SOCIAL MEDIA

Newsletter

PARTNER SITES
Select Language Select State

ಕೇವಲ 3 ತಿಂಗಳಲ್ಲಿ ₹30 ಸಾವಿರ ಕುಸಿದ ಚಿನ್ನದ ಬೆಲೆ! ಬಂಗಾರದ ಮಹಾಕುಸಿತಕ್ಕೆ ಇಲ್ಲಿದೆ ಅಸಲಿ ಕಾರಣ

ಕಳೆದ ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹30 ಸಾವಿರದವರೆಗೆ ಕುಸಿದಿದೆ. ಆಗಸ್ಟ್‌ನಲ್ಲಿ ₹1.55 ಲಕ್ಷ ದಾಟಿದ್ದ 24 ಕ್ಯಾರೆಟ್ ಚಿನ್ನದ ದರದಲ್ಲಿ ಭಾರೀ ಕುಸಿತ ಕಂಡಿದೆ. ಮಧ್ಯಪ್ರಾಚ್ಯದ ಯುದ್ಧ, ಕಚ್ಚಾತೈಲ ಬೆಲೆ ಏರಿಕೆ, ಜಾಗತಿಕ ಹಣದುಬ್ಬರ ಮತ್ತು ರೂಪಾಯಿ ಮೌಲ್ಯದಲ್ಲಿನ ಚೇತರಿಕೆ ಬೆಲೆ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ಹೂಡಿಕೆ ತಜ್ಞ ಸಿ.ಎ.ರುದ್ರಮೂರ್ತಿ ತಿಳಿಸಿದ್ದಾರೆ. ಚಿನ್ನದಲ್ಲಿ ಹೂಡಿಕೆ ಮಾಡುವಾಗ ಸಂಪೂರ್ಣ ಹಣವನ್ನು ಒಂದೇ ಕಡೆ ಹೂಡಬಾರದು ಎಂದೂ ಅವರು ಸಲಹೆ ನೀಡಿದ್ದಾರೆ.

Written By Puttaraj K Alur
Published: Nov 23, 2026, 09:56 IST | Updated: Nov 23, 2026, 10:17 IST
Image Credit: Gold Rate
Join

Gold Price Crash: ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ನಿರಂತರ ಇಳಿಕೆ ಕಂಡುಬರುತ್ತಿದ್ದು, ಬಂಗಾರ ಖರೀದಿಸುವವರ ಗಮನ ಸೆಳೆಯುತ್ತಿದೆ. ಕಳೆದ ವರ್ಷವಷ್ಟೇ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ದರ ಇದೀಗ ಗಣನೀಯವಾಗಿ ಕುಸಿದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹27 ಸಾವಿರದಿಂದ ₹30 ಸಾವಿರದವರೆಗೆ ಇಳಿಕೆಯಾಗಿದೆ. ಚಿನ್ನದ ಬೆಲೆ ಕುಸಿತಕ್ಕೆ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿ, ಕಚ್ಚಾತೈಲ ಬೆಲೆ ಏರಿಕೆ, ಅಂತಾರಾಷ್ಟ್ರೀಯ ಬಡ್ಡಿದರಗಳ ಬದಲಾವಣೆ ಮತ್ತು ರೂಪಾಯಿ ಮೌಲ್ಯದಲ್ಲಿನ ಚೇತರಿಕೆ ಸೇರಿದಂತೆ ಹಲವು ಕಾರಣಗಳಿವೆ ಎಂದು ಹೂಡಿಕೆ ತಜ್ಞರು ತಿಳಿಸಿದ್ದಾರೆ.

ಚಿನ್ನದ ಬೆಲೆ ಇಳಿಕೆಗೆ ಮಧ್ಯಪ್ರಾಚ್ಯ ಯುದ್ಧ ಕಾರಣವೇ?

ಹೂಡಿಕೆ ತಜ್ಞ ಸಿ.ಎ.ರುದ್ರಮೂರ್ತಿ ಅವರ ಪ್ರಕಾರ, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಕಚ್ಚಾತೈಲದ ಬೆಲೆಗಳು ಹೆಚ್ಚಾಗಿವೆ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದುಬ್ಬರದ ಒತ್ತಡ ಹೆಚ್ಚಾಗಿದೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಡ್ಡಿದರಗಳೂ ಏರಿಕೆಯಾಗುತ್ತಿರುವುದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಯುದ್ಧದ ಪರಿಸ್ಥಿತಿಯಿಂದ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಬದಲಾವಣೆಗಳು ಅಮೂಲ್ಯ ಲೋಹಗಳ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ದಾಖಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ ಬೆಲೆಗೆ ಹೋಲಿಸಿದರೆ ಶೇ.35ರಷ್ಟು ಕುಸಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿದ್ದ ಬೆಲೆಗೆ ಹೋಲಿಸಿದರೆ ಚಿನ್ನದ ದರದಲ್ಲಿ ಶೇ.35ರಷ್ಟು ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಬೆಳ್ಳಿಯ ಬೆಲೆಯಲ್ಲಿಯೂ ದೊಡ್ಡ ಮಟ್ಟದ ಕುಸಿತ ದಾಖಲಾಗಿದ್ದು, ಫೆಬ್ರವರಿ ತಿಂಗಳ ಬೆಲೆಗೆ ಹೋಲಿಸಿದರೆ ಶೇ.65ರಷ್ಟು ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿನ ಈ ಬದಲಾವಣೆಗೆ ಕಚ್ಚಾತೈಲದ ಬೆಲೆ ಏರಿಕೆ, ಹಣದುಬ್ಬರ ಹಾಗೂ ಅಂತಾರಾಷ್ಟ್ರೀಯ ಬಡ್ಡಿದರಗಳಲ್ಲಿನ ಏರಿಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ

ಚಿನ್ನದ ಬೆಲೆ ಇಳಿಕೆಗೆ ರೂಪಾಯಿ ಮೌಲ್ಯದಲ್ಲಿನ ಚೇತರಿಕೆಯೂ ಒಂದು ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯವು ಯೆನ್ ಮತ್ತು ದಿನಾರ್‌ನಂತಹ ಕೆಲವು ಕರೆನ್ಸಿಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಆದರೆ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಹಿಂದೆ ಒಂದು ಡಾಲರ್‌ಗೆ ₹97ರಿಂದ ₹98ರವರೆಗೆ ಇದ್ದ ರೂಪಾಯಿ ಮೌಲ್ಯ ಇದೀಗ ₹92.50ಕ್ಕೆ ಬಂದಿದೆ. ಇದರಿಂದ ವಿದೇಶದಿಂದ ಚಿನ್ನ ಮತ್ತು ಬೆಳ್ಳಿಯನ್ನ ಆಮದು ಮಾಡಿಕೊಳ್ಳುವಾಗ ಪಾವತಿಸಬೇಕಾದ ಮೊತ್ತ ಕಡಿಮೆಯಾಗುತ್ತಿದೆ. ಈ ಬೆಳವಣಿಗೆಯೂ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಸಿ.ಎ.ರುದ್ರಮೂರ್ತಿ ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?

ನವೆಂಬರ್ 23ರ ಮಾಹಿತಿಯ ಆಧಾರದಲ್ಲಿ ಬೆಂಗಳೂರಿನಲ್ಲಿ ಚಿನ್ನದ ಅಂದಾಜು ದರ ಹೀಗಿವೆ:

- 24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹12,523 ಇದ್ದರೆ, ಪ್ರತಿ 10 ಗ್ರಾಂಗೆ ₹125,230 ಇದೆ 
- 22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹11,471 ಇದ್ದರೆ, ಪ್ರತಿ 10 ಗ್ರಾಂಗೆ ₹114,710 ಇದೆ.

(ಸೂಚನೆ: ಆಭರಣ ಮಳಿಗೆಗಳು ಮತ್ತು ದರ ಪ್ರಕಟಿಸುವ ವಿವಿಧ ಮೂಲಗಳ ಆಧಾರದ ಮೇಲೆ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.)

ಮೂರು ತಿಂಗಳಲ್ಲಿ ₹30 ಸಾವಿರದವರೆಗೆ ಇಳಿಕೆ

ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹1,55,000ರ ಗಡಿ ದಾಟಿತ್ತು. ನವೆಂಬರ್ 23ರ ವೇಳೆಗೆ ಅದು ₹125,230ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಆಗಸ್ಟ್‌ನಲ್ಲಿ ₹1,42,090 ಇದ್ದರೆ, ನವೆಂಬರ್ 23ರ ವೇಳೆಗೆ ₹114,710ಕ್ಕೆ ತಗ್ಗಿದೆ. ಅಂದರೆ ಕೇವಲ 90 ದಿನಗಳ ಅವಧಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸುಮಾರು ₹29,770 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸುಮಾರು ₹27,380 ಇಳಿಕೆಯಾಗಿದೆ.

ಹೂಡಿಕೆದಾರರಿಗೆ ತಜ್ಞರ ಸಲಹೆ ಏನು?

ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾಗಿರುವುದರಿಂದ ಹೂಡಿಕೆಗೆ ಅವಕಾಶವಿದೆ ಎಂದು ಸಿ.ಎ.ರುದ್ರಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇರುವ ಸಂಪೂರ್ಣ ಹಣವನ್ನ ಚಿನ್ನ ಮತ್ತು ಬೆಳ್ಳಿಯಲ್ಲೇ ಹೂಡಿಕೆ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಬಡ್ಡಿದರ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಬದಲಾವಣೆ ಸಂಭವಿಸಬಹುದು ಎಂದು ಅವರು ತಿಳಿಸಿದ್ದಾರೆ. ಹೂಡಿಕೆ ಮಾಡಲು ಬಯಸುವವರು ಚಿನ್ನದ ಬಾಂಡ್‌ಗಳನ್ನ ಉತ್ತಮ ಆಯ್ಕೆಯಾಗಿ ಪರಿಗಣಿಸಬಹುದು. ಇದರ ಜೊತೆಗೆ ರಿಯಲ್ ಎಸ್ಟೇಟ್ ಮತ್ತು ಷೇರುಪೇಟೆಯಲ್ಲಿಯೂ ಹೂಡಿಕೆ ಮಾಡುವ ಅವಕಾಶಗಳಿವೆ ಎಂದು ತಜ್ಞರು ಸೂಚಿಸಿದ್ದಾರೆ.

ಒಟ್ನಲ್ಲಿ ಕಳೆದ ಮೂರು ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಣನೀಯ ಇಳಿಕೆ ದಾಖಲಾಗಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಇದರ ಪರಿಣಾಮ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಬಡ್ಡಿದರಗಳು ಮತ್ತು ಜಾಗತಿಕ ಬೆಳವಣಿಗೆಗಳು ಚಿನ್ನದ ಮಾರುಕಟ್ಟೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರತ್ತ ಹೂಡಿಕೆದಾರರ ಗಮನವಿದೆ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES