SOCIAL MEDIA

Newsletter

PARTNER SITES
Select Language Select State

Kartik Purnima 2026: ನ.24ರಂದು ಪವಿತ್ರ ಹಬ್ಬ; ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!

2026ರ ಕಾರ್ತಿಕ ಪೂರ್ಣಿಮೆಯನ್ನ ನವೆಂಬರ್ 24ರಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ನದಿ ಸ್ನಾನ, ದೀಪದಾನ, ವಿಷ್ಣು-ಲಕ್ಷ್ಮಿ ಪೂಜೆ ಹಾಗೂ ದಾನ-ಧರ್ಮಗಳಿಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ತುಳಸಿ ಎಲೆ ಕೀಳುವುದು, ಮಾಂಸಾಹಾರ ಸೇವನೆ, ಕೂದಲು ಮತ್ತು ಉಗುರು ಕತ್ತರಿಸುವುದು ಸೇರಿದಂತೆ ಕೆಲವು ಕೆಲಸಗಳನ್ನ ಮಾಡಬಾರದು. ಸಂಜೆ ಮನೆಯಲ್ಲಿ ದೀಪ ಬೆಳಗಿಸಿ ಪೂಜೆ ಸಲ್ಲಿಸುವುದು ಶುಭವೆಂದು ಪರಿಗಣಿಸಲಾಗಿದೆ.

Written By Puttaraj K Alur
Published: Nov 17, 2026, 21:59 IST | Updated: Nov 17, 2026, 22:10 IST
Image Credit: Kartik Purnima
Join

Kartik Purnima 2026: ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ. ಅದರಲ್ಲೂ ಕಾರ್ತಿಕ ಮಾಸದ ಹುಣ್ಣಿಮೆಯ ದಿನವಾದ ಕಾರ್ತಿಕ ಪೂರ್ಣಿಮೆಯನ್ನ ಅತ್ಯಂತ ಪವಿತ್ರ ಹಾಗೂ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ಬಡವರಿಗೆ ದಾನ ನೀಡುವುದು ಮತ್ತು ದೀಪಗಳನ್ನ ಬೆಳಗಿಸುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಭಗವಾನ್ ವಿಷ್ಣು, ಪರಮೇಶ್ವರ ಹಾಗೂ ಮಹಾಲಕ್ಷ್ಮಿಯ ಆರಾಧನೆಗೂ ಈ ದಿನ ವಿಶೇಷ ಮಹತ್ವ ನೀಡಲಾಗುತ್ತದೆ.

2026ರ ಕಾರ್ತಿಕ ಪೂರ್ಣಿಮೆಯನ್ನ ನವೆಂಬರ್ 24ರ ಮಂಗಳವಾರದಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಕೆಲವು ಧಾರ್ಮಿಕ ಆಚರಣೆಗಳನ್ನ ಪಾಲಿಸುವುದರ ಜೊತೆಗೆ, ಕೆಲವು ಕೆಲಸಗಳನ್ನ ಮಾಡಬಾರದು ಎಂಬ ನಂಬಿಕೆಯೂ ಇದೆ. ಹಾಗಾದರೆ ಈ ವರ್ಷದ ಕಾರ್ತಿಕ ಪೂರ್ಣಿಮೆ ಯಾವಾಗ? ಪೂಜೆಗೆ ಶುಭ ಸಮಯ ಯಾವುದು? ಈ ದಿನ ಯಾವೆಲ್ಲಾ ಕೆಲಸಗಳನ್ನ ತಪ್ಪಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಕಾರ್ತಿಕ ಪೂರ್ಣಿಮೆ 2026 ಯಾವಾಗ?

ಪಂಚಾಂಗದ ಪ್ರಕಾರ, 2026ರ ಕಾರ್ತಿಕ ಪೂರ್ಣಿಮೆ ನವೆಂಬರ್ 24ರಂದು ಆಚರಿಸಲಾಗುತ್ತದೆ. ಹುಣ್ಣಿಮೆ ತಿಥಿಯು ನವೆಂಬರ್ 23ರ ರಾತ್ರಿ 11:42ಕ್ಕೆ ಆರಂಭವಾಗಿ, ನವೆಂಬರ್ 24ರ ರಾತ್ರಿ 8:23ಕ್ಕೆ ಮುಕ್ತಾಯಗೊಳ್ಳಲಿದೆ. ಸೂರ್ಯೋದಯದ ಸಮಯದಲ್ಲಿ ಇರುವ ತಿಥಿಯನ್ನ ಆಧರಿಸಿ ನವೆಂಬರ್ 24ರಂದು ಕಾರ್ತಿಕ ಪೂರ್ಣಿಮೆ ವ್ರತ ಹಾಗೂ ಧಾರ್ಮಿಕ ಆಚರಣೆಗಳನ್ನ ಕೈಗೊಳ್ಳಲಾಗುತ್ತದೆ. ಈ ದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಪವಿತ್ರ ಸ್ನಾನ ಮಾಡಿ, ದಾನ-ಧರ್ಮಗಳನ್ನ ನೆರವೇರಿಸುವುದು ಶ್ರೇಷ್ಠವೆಂದು ಹೇಳಲಾಗಿದೆ. ಸಂಜೆ ಚಂದ್ರೋದಯದ ಬಳಿಕ ದೀಪಗಳನ್ನ ಬೆಳಗಿಸುವುದಕ್ಕೂ ವಿಶೇಷ ಮಹತ್ವವಿದೆ. ನದಿ ಸ್ನಾನ, ದೀಪದಾನ ಹಾಗೂ ಬಡವರಿಗೆ ದಾನ ನೀಡುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ.

ಕಾರ್ತಿಕ ಪೂರ್ಣಿಮೆಯಂದು ಏನು ಮಾಡಬಾರದು?

ಧಾರ್ಮಿಕ ನಂಬಿಕೆಗಳು ಹಾಗೂ ಶಾಸ್ತ್ರಗಳ ಪ್ರಕಾರ, ಕಾರ್ತಿಕ ಪೂರ್ಣಿಮೆಯ ದಿನ ಕೆಲವು ಕೆಲಸಗಳನ್ನ ಮಾಡದಿರುವುದು ಉತ್ತಮವೆಂದು ಹೇಳಲಾಗುತ್ತದೆ. ಈ ದಿನ ಪಾಲಿಸಬೇಕಾದ ಪ್ರಮುಖ ನಿಯಮಗಳು ಹೀಗಿವೆ.

ತುಳಸಿ ಎಲೆಗಳನ್ನ ಕೀಳಬಾರದು: ಕಾರ್ತಿಕ ಪೂರ್ಣಿಮೆಯಂದು ತುಳಸಿ ಎಲೆಗಳನ್ನ ಕೀಳುವುದು ಅಥವಾ ತುಳಸಿ ಗಿಡಕ್ಕೆ ಹಾನಿ ಮಾಡುವುದು ಸೂಕ್ತವಲ್ಲ ಎಂಬ ನಂಬಿಕೆಯಿದೆ. ಬದಲಾಗಿ ಸಂಜೆ ತುಳಸಿ ಕಟ್ಟೆಯ ಬಳಿ ತುಪ್ಪದ ದೀಪವನ್ನ ಬೆಳಗಿಸಿ ಪೂಜೆ ಸಲ್ಲಿಸುವುದು ಉತ್ತಮವೆಂದು ಹೇಳಲಾಗಿದೆ.

ಮಾಂಸಾಹಾರ ಮತ್ತು ಮದ್ಯ ಸೇವನೆ ಬೇಡ: ಈ ಪವಿತ್ರ ದಿನದಂದು ಮಾಂಸ, ಮೀನು, ಮೊಟ್ಟೆ, ಮದ್ಯ ಹಾಗೂ ತಂಬಾಕು ಸೇರಿದಂತೆ ಯಾವುದೇ ಮಾದಕ ವಸ್ತುಗಳನ್ನ ಸೇವಿಸಬಾರದು ಎಂದು ಧಾರ್ಮಿಕ ನಿಯಮಗಳಲ್ಲಿ ತಿಳಿಸಲಾಗಿದೆ. ಅಡುಗೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನ ಬಳಸುವುದನ್ನೂ ತಪ್ಪಿಸುವುದು ಉತ್ತಮವೆಂದು ಹೇಳಲಾಗಿದೆ.

ಬೆಳ್ಳಿ ಮತ್ತು ಹಾಲನ್ನ ದಾನ ಮಾಡಬಾರದು: ಶಾಸ್ತ್ರಗಳ ಪ್ರಕಾರ, ಹುಣ್ಣಿಮೆಯ ದಿನ ಬೆಳ್ಳಿಯ ಪಾತ್ರೆಗಳು ಅಥವಾ ಹಾಲನ್ನ ದಾನ ಮಾಡುವುದನ್ನ ತಪ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಚಂದ್ರ ದೋಷ ಉಂಟಾಗಬಹುದು ಎಂಬ ನಂಬಿಕೆಯಿದೆ.

ಮನೆಯನ್ನ ಕತ್ತಲೆಯಲ್ಲಿಡಬಾರದು: ಕಾರ್ತಿಕ ಪೂರ್ಣಿಮೆಯಂದು ಮನೆಯನ್ನ ಸಂಪೂರ್ಣವಾಗಿ ಬೀಗ ಹಾಕಿ ಖಾಲಿ ಬಿಡಬಾರದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಸಂಜೆ ಮನೆಯ ಯಾವುದೇ ಕೋಣೆ ಅಥವಾ ಮುಖ್ಯ ದ್ವಾರ ಕತ್ತಲೆಯಲ್ಲಿರದಂತೆ ದೀಪಗಳನ್ನ ಬೆಳಗಿಸಬೇಕು. ಮನೆಯಲ್ಲಿ ಕತ್ತಲೆ ಇದ್ದರೆ ಲಕ್ಷ್ಮಿ ದೇವಿಯು ಮುನಿಸಿಕೊಳ್ಳುತ್ತಾಳೆ ಎಂಬ ಧಾರ್ಮಿಕ ನಂಬಿಕೆಯಿದೆ.

ಬಡವರನ್ನ ಖಾಲಿ ಕೈಯಲ್ಲಿ ಕಳುಹಿಸಬಾರದು: ಈ ಶುಭ ದಿನದಂದು ಮನೆ ಬಾಗಿಲಿಗೆ ಬರುವ ಬಡವರು, ಹಸಿದವರು, ಅಸಹಾಯಕರು ಅಥವಾ ಭಿಕ್ಷುಕರನ್ನ ಬರಿಗೈಯಲ್ಲಿ ವಾಪಸ್ ಕಳುಹಿಸಬಾರದು. ಅವರಿಗೆ ಸಾಧ್ಯವಾದಷ್ಟು ಆಹಾರ ಅಥವಾ ನೀರನ್ನ ನೀಡಿ ಗೌರವಿಸಬೇಕು ಎಂದು ಹೇಳಲಾಗಿದೆ.

ಕೂದಲು ಮತ್ತು ಉಗುರು ಕತ್ತರಿಸಬಾರದು: ಕಾರ್ತಿಕ ಪೂರ್ಣಿಮೆಯ ದಿನ ಕ್ಷೌರ ಮಾಡಿಸಿಕೊಳ್ಳುವುದು, ಕೂದಲು ಅಥವಾ ಉಗುರುಗಳನ್ನ ಕತ್ತರಿಸುವುದನ್ನ ನಿಷೇಧಿಸಲಾಗಿದೆ ಎಂಬ ನಂಬಿಕೆಯಿದೆ.

ಕಪ್ಪು ಹಾಗೂ ಹರಿದ ಬಟ್ಟೆ ಧರಿಸಬಾರದು: ಈ ಪವಿತ್ರ ದಿನದಂದು ಕಪ್ಪು, ಕೊಳಕು ಅಥವಾ ಹರಿದ ಬಟ್ಟೆಗಳನ್ನ ಧರಿಸುವುದನ್ನ ತಪ್ಪಿಸಬೇಕು. ಬದಲಾಗಿ ಶುಭ್ರವಾದ ಬಟ್ಟೆಗಳನ್ನ ಧರಿಸುವುದು ಉತ್ತಮವೆಂದು ಹೇಳಲಾಗಿದೆ. ಹಳದಿ, ಕೆಂಪು ಮತ್ತು ಗುಲಾಬಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಒಟ್ನಲ್ಲಿ 2026ರ ಕಾರ್ತಿಕ ಪೂರ್ಣಿಮೆಯು ನವೆಂಬರ್ 24ರಂದು ನಡೆಯಲಿದ್ದು, ಈ ದಿನ ನದಿ ಸ್ನಾನ, ದಾನ, ದೀಪದಾನ ಹಾಗೂ ವಿಷ್ಣು-ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಕೆಲವು ನಿಯಮಗಳನ್ನ ಪಾಲಿಸುವುದರ ಜೊತೆಗೆ ಮೇಲೆ ತಿಳಿಸಿದ ಕೆಲಸಗಳನ್ನ ತಪ್ಪಿಸುವುದು ಶುಭಕರವೆಂದು ಪರಿಗಣಿಸಲಾಗಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES