ಕನಸಿನಲ್ಲಿ ಹಣ ಕಳೆದುಕೊಂಡಿದ್ದೀರಾ? ಗಾಬರಿಯಾಗಬೇಡಿ; ಪರ್ಸ್, ನಾಣ್ಯ, ಹಣ ಮರಳಿ ಸಿಕ್ಕರೆ ಏನರ್ಥ?
ಕನಸಿನಲ್ಲಿ ಹಣ ಕಳೆದುಕೊಳ್ಳುವುದು ಯಾವಾಗಲೂ ಅಶುಭ ಎಂಬುದಿಲ್ಲ. ಸ್ವಪ್ನಶಾಸ್ತ್ರದ ನಂಬಿಕೆಗಳ ಪ್ರಕಾರ, ಪರ್ಸ್ ಅಥವಾ ಹಣ ಕಳೆದುಕೊಳ್ಳುವುದು ಆರ್ಥಿಕ ಚಿಂತೆಗಳ ಸಂಕೇತವಾಗಿರಬಹುದು. ಆದರೆ ಕಳೆದುಕೊಂಡ ಹಣ ಮತ್ತೆ ಸಿಗುವ ಕನಸು ಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದು ಕಳೆದುಹೋದ ಅವಕಾಶ ಅಥವಾ ಸಮಸ್ಯೆ ಮತ್ತೆ ಸರಿಯಾಗುವ ಸಂಕೇತ ಎಂದೂ ನಂಬಲಾಗಿದೆ.
Money Lost Dream Meaning: ನಾವು ನಿದ್ರೆಯಲ್ಲಿರುವಾಗ ಕಾಣುವ ಕನಸುಗಳು ಕೆಲವೊಮ್ಮೆ ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಹಣ, ಪರ್ಸ್, ನಾಣ್ಯ ಅಥವಾ ಆಭರಣಗಳಿಗೆ ಸಂಬಂಧಿಸಿದ ಕನಸುಗಳು ಬಂದಾಗ, ಇದರ ಹಿಂದೆ ಏನಾದರೂ ವಿಶೇಷ ಅರ್ಥವಿದೆಯೇ ಎಂಬ ಕುತೂಹಲ ಮೂಡುವುದು ಸಹಜ. ಸ್ವಪ್ನಶಾಸ್ತ್ರದ ನಂಬಿಕೆಗಳ ಪ್ರಕಾರ, ಕನಸಿನಲ್ಲಿ ಹಣ ಕಳೆದುಕೊಳ್ಳುವುದು ಪ್ರತಿಬಾರಿಯೂ ಅಶುಭ ಎಂದೇ ಅರ್ಥವಲ್ಲ. ಕನಸಿನಲ್ಲಿ ನಡೆದ ಘಟನೆ, ಹಣದ ಸ್ವರೂಪ ಹಾಗೂ ನಂತರ ಏನಾಯಿತು ಎಂಬುದರ ಆಧಾರದ ಮೇಲೆ ಅದರ ಅರ್ಥ ಬದಲಾಗುತ್ತದೆ ಎನ್ನಲಾಗುತ್ತದೆ.
ಕನಸಿನಲ್ಲಿ ಹಣ ಕಳೆದುಕೊಳ್ಳುವುದು
ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಣ ಕಳೆದುಕೊಳ್ಳುವುದು ಕೆಲವೊಮ್ಮೆ ಆರ್ಥಿಕ ವಿಚಾರಗಳ ಬಗ್ಗೆ ಇರುವ ಆತಂಕವನ್ನ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಹಣಕಾಸಿನ ಸಮಸ್ಯೆ, ಹೆಚ್ಚುತ್ತಿರುವ ಖರ್ಚು ಅಥವಾ ಭವಿಷ್ಯದ ಬಗ್ಗೆ ಇರುವ ಚಿಂತೆಗಳು ಇಂತಹ ಕನಸುಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯೂ ಇದೆ. ಹಣ ಕಳೆದುಹೋಗುತ್ತಿರುವುದನ್ನ ಮಾತ್ರ ಕನಸಿನಲ್ಲಿ ಕಂಡರೆ, ಮುಂದಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕೆಂಬ ಸೂಚನೆ ಎಂದು ಕೆಲವರು ಪರಿಗಣಿಸುತ್ತಾರೆ. ವಿಶೇಷವಾಗಿ ಅನಗತ್ಯ ಖರ್ಚು ಮತ್ತು ಹಣಕಾಸಿನ ನಿರ್ಧಾರಗಳಲ್ಲಿ ಜಾಗರೂಕರಾಗಿರುವುದು ಒಳ್ಳೆಯದು.
ಪರ್ಸ್ ಅಥವಾ ವಾಲೆಟ್ ಕಳೆದುಕೊಂಡರೆ?
ಕನಸಿನಲ್ಲಿ ಹಣ ತುಂಬಿರುವ ಪರ್ಸ್ ಅಥವಾ ವಾಲೆಟ್ ಕಳೆದುಕೊಳ್ಳುವುದು ಸ್ವಪ್ನಶಾಸ್ತ್ರದಲ್ಲಿ ಸಾಮಾನ್ಯವಾಗಿ ಶುಭ ಸಂಕೇತವಾಗಿ ಪರಿಗಣಿಸಲಾಗುವುದಿಲ್ಲ. ಇದು ವ್ಯಕ್ತಿಯೊಳಗಿನ ಭದ್ರತೆಯ ಕೊರತೆ, ಆತಂಕ ಅಥವಾ ಯಾವುದೋ ಪ್ರಮುಖ ವಿಷಯ ಕೈತಪ್ಪುವ ಭಯವನ್ನ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಕೆಲವು ವ್ಯಾಖ್ಯಾನಗಳ ಪ್ರಕಾರ, ಕೆಲಸ ಅಥವಾ ವ್ಯವಹಾರದಲ್ಲಿ ನಿರ್ಲಕ್ಷ್ಯದಿಂದ ನಷ್ಟ ಉಂಟಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡುವ ಕನಸಾಗಿಯೂ ಇದನ್ನ ನೋಡಲಾಗುತ್ತದೆ.
ಕಳೆದುಕೊಂಡ ಹಣ ಮರಳಿ ಸಿಕ್ಕರೆ?
ಇದು ವಿಶೇಷವಾಗಿ ಗಮನ ಸೆಳೆಯುವ ಕನಸು. ಕನಸಿನಲ್ಲಿ ಹಣ ಕಳೆದುಕೊಂಡ ನಂತರ ಅದೇ ಹಣ ಮತ್ತೆ ಸಿಕ್ಕರೆ, ಸ್ವಪ್ನಶಾಸ್ತ್ರದ ಪ್ರಕಾರ ಇದನ್ನ ಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಯಾವುದಾದರೂ ಕೆಲಸ ಅರ್ಧಕ್ಕೆ ನಿಂತಿದ್ದರೆ ಅದು ಮತ್ತೆ ಸರಿಯಾಗಬಹುದು, ಕಳೆದುಕೊಂಡ ಅವಕಾಶ ಮರಳಿ ದೊರೆಯಬಹುದು ಅಥವಾ ಹಿಂದೆ ಉಂಟಾದ ನಷ್ಟವನ್ನ ಸರಿಪಡಿಸುವ ಅವಕಾಶ ಸಿಗಬಹುದು ಎಂಬ ಅರ್ಥವನ್ನ ಇದಕ್ಕೆ ನೀಡಲಾಗುತ್ತದೆ. ಕೆಲವೊಮ್ಮೆ ಅಪ್ರತೀಕ್ಷಿತವಾಗಿ ಹಣ ದೊರೆಯುವ ಸಾಧ್ಯತೆಯ ಸಂಕೇತ ಎಂದೂ ನಂಬಲಾಗುತ್ತದೆ.
ಕನಸಿನಲ್ಲಿ ನಾಣ್ಯ ಕಳೆದುಕೊಂಡರೆ?
ನೋಟುಗಳ ಬದಲಿಗೆ ನಾಣ್ಯ ಕಳೆದುಕೊಳ್ಳುವ ಕನಸು ಕಂಡರೆ, ಇದನ್ನು ಸಣ್ಣಪುಟ್ಟ ಸಮಸ್ಯೆಗಳು ಅಥವಾ ವಿವಾದಗಳ ಬಗ್ಗೆ ಎಚ್ಚರಿಕೆಯ ಸಂಕೇತ ಎಂದು ಕೆಲವು ಸ್ವಪ್ನಶಾಸ್ತ್ರದ ವ್ಯಾಖ್ಯಾನಗಳು ಹೇಳುತ್ತವೆ. ಸಣ್ಣ ವಿಷಯಗಳು ಮಾನಸಿಕ ನೆಮ್ಮದಿಗೆ ತೊಂದರೆ ನೀಡಬಹುದು ಎಂಬ ಸೂಚನೆಯಾಗಿರಬಹುದು ಎನ್ನಲಾಗುತ್ತದೆ. ಅದೇ ರೀತಿ, ಕನಸಿನಲ್ಲಿ ನಾಣ್ಯಗಳ ಶಬ್ದ ಕೇಳಿಸುವುದು ಅಥವಾ ನಾಣ್ಯಗಳ ನಡುವೆ ಇರುವಂತಹ ದೃಶ್ಯಗಳಿಗೂ ವಿವಿಧ ಸ್ವಪ್ನಶಾಸ್ತ್ರದ ಅರ್ಥಗಳನ್ನ ನೀಡಲಾಗುತ್ತದೆ. ಕೆಲವು ವ್ಯಾಖ್ಯಾನಗಳಲ್ಲಿ ಇವುಗಳನ್ನ ಆರ್ಥಿಕ ಎಚ್ಚರಿಕೆಯ ಸಂಕೇತಗಳಾಗಿ ಪರಿಗಣಿಸಲಾಗಿದೆ.
ಮನೋವಿಜ್ಞಾನದ ದೃಷ್ಟಿಯಲ್ಲಿ ಏನು?
ಕನಸುಗಳಿಗೆ ಸ್ವಪ್ನಶಾಸ್ತ್ರ ನೀಡುವ ಅರ್ಥಗಳ ಜೊತೆಗೆ, ಮನೋವಿಜ್ಞಾನವು ಅವುಗಳನ್ನ ಬೇರೆ ರೀತಿಯಲ್ಲಿ ನೋಡುತ್ತದೆ. ಹಣಕ್ಕೆ ಸಂಬಂಧಿಸಿದ ಕನಸುಗಳು ವ್ಯಕ್ತಿಯ ನಿಜ ಜೀವನದ ಹಣಕಾಸಿನ ಚಿಂತೆ, ಭವಿಷ್ಯದ ಆತಂಕ, ನಿಯಂತ್ರಣ ಕಳೆದುಕೊಳ್ಳುವ ಭಾವನೆ ಅಥವಾ ಅಸುರಕ್ಷಿತ ಮನಸ್ಥಿತಿಯ ಪ್ರತಿಬಿಂಬವಾಗಿರಬಹುದು. ಹೀಗಾಗಿ ಕನಸಿನಲ್ಲಿ ಹಣ ಕಳೆದುಕೊಂಡಿದ್ದೀರಿ ಎಂಬ ಕಾರಣಕ್ಕೆ ಭಯಪಡುವ ಅಗತ್ಯವಿಲ್ಲ. ಕನಸುಗಳು ಪ್ರತಿಯೊಬ್ಬರಿಗೂ ಒಂದೇ ರೀತಿಯ ಅರ್ಥ ಹೊಂದಿರಬೇಕೆಂದಿಲ್ಲ.
ಒಟ್ನಲ್ಲಿ ಕನಸಿನಲ್ಲಿ ಹಣ ಕಳೆದುಕೊಳ್ಳುವುದು ಯಾವಾಗಲೂ ಅಶುಭ ಎಂಬುದಿಲ್ಲ. ಹಣ ಕಳೆದುಹೋಗಿ ಮತ್ತೆ ಸಿಗುವ ಕನಸನ್ನ ಸ್ವಪ್ನಶಾಸ್ತ್ರದಲ್ಲಿ ಶುಭ ಸೂಚನೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಇವೆಲ್ಲವೂ ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಆಧಾರಿತ ವ್ಯಾಖ್ಯಾನಗಳಾಗಿದ್ದು, ಇವುಗಳನ್ನ ಖಚಿತ ಭವಿಷ್ಯವಾಣಿ ಎಂದು ಪರಿಗಣಿಸಬಾರದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)