಿದೆ. 

ಸಾಮಾನ್ಯ ಜನರಿಗೆ ಎಷ್ಟು ಪ್ರಯೋಜನ?

ದೀಪಾವಳಿ ಸಂದರ್ಭದಲ್ಲಿ ಸಿಹಿತಿಂಡಿ ಅಂಗಡಿಗಳು, ಬೇಕರಿಗಳು, ಹೋಟೆಲ್‌ಗಳು ಮತ್ತು ಮನೆಗಳಲ್ಲಿ ಸಕ್ಕರೆಯ ಬಳಕೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಬೆಲೆ ಏರಿಕೆಯಾದರೆ ಕುಟುಂಬಗಳ ಖರ್ಚಿನ ಮೇಲೂ ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರದ ಹೊಸ ಕ್ರಮದಿಂದ ಸಕ್ಕರೆ ಪೂರೈಕೆ ಹೆಚ್ಚಾಗಿ ಬೆಲೆ ಸ್ಥಿರಗೊಳ್ಳುವ ಸಾಧ್ಯತೆಯಿದೆ. ಆದರೆ ಅದರ ನೇರ ಪ್ರಯೋಜನ ಗ್ರಾಹಕರಿಗೆ ತಲುಪಬೇಕಾದರೆ ಸಗಟು ಮಾರುಕಟ್ಟೆಯಲ್ಲಿನ ಬೆಲೆ ಬದಲಾವಣೆ ಚಿಲ್ಲರೆ ಮಾರುಕಟ್ಟೆಯಲ್ಲೂ ಪ್ರತಿಫಲಿಸಬೇಕು. ಒಟ್ನಲ್ಲಿ ಹಬ್ಬದ ಸಂದರ್ಭದಲ್ಲಿ ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನ ಮುಂದಿನ ದಿನಗಳ ಮಾರುಕಟ್ಟೆ ದರಗಳು ನಿರ್ಧರಿಸಲಿವೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES