ಷೆೇರುಪೆೇಟೆಯ ಚಟುವಟಿಕೆಗಳು ಇತ್ತೇಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ದಿನನಿತ್ಯ ಒಂದು ಲಕ್ಷಕ್ಕೂ ಹೆಚ್ಚಿನ ಜನಸಾಮಾನ್ಯರನ್ನು ಆಕರ್ಷಿಸುತ್ತದೆ. ಇದರಲ್ಲಿ ಬಹಳಷ್ಟು ಜನರಿಗೆ ಷೆೇರುಪೆೇಟೆ ಕಾರ್ಯ ನಿರ್ವಹಿಸುವ ಶೈಲಿಯಾಗಲಿ, ಷೇರು ಕೊಳ್ಳುವ ಕಂಪನಿಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದರ ಅಗತ್ಯವಾಗಲಿ, ಷೆೇರಿನ ಬೆಲೆಗಳಲ್ಲಿ ಕಂಡುಬರುವ ಏರಿಳಿತಗಳ ಹಿಂದೆ ಅಡಕವಾಗಿರುವ ವೇಗೋತ್ಕರ್ಷಗಳ ಬಗ್ಗೆ, ಅಷ್ಟೇ ಅಲ್ಲದೆ ಷೇರುಗಳ ಸ್ವರೂಪದ ಬಗ್ಗೆಯೇ ಅರಿಯಬೇಕೆಂಬ ಚಿಂತನೆಗಳೂ ಇರಲಾರದು. ಎಲ್ಲದಕ್ಕೂ ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಂಶಗಳನ್ನಾಧರಿಸಿ ಹೆಚ್ಚಿನ ಬಾರಿ ತೇಲಿಬರುವ ʼಟಿಪ್ಸ್ʼಗಳನ್ನಾಧರಿಸಿ ತಮ್ಮ ಅಮೂಲ್ಯವಾದ ಸಂಪನ್ನೂಲವನ್ನು ತೊಡಗಿಸುವ ಹವ್ಯಾಸ ಹೊಂದಿರುತ್ತಾರೆ.
ಬದಲಾಗುತ್ತಿರುವ ಪರಿಸ್ಥಿತಿಯ ಲಾಭ ಹೇಗೆ? ಯಾರಿಗೆ?
2013ರ ಫೆಬ್ರವರಿಯಲ್ಲಿ ಸಾಯಿ ಸಿಲ್ಕ್ (ಕಲಾಮಂದಿರ್) ಲಿಮಿಟೆಡ್ ಕಂಪನಿ ಪ್ರತಿ ರೂ.10ರ ಮುಖಬೆಲೆ ಷೇರಿಗೆ ರೂ.70 ರಿಂದರೂ.75ರ ಅಂತರದಲ್ಲಿ ಐಪಿಒ ವಿತರಣೆ ಮಾಡಿತು. ಒಟ್ಟಾರೆ ಸಂಗ್ರಹಣೆ ಶೇ.0.87 ರಷ್ಟು ಸಂಗ್ರಹವಾದರೆ, ರೀಟೇಲ್ ಭಾಗವು 1.31 ರಷ್ಟು ಹೆಚ್ಚು ಪಡೆದುಕೊಂಡಿತು. ಈ ಮಟ್ಟದ ಸಂಗ್ರಹಣೆಯು ವಿತರಣೆಯು ಯಶಸ್ವಿಯಾಗಿದೆ ಎಂದು ಮುಂದುವರೆಯಲು ಸಾಕಾಗಿತ್ತು. ಆದರೂ ಕಂಪನಿಯು ಐಪಿಒ ಹಿಂಪಡೆಯಿತು. ಇದಕ್ಕೆ ಪ್ರಮುಖ ಕಾರಣ ಕಂಪನಿಯು ವಿತರಣೆಯಲ್ಲಿ, ಸೇಫ್ಟಿ ನೆಟ್ ಒದಗಿಸುವ ಆಶ್ವಾಸನೆ ಒಳಗೊಂಡಿತ್ತು. ಅಂದರೆ ಲಿಸ್ಟಿಂಗ್ ಆದ ನಂತರ ಆರು ತಿಂಗಳವರೆಗೆ, ಕಂಪನಿಯ ಷೇರಿನ ಬೆಲೆ ಏನಾದರೂ ವಿತರಣೆ ಬೆಲೆಗಿಂತ ಕಡಿಮೆಯಾದಲ್ಲಿ, ರೀಟೇಲ್ ಹೂಡಿಕೆದಾರರು ಇಚ್ಚಿಸಿದಲ್ಲಿ ವಿತರಣೆ ಬೆಲೆಯಲ್ಲಿ ಹಿಂಕೊಳ್ಳುವುದಾಗಿ ಕಂಪನಿ ತನ್ನ ಆರ್ ಹೆಚ್ ಪಿ ಯಲ್ಲಿ ತಿಳಿಸಿತ್ತು. ಆದರೆ ಕೇವಲ ರೀಟೇಲ್ ಭಾಗಮಾತ್ರ ಶೇ.1.31 ರಷ್ಟು ಸಣ್ಣ ಹೂಡಿಕೆದಾರರ ಅಭೂತ ಪೂರ್ವ ಬೆಂಬಲದಿಂದ ವಿಜೃಂಭಿಸಿತು. QIB ಭಾಗವು ಅಲ್ಪಮಟ್ಟದಲ್ಲಿದ್ದ ಕಾರಣ ಲಿಸ್ಟಿಂಗ್ ಆದ ಮೇಲೆ ಷೇರಿನ ಬೆಲೆ ಕುಸಿತ ಕಂಡರೆ ಶೇ.1.31 ರವರೆಗೂ ಕಂಪನಿಯು ರೀಟೇಲ್ ಷೇರುದಾರರು ಇಚ್ಚಿಸಿದಲ್ಲಿ ವಿತರಣೆ ಬೆಲೆಯಲ್ಲಿ ಹಣ ಹಿಂದಿರುಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಸಣ್ಣ (Retail) ಹೂಡಿಕೆದಾರರಿಂದ ಷೇರನ್ನು ವಿತರಣೆ ಬೆಲೆಯಲ್ಲಿ ಹಿಂದಕ್ಕೆ ಪಡೆಯಬೇಕಾಗುವ ವ್ಯವಸ್ಥೆಯೇ ಸೇಫ್ಟಿ ನೆಟ್. ಈ ಎಲ್ಲಾ ವಿಚಾರಗಳನ್ನಾಧರಿಸಿ ಕಂಪನಿಯು ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ರವರೊಂದಿಗೆ ವಿಚಾರ ಮಾಡಿ ಐಪಿಒ ವಿರತಣೆಯನ್ನು ರದ್ದುಗೊಳಿಸಿತು. ಅಂದರೆ ಅಗಿದ್ದ 'ಸೇಫ್ಟಿ ನೆಟ್' ಸವಲತ್ತು ಒಂದು ರೀತಿ ಸಾಮಾನ್ಯರ ಹಿತ ಕಾಪಾಡುವ ಅಸ್ತ್ರವಾಗಿತ್ತು. ಆದರೆ 2018ರಲ್ಲಿ ಸೆಬಿ ಈ ಸೇಫ್ಟಿ ನೆಟ್ ವ್ಯವಸ್ಥೆಯನ್ನು ಹಿಂಪಡೆಯಿತು. ಈಗ ಆ ರೀತಿಯ ಸವಲತ್ತು ಲಭ್ಯವಿಲ್ಲ.
ಸುಮಾರು 10 ವರ್ಷಗಳ ನಂತರ ಅಂದರೆ 2023ರ ಸೆಪ್ಟೆಂಬರ್ ನಲ್ಲಿ ಇದೇ ಕಂಪನಿಯು ಅಂದಿನ ರೂ.89 ಕೋಟಿಗೆ ಬದಲಾಗಿ ರೂ.1,201 ಕೋಟಿ ಮೌಲ್ಯದ ಷೇರುಗಳನ್ನು ವಿತರಣೆ ಮಾಡಿ ಯಶಸ್ವಿಯಾಗಿ ಲಿಸ್ಟಿಂಗ್ ಮಾಡಿಕೊಂಡು ವಿಜೃಂಭಿಸಿದೆ. ಹತ್ತುವರ್ಷಗಳ ಹಿಂದೆ ರೂ.10 ರ ಮುಖಬೆಲೆ ಷೇರನ್ನು ರೂ.75 ರಂತೆ ವಿತರಣೆ ಮಾಡಲು ಪ್ರಯತ್ನಿಸಿ ಕಾರಣಾಂತರಗಳಿಂದ ಹಿಂದೆ ಸರಿದ ಕಂಪನಿ ಈಗ ರೂ.2 ರ ಮುಖಬೆಲೆಯ ಷೇರನ್ನು ರೂ.222 ರಂತೆ ವಿತರಿಸಲು ಯಶಸ್ವಿಯಾಯಿತು. ಅಂದರೆ ರೂ.10 ರ ಮುಖಬೆಲೆಯ ಷೇರನ್ನು ರೂ.1,110 ರಂತೆ ಪಡೆದಂತೆ. ಹತ್ತು ವರ್ಷಗಳಲ್ಲಿ ರೂ.75 ಬದಲಿಗೆ ರೂ.1,110 ನ್ನು ಸಂಪಾದಿಸಿ ಕೊಟ್ಟ ವಿಸ್ಮಯಕಾರಿ ಅಂಶದ ಹಿಂದೆ ಇಂದು ಷೇರುಪೇಟೆಗೆ ಹರಿದುಬರುತ್ತಿರುವ ಸಂಪನ್ಮೂಲದ ಕಾರಣದೊಂದಿಗೆ ಸಣ್ಣ ಹೂಡಿಕೆದಾರರಲ್ಲಿರುವ ಮಾಹಿತಿಯ ಕೊರತೆಯೂ ಕಾರಣವಾಗಿದೆ. ಪೇಟೆಯ ನಿಯಂತ್ರಕರ ಎಚ್ಚರಿಕೆ ನುಡಿ: 'ಅರಿತು ಹೂಡಿಕೆ ಮಾಡಿ ಅನುಸರಿಸಬೇಡಿ' ಎಂಬುದು ಎಷ್ಟರಮಟ್ಟಿಗೆ ಸಮಂಜಸ ಎಂಬುದು ಎತ್ತಿತೋರುತ್ತದೆ.
ಈ ಷೇರಿನ ಬೆಲೆ 2026 ರ ಸೆಪ್ಟೆಂಬರ್ 25 ರಂದು ರೂ.77 ರ ಸಮೀಪವಿದೆ. ಈ ಷೇರು ಲೀಸ್ಟಿಂಗ್ ಆದ ನಂತರ ನವೆಂಬರ್ 2023ರಲ್ಲಿ ರೂ.311 ರವರೆಗೂ ಏರಿಕೆ ಕಂಡು, ಬಳಿಕ ನಿರಂತರವಾಗಿ ಇಳಿಕೆಯತ್ತ ಸಾಗಿತು. 2025 ರ ಅಕ್ಟೋಬರ್ ನಲ್ಲಿ ರೂ.223 ರ ಗರಿಷ್ಟದಲ್ಲಿದ್ದು, ಈಗ ರೂ.77 ರ ವಾರ್ಷಿಕ ಕನಿಷ್ಠದವರೆಗೂ ಕುಸಿದಿದೆ. ಆದರೆ ಪರಿಸ್ಥಿತಿಯ ಲಾಭಪಡೆದುಕೊಂಡವರು ಸಿರಿವಂತ ಸಂಸ್ಥೆಗಳು, ಈ ಕುಸಿತಕ್ಕೊಳಗಾಗಿದ್ದು ಇದಕ್ಕೆ ಬಲಿಯಾಗಿದ್ದರಲ್ಲಿ ಹೆಚ್ಚಿನವರು ಸಣ್ಣ ಹೂಡಿಕೆದಾರರಾಗಿರುತ್ತಾರೆ.
ಆದರೆ ಒಂದಂತೂ ಗಮನಿಸಲೇ ಬೇಕು. 2020 ರಲ್ಲಿ ಷೇರುಪೇಟೆಯ ಚಟುವಟಿಕೆಗೆ ತೊಡಗಿಸಿಕೊಳ್ಳಲು ಸುಮಾರ 5 ಕೋಟಿ ರೀಟೇಲರ್ (ಜನಸಾಮಾನ್ಯರು) ನೋಂದಾಯಿಸಿಕೊಂಡಿದ್ದರು. ಈಗ ಆ ಸಂಖ್ಯೆಯು ಸುಮಾರು ಇಪ್ಪತ್ತಾರೂವರೆ ಕೋಟಿ ಸಮೀಪವಿದೆ. ಈ ಏರಿಕೆಗನುಗುಣವಾಗಿ ವಹಿವಾಟಿಗೆ ಲಭ್ಯವಿರುವ ಕಂಪನಿಗಳ ಸಂಖ್ಯೆಯಲ್ಲಿ ಮಹತ್ತರವಾದ ಬದಲಾವಣೆಯ ಇಲ್ಲ. ಹಾಗಾಗಿ ಕೃತಕಮಯ ವಾತಾವರಣಕ್ಕೆ ದಾರಿಯೂ ಅಗಿದೆ.
ಸಾಯಿ ಸಿಲ್ಕ್ ಕಲಾಮಂದಿರ್ ಲಿಮಿಟೆಡ್ ಕಂಪನಿಯಲ್ಲಿ 2024ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸುಮಾರು 53 ಸಾವಿರ ಸಣ್ಣ ಹೂಡಿಕೆದಾರರಿದ್ದರೆ, 2025 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸುಮಾರು 61 ಸಾವರಕ್ಕೂ ಹೆಚ್ಚಿನ ಸಣ್ಣ ಹೂಡಿಕೆದಾರರಿದ್ದರು. ಜೂನ್ 2026 ರ ತ್ರೈಮಾಸಿಕದ ಅಂತ್ಯದಲ್ಲಿ 54 ಸಾವಿರದ ಹಂತಕ್ಕೆ ಕುಸಿದಿದೆ. ಸತತವಾಗಿ ಕುಸಿತ ಕಾಣುತ್ತಿರುವುದನ್ನು ಕಂಡ ಸಣ್ಣಹೂಡಿಕೆದಾರರು ಭ್ರಮನಿರಸನದಿಂದ ನಿರ್ಗಮಿಸಿರಬಹುದು.
ಹಾಗೆಯೇ ಈ ಅಲ್ಪಬಡ್ಡಿದರದ ಯುಗದಲ್ಲಿ, ಅಲ್ಪಸಮಯದಲ್ಲೇ ಉತ್ತಮ ಲಾಭದ ಇಳುವರಿಯ ನಿರೀಕ್ಷೆಯಿಂದ ಷೇರುಪೇಟೆಗೆ ಹರಿದುಬರುತ್ತಿರುವ ಸಂಪನ್ಮೂಲವೂ ಅಗಾಧ ಪ್ರಮಾಣದಲ್ಲಿರುವುದರಿಂದ ಈ ಸೇಫ್ಟಿ ನೆಟ್ ನಿಯಮ ಮತ್ತೊಮ್ಮೆ ಜಾರಿಗೊಳಿಸಿದಲ್ಲಿ ಕಂಪನಿಗಳ ಅಸಹಜ ಪ್ರೀಮಿಯಂ ಹಾವಳಿಗೆ ತಡೆಯೊಡ್ಡಿ ಅಮಾಯಕ ಸಣ್ಣ ಹೂಡಿಕೆದಾರರು ತಮ್ಮ ಭ್ರಮಾಲೋಕದಿಂದ ಸಹಜತೆಗೆ ಮರಳುವಂತೆ ಮಾಡಲು ಸಾಧ್ಯವಾಗುತ್ತದೆ.
ಕಂಪನಿಯು 2024 ರಲ್ಲಿ, 2025 ರಲ್ಲಿ ಪ್ರತಿ ಷೇರಿಗೆ ರೂ.1 ರಂತೆ ಲಾಭಾಂಶವನ್ನು ವಿತರಿಸಿದೆ, 2026 ರಲ್ಲಿ ರೂ.1.50 ಯಂತೆ ಲಾಭಾಂಶ ವಿತರಿಸಿದೆ.
ನೆನಪಿರಲಿ ಭಾರತದ ಪೇಟೆಯ ಗಾತ್ರವು, ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿರುವ 141 ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ವಿದೇಶಿಗರು, ವಿದೇಶೀ ವಿತ್ತೀಯ ಸಂಸ್ಥೆಗಳನ್ನಾಕರ್ಷಿಸುವ ಅಂಶವಾಗಿದೆ. ಡಿಸ್ಕೊಂಟ್, ರಿಬೇಟ್ ಗಳ ನಮ್ಮ ವ್ಯಾಮೋಹವು ಈ ಸಂಸ್ಥೆಗಳಿಗೆ ಅಪೂರ್ವ ಅವಕಾಶವಾಗಿದೆ. ನಮ್ಮ ದುರ್ಬಲತೆಯನ್ನರಿತು, ಸಹಜ ಅಂಶಗಳಿಗೆ ಆದ್ಯತೆ ಕೊಟ್ಟಲ್ಲಿ ಮಾತ್ರ, ನಮ್ಮ ಆರ್ಥಿಕ ಸುಧಾರಣೆ ಸಾಧ್ಯ. 'ಅರ್ಥವನ್ನ ಅರ್ಥವತ್ತಾಗಿ ನಿರ್ವಹಿಸದೇ ಇದ್ದಲ್ಲಿ ಜೀವನ ಅರ್ಥ ಹೀನ' ಎಂಬುದನ್ನರಿತು. ಚಟುವಟಿಕೆಗಳನ್ನು ಅರ್ಥವತ್ತಾಗಿಸಿಕೊಂಡಲ್ಲಿ ಮಾತ್ರ ಸ್ವಲ್ಪಮಟ್ಟಿನ ಸುರಕ್ಷತೆ ಸಾಧ್ಯ.
ಲೇಖಕರು: ಕೆ ಜಿ ಕೃಪಾಲ್ (ಆರ್ಥಿಕ ಅಂಕಣಕಾರರು, ಷೆೇರುಪೆೇಟೆ ಮಧ್ಯವರ್ತಿಗಳು, ತರಬೆೇತುದಾರರು ʼಷೆೇರುಪೆೇಟೆ ವಿಚಾರ ಮಂಟಪʼ ಸ್ಥಾಪಕ ಸಂಚಾಲಕರು)
Disclaimer: "ಆರ್ಥಿಕ ಸಾಕ್ಷರತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಷ್ಟೇ" ಈ ಲೇಖನವನ್ನು ಬರೆಯಲಾಗಿದೆ. ಇದು ಯಾವುದೇ ರೀತಿಯ ಷೇರುಗಳನ್ನು ಕೊಳ್ಳಲು ಪ್ರಚೋದಿಸುವುದಿಲ್ಲ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಚಿಂತನೆ , ವಿವೇಚನೆ, ಬಳಸಿಕೊಂಡು, ಅಗತ್ಯವೆನಿಸಿದರೆ ತಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ಸೂಕ್ತವಾಗಿ ನಿರ್ಧರಿಸಿ. ಯಾವುದೇ ರೀತಿಯ ಆಗುಹೋಗುಗಳಿಗೆ Zee Kannada News ಹಾಗೂ ಆರ್ಥಿಕ ಅಂಕಣಕಾರರು ಜವಾಬ್ದಾರಿಯಾಗಿರುವುದಿಲ್ಲ.