PM-RAHAT ಯೋಜನೆ ಎಂದರೇನು? ಇದನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬಹುದು? ಇಲ್ಲಿದೆ ಮಹತ್ವದ ಮಾಹಿತಿ
PM-RAHAT ಯೋಜನೆಯು ರಸ್ತೆ ಅಪಘಾತಕ್ಕೀಡಾದವರಿಗಾಗಿ ಆರಂಭಿಸಲಾಗಿರುವ ನಗದು ರಹಿತ ಚಿಕಿತ್ಸೆ ಸೌಲಭ್ಯವನನು ಒದಗಿಸುವ ಯೋಜನೆ ಆಗಿದೆ.
PM-RAHAT Yojana: ಬಹುತೇಕ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಸರಿಯಾಗಿ ಚಿಕಿತ್ಸೆ ಸಿಗದೆ ಜೀವ ಕಳೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ʼರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆʼಯನ್ನು ಒದಗಿಸುತ್ತದೆ. ಇದಕ್ಕೆ "ಪ್ರಧಾನ ಮಂತ್ರಿ - ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸೆ (PM-RAHAT) ಯೋಜನೆ" ಹೆಸರಿಡಲಾಗಿದೆ. ಏನಿದು PM-RAHAT ಯೋಜನೆ, ಇದು ಯಾವಾಗ ಆರಂಭವಾಯಿತು? ಇದರಿಂದ ಏನು ಪ್ರಯೋಜನ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ವಾಸ್ತವವಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹಿಂದೆ "ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆ" ಅನ್ನು ಆರಂಭಿಸಿತ್ತು. 2026ರ ಆರಂಭದಲ್ಲಿ ಮೋಟಾರು ವಾಹನ ಕಾಯ್ದೆ, 1988 ರ ಅಡಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ಈ ಯೋಜನೆಗೆ "ಪ್ರಧಾನ ಮಂತ್ರಿ - ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸೆ (PM-RAHAT) ಯೋಜನೆ" ಎಂದು ಮರುನಾಮಕರಣ ಮಾಡಲಾಗಿದೆ. ಈ ತಿದ್ದುಪಡಿಯು ಯೋಜನೆಯ ಹೆಸರಿಗೆ ಸಂಬಂಧಿಸಿದೆ. ಪರಿಷ್ಕೃತ ಯೋಜನೆಯನ್ನು ಈಗ "ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ (ತಿದ್ದುಪಡಿ) ಯೋಜನೆ, 2026" ಎಂದು ಕರೆಯಲಾಗುತ್ತದೆ.
ಏನಿದು PM-RAHAT ಯೋಜನೆ:
PM-RAHAT ಯೋಜನೆಯು ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಗಳಲ್ಲಿ ನಯಾ ಪೈಸೆ ಖರ್ಚಿಲ್ಲದಂತೆ ನಗದು ರಹಿತವಾಗಿ ಚಿಕಿತ್ಸಾ ಸೌಲಭ್ಯವನ್ನು ನೀಡುವ ಮಹತ್ವದ ಯೋಜನೆ ಆಗಿದೆ.
PM-RAHAT ಯೋಜನೆ ಅನ್ನು ಆರಂಭಿಸಲು ಕಾರಣ ಏನು?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ರಸ್ತೆ ಅಪಘಾತ (Road Accident) ಸಂಭವಿಸಿದಾಗ ಸಕಾಲಿಕ ಚಿಕಿತ್ಸೆ ದೊರೆಯದೇ ಹೆಚ್ಚಿನ ಮಂದಿ ಸಾವಿಗೀಡಾಗುತ್ತಾರೆ. ವಾಸ್ತವವಾಗಿ, ರಸ್ತೆ ಅಪಘಾತ ಸಂಭವಿಸಿದ ಮೊದಲ ತಾಸನ್ನು ʼಗೋಲ್ಡನ್ ಅವರ್ʼ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೆ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಚಿಕಿತ್ಸೆ ಪಡೆಯಲು ಹಣ ಒಂದು ತೊಡಕಾಗಬಾರದು ಎಂದ ಉದ್ದೇಶದಿಂದ ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತವಾಗಿ ಚಿಕಿತ್ಸೆ ನೀಡಲು PM-RAHAT ಯೋಜನೆಯನ್ನು ಆರಂಭಿಸಲಾಗಿದೆ.
ರಸ್ತೆ ಅಪಘಾತದ ಸಂದರ್ಭದಲ್ಲಿ ತುರ್ತು ಸಂಖ್ಯೆಗೆ ಕರೆ ಮಾಡಿದರೆ ತ್ವರಿತ ಚಿಕಿತ್ಸೆ:
PM-RAHAT ಯೋಜನೆಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ರಸ್ತೆ ಅಪಘಾತದ ಸಂದರ್ಭದಲ್ಲಿ ಸಂತ್ರಸ್ತರು ಅಥವಾ ಅವರ ಜೊತೆಗಿರುವ ಯಾರಾದರೂ 112 ತುರ್ತು ಸಹಾಯವಾಣಿ ನಂಬರ್‌ಗೆ ಕರೆ ಮಾಡಿದರೆ ಈ ಕರೆಯು ನೇರವಾಗಿ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS)ಗೆ ಸಂಪರ್ಕಗೊಳ್ಳುತ್ತದೆ. ಇದರ ಸಹಾಯದಿಂದ ಅಪಘಾತ ಸಂಭವಿಸಿರುವ ಸ್ಥಳಕ್ಕೆ ಹತ್ತಿರದ ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್‌ಗೆ ವೇಗವಾಗಿ ಸಂಪರ್ಕ ಕಲ್ಪಿಸಲು ನೆರವಾಗುತ್ತದೆ. ಜೊತೆಗೆ ರಸ್ತೆ ಅಪಘಾತಕ್ಕೀಡಾದ ಸಂತ್ರಸ್ತರಿಗೆ ಸಾಧ್ಯವಾದಷ್ಟು ಬೇಗ ಅಗತ್ಯ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ.
PM-RAHAT ಯೋಜನೆ ಉದ್ದೇಶ ಏನು?
PM-RAHAT ಯೋಜನೆಯ ಉದ್ದೇಶ ಸ್ಪಷ್ಟವಾಗಿದ್ದು, ರಸ್ತೆ ಅಪಘಾತದಂತಹ ದುರಂತಗಳು ಸಂಭವಿಸಿದಾಗ ಚಿಕಿತ್ಸೆ ಪಡೆಯಲು ಹಣ ಅಡ್ಡಿ ಆಗಬಾರದು. ಸರಿಯಾದ ಸಮಯಕ್ಕೆ ಅಪಘಾತಕ್ಕೀಡಾದ ಸಂತ್ರಸ್ತರಿಗೆ ಚಿಕಿತ್ಸೆ ದೊರೆಯುವಂತಾಗಬೇಕು ಮತ್ತು ಗರಿಷ್ಠ ಜೀವವನ್ನು ಉಳಿಸಬೇಕು ಎಂಬುದಾಗಿದೆ.
PM-RAHAT ಯೋಜನೆಯ ಪ್ರಯೋಜನ ಯಾರಿಗೆ ಸಿಗುತ್ತೆ?
PM-RAHAT ಯೋಜನೆಯ ಪ್ರಯೋಜನವು ಕೇವಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾದ ಸಂತ್ರಸ್ತರಿಗೆ ಮಾತ್ರವಲ್ಲ, ರಾಷ್ಟ್ರೀಯ ಹೆದ್ದಾರಿಯಲ್ಲಾಗಲಿ, ರಾಜ್ಯ ರಸ್ತೆಯಲ್ಲಾಗಲಿ ಅಥವಾ ನಗರದ ಬೀದಿಯಲ್ಲಾಗಲಿ ಎಲ್ಲಾ ರೀತಿಯ ರಸ್ತೆ ಅಪಘಾತಗಳನ್ನು ಕೂಡ ಈ ಯೋಜನೆ ಒಳಗೊಳ್ಳುತ್ತದೆ.
ಯಾವುದೇ ವ್ಯಕ್ತಿ ರಸ್ತೆ ಅಪಘಾತಕ್ಕೆ ಬಲಿಯಾದರೆ ಅವರು 1.5 ಲಕ್ಷ ರೂಪಾಯಿವರೆಗಿನ ಚಿಕಿತ್ಸೆಯನ್ನು ನಗದು ರಹಿತವಾಗಿ ಪಡೆಯಲು ಕೇಂದ್ರ ಸರ್ಕಾರ ನೆರವಾಗುತ್ತದೆ. ಇದರಿಂದಾಗಿ ಯಾರೇ ರಸ್ತೆ ಅಪಘಾತಕ್ಕೆ ಬಲಿಯಾದರೂ ಆರಂಭಿಕ ನಿರ್ಣಾಯಕ ಚಿಕಿತ್ಸೆಗಾಗಿ ಅವರ ಕುಟುಂಬ ತಕ್ಷಣ ಹಣ ಹೊಂದಿಸುವ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ. ಆದಾಗ್ಯೂ, ರಸ್ತೆ ಅಪಘಾತ ಸಂಭವಿಸಿದ ದಿನಾಂಕದಿಂದ ಏಳು ದಿನಗಳವರೆಗೆ ಮಾತ್ರ PM-RAHAT ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
PM-RAHAT ಯೋಜನೆ ಅಡಿ ಏನೆಲ್ಲಾ ಚಿಕಿತ್ಸೆಗಳು ಸಿಗಲಿವೆ?
ಮೊದಲೇ ತಿಳಿಸಿದಂತೆ ಅಪಘಾತಕ್ಕೆ ಒಳಗಾದ ಸಂತ್ರಸ್ತರಿಗೆ PM-RAHAT ಯೋಜನೆ ಅಡಿಯಲ್ಲಿ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆಯ ಪ್ರಯೋಜನ ಲಭ್ಯವಾಗಲಿದೆ. ಇದರಡಿ, ಆರಂಭಿಕ ಚಿಕಿತ್ಸೆಗೆ, ಅಂದರೆ ರೋಗಿಯನ್ನು ಸ್ಥಿರಗೊಳಿಸಲು ವಿಭಿನ್ನ ಸಮಯಾವಧಿಗಳನ್ನು ನಿಗದಿಪಡಿಸಲಾಗಿದೆ. ಅಪಘಾತ ಸಂತ್ರಸ್ತನ ಸ್ಥಿತಿ ತೀವ್ರವಾಗಿಲ್ಲದಿದ್ದರೆ 24 ಗಂಟೆಗಳವರೆಗೆ ಸ್ಥಿರೀಕರಣ ಚಿಕಿತ್ಸೆ ನೀಡಲಾಗುತ್ತದೆ. ಒಂದೊಮ್ಮೆ, ಅಪಘಾತಕ್ಕೀಡಾದ ವ್ಯಕ್ತಿ ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಅವರು ಬದುಕುಳಿಯುವುದು ಕಷ್ಟ ಎಂಬ ಸ್ಥಿತಿಯಲ್ಲಿದ್ದರೆ ಅಂತಹ ಸಂದರ್ಭದಲ್ಲಿ 48 ಗಂಟೆಗಳ ಕಾಲ ಪ್ರಥಮ ಚಿಕಿತ್ಸೆ ಮತ್ತು ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದಾಗ್ಯೂ, ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು, ಪೊಲೀಸರಿಂದ ದೃಢೀಕರಣವನ್ನು ಪಡೆಯುವುದು ಅವಶ್ಯಕವಾಗಿದೆ. ಆದರೆ, ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯ ಮೂಲಕ ಜರುಗುವುದರಿಂದ ಯಾವುದೇ ವಿಳಂಬವಿಲ್ಲದೆ ಚಿಕಿತ್ಸೆ ದೊರೆಯಲಿದೆ.
PM-RAHAT ಯೋಜನೆಯಲ್ಲಿ ಕ್ಲೈಮ್ ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸುತ್ತದೆ?
PM-RAHAT ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಈ ಯೋಜನೆ ಅಡಿಯಲ್ಲಿ ಅಪಘಾತದ ಬಗ್ಗೆ ವರದಿ ಮಾಡುವುದರಿಂದ ಹಿಡಿದು ಆಸ್ಪತ್ರೆಯ ಬಿಲ್ ಪಾವತಿಯವರೆಗೆ ಎಲ್ಲವೂ ಡಿಜಿಟಲ್ ವೇದಿಕೆಯಲ್ಲೇ ನಡೆಯುತ್ತದೆ. ಈ ಪ್ರಕ್ರಿಯೆಗಾಗಿ ಎಲೆಕ್ಟ್ರಾನಿಕ್ ವಿವರವಾದ ಅಪಘಾತ ವರದಿ (eDAR) ಮತ್ತು ವಹಿವಾಟು ನಿರ್ವಹಣಾ ವ್ಯವಸ್ಥೆ (TMS 2.0) ಗಳನ್ನೇ ಬಳಸಲಾಗುತ್ತದೆ. ಹಾಗಾಗಿ, ಪೊಲೀಸರು ಸಹ ನಿಗದಿತ ಸಮಯದೊಳಗೆ ಆನ್‌ಲೈನ್‌ನಲಿ ದೃಢೀಕರಿಸಬೇಕಾಗುತ್ತದೆ. ಈ ಸಮಯವು ಸಾಮಾನ್ಯ ಪ್ರಕರಣಗಳಲ್ಲಿ 24 ಗಂಟೆಗಳ ಒಳಗೆ ಮತ್ತು ಗಂಭೀರ ಪ್ರಕರಣಗಳಲ್ಲಿ 48 ಗಂಟೆಗಳ ಒಳಗೆ ಇರಲಿದೆ. ಬಳಿಕ ಮೋಟಾರು ವಾಹನ ಅಪಘಾತ ನಿಧಿಯಿಂದ (MVAF) ಅಪಘಾತಕ್ಕೀಡಾದವರ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಗೆ ಪಾವತಿಸಲಾಗುತ್ತದೆ.